More

    ರೈತರಿಂದ ದೂರು ಕೇಳಿಬಂದಲ್ಲಿ ಸೂಕ್ತ ಕ್ರಮ – ಶಾಸಕ ಮಹಾದೇವಪ್ಪ

    ರಾಮದುರ್ಗ: ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಬೆಳೆಗಳನ್ನು ಸರಿಯಾಗಿ ಜಿಪಿಎಸ್ ಮಾಡಬೇಕು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಅವರ ಪಹಣಿಯೊಂದಿಗೆ ಜಿಪಿಎಸ್ ದಾಖಲೆ ಹೊಂದಾಣಿಕೆಯಾಗದಿದ್ದರೆ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ ನೀಡಿದ್ದಾರೆ.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2019-20 ನೇ ಸಾಲಿನಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಸಂದರ್ಭ ಪಹಣಿಯಲ್ಲಿ ದಾಖಲಿಸಲಾದ ಬೆಳೆ ಮಾಹಿತಿ ಹಾಗೂ ಜಿಪಿಎಸ್‌ನಲ್ಲಿ ನೀಡಿದ ಮಾಹಿತಿ ವ್ಯತ್ಯಾಸವಾಗಿ ಅನೇಕ ರೈತರು ತೊಂದರೆ ಅನುಭವಿಸಿದ್ದಾರೆ.

    ಮುಂಬರುವ ದಿನಗಳಲ್ಲಿ ಜಿಪಿಎಸ್‌ನಲ್ಲಿ ದೋಷಗಳು ಕಂಡುಬಂದ ಬಗ್ಗೆ ರೈತರಿಂದ ದೂರು ಕೇಳಿಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ-ಗೊಬ್ಬರದ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ಅವಶ್ಯಕ ಬೀಜ-ಗೊಬ್ಬರ ವಿತರಣೆಗೆ ಸಂಬಂಧಪಟ್ಟ ಬೀಜಗೊಬ್ಬರ ವಿತರಣಾ ಕೇಂದ್ರದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಸೂಚಿಸಿದರು.

    ತೋಟಗಾರಿಕೆ ಪ್ರದೇಶ ಅಭಿವೃದ್ಧಿಪಡಿಸಿ: ರಾಮದುರ್ಗ ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಯ ನೇತೃತ್ವದ ಭೂಪ್ರದೇಶದಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಜತೆಗೆ ಇಲಾಖೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಗಮನಕ್ಕೆ ತಂದು ಅರ್ಹ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು.

    ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದಲ್ಲಿ ಸುಮ್ಮನಿರುವುದಿಲ್ಲ ಎಂದು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ರೇಷ್ಮೆ ಬೆಳೆ ಪ್ರದೇಶ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಇಲಾಖೆಯ ಅಧಿಕಾರಿಗಳು ಬೇಸಾಯ ಕ್ರಮಗಳ ಮಾಹಿತಿ ನೀಡಿ ಮೇಲಿಂದ ಮೇಲೆ ರೈತರ ಜಮೀನಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್.ಬೆಳವಟಗಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಖೋಡ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts