More

    ಸಿಕ್ಕವರಿಗೆ ಸೀರುಂಡೆಯಾದ ತಾಡಪತ್ರಿಗಳು; ಕುಷ್ಟಗಿಯಲ್ಲಿ ಕೃಷಿ ಅಧಿಕಾರಿ-ರೈತರ ನಡುವೆ ವಾಗ್ವಾದ

    ಕುಷ್ಟಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತಾಡಪತ್ರಿ ಖರೀದಿಸಲು ರೈತರು ಮುಗಿಬಿದ್ದ ದೃಶ್ಯ ಬುಧವಾರ ಕಂಡುಬಂತು. ಸರ್ಕಾರದ ಸಹಾಯಧನದಲ್ಲಿ ತಾಡಪತ್ರಿಗಳನ್ನು ಮಂಗಳವಾರದಿಂದ ವಿತರಿಸುತ್ತಿದ್ದು, ಒಂದೇ ದಿನದಲ್ಲಿ ಖಾಲಿಯಾಗಿದ್ದಕ್ಕೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ರೈತರಿಗೆಂದು 2020-21ನೇ ಸಾಲಿನ ಯೋಜನೆ ಅಡಿ ಶೇ.50 ಸಹಾಯಧನದಲ್ಲಿ ಒಟ್ಟು 440 ತಾಡಪತ್ರಿ ಪೂರೈಕೆಯಾಗಿದ್ದವು. ರೈತರ ಸಂಖ್ಯೆಗಿಂತ ಕಡಿಮೆ ಪೂರೈಕೆಯಾಗಿದ್ದರಿಂದ ಸಿಕ್ಕವರಿಗೆ ಸೀರುಂಡೆ ಎಂಬಂತೆ ಬಹುತೇಕ ರೈತರು ಯೋಜನೆಯಿಂದ ವಂಚಿತರಾದರು.

    ನೋಂದಣಿಗೆ ಪಟ್ಟು: ತಾಡಪತ್ರಿ ಪಡೆಯುವ ರೈತರ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ನೋಂದಣಿ ಮಾಡಿದ ನಂತರ ತಾಡಪತ್ರಿ ನೀಡಲಾಗುತ್ತಿದೆ. ಯೋಜನೆಯಿಂದ ವಂಚಿತರಾದ ರೈತರು ನೋಂದಣಿಯಾದರೂ ಮಾಡುವಂತೆ ಪಟ್ಟು ಹಿಡಿದರು. ಈ ವೇಳೆ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ನೋಂದಣಿಗೆ ಮುಗಿಬಿದ್ದ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ತಾಡಪತ್ರಿಯೊಂದರ ಬೆಲೆ 2,142ರೂ. ಇದ್ದು ಶೇ.50ರ ಸಹಾಯ ಧನದ ಅಡಿ 1,071ರೂ.ಗೆ ವಿತರಿಸಬೇಕು. ಚಿಲ್ಲರೆ ಇಲ್ಲ ಎಂದು ಹೇಳಿ ಪ್ರತಿಯೊಬ್ಬರಿಂದ 1075ರೂ. ಪಡೆದಿದ್ದಾರೆಂದು ತಾಡಪತ್ರಿ ಖರೀದಿಸಿದ ರೈತರು ದೂರಿದರು.

    ರೈತ ಸಂಪರ್ಕ ಕೇಂದ್ರಕ್ಕೆ 440 ತಾಡಪತ್ರಿ ಪೂರೈಕೆಯಾಗಿದ್ದವು. ಒಂದೇ ದಿನದಲ್ಲಿ ಖಾಲಿಯಾಗಿದ್ದರಿಂದ ಸಮಸ್ಯೆಯಾಗಿದೆ. ಇನ್ನು ಕೆಲ ದಿನಗಳಲ್ಲಿ ಮತ್ತೆ ಪೂರೈಕೆಯಾಗಲಿವೆ. ಸರ್ಕಾರದ ಸಹಾಯಧನದಡಿ 1071ರೂ.ಗೆ ವಿತರಿಸಲಾಗುತ್ತಿದೆ. ಚಿಲ್ಲರೆ ಸಮಸ್ಯೆ ಇದ್ದಾಗ 1075ರೂ. ಪಡೆಯಲಾಗಿದೆ.
    | ರಾಘವೇಂದ್ರ ಕೊಂಡಗುರಿ, ಕೃಷಿ ಅಧಿಕಾರಿ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts