More

    ಹೊಲದತ್ತ ಹೆಜ್ಜಿಯಿಟ್ಟ ಅನ್ನದಾತ

    ಹುಕ್ಕೇರಿ: ಕರೊನಾ ವೈರಸ್ ಭೀತಿಯ ನಡುವೆಯೂ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ. ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಲಿದ್ದು, ಏಪ್ರಿಲ್ ತಿಂಗಳಿನಲ್ಲಿ ಸರಾಸರಿ 34.0 ಮಿ.ಮೀ. ಆಗಬೇಕಿದ್ದು, ಸರಾಸರಿ 33.1 ಮಿ.ಮೀ. ಮಳೆ ಸುರಿದಿದೆ. ಇದರಿಂದ ರೈತರಿಗೆ ಭೂಮಿ ಹದವಾಗಿಟ್ಟುಕೊಳ್ಳಲು ಅನುಕೂಲವಾಗಲಿದ್ದು, ಅನ್ನದಾತ ಹೊಲದತ್ತ ಹೆಜ್ಜೆ ಇಡುತ್ತಿದ್ದಾನೆ.

    ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು ಬೀಜ ಹಾಗೂ ಇತರ ಕೃಷಿ ಪರಿಕರಗಳ ವಿತರಣೆಗೆ ಸಿದ್ಧವಾಗುತ್ತಿದೆ. ಪೂರ್ವ ಮುಂಗಾರಿನ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕಿನ ಪ್ರಮುಖ ಬೆಳೆಯಾದ ಸೋಯಾಬೀನ್ ಪ್ರಮಾಣಿತ ಬಿತ್ತನೆ ಬೀಜ ಸಂಗ್ರಹಿಸುವ ಹಾಗೂ ಪ್ರತಿಶತ ಮೊಳಕೆ ಪ್ರಮಾಣ ಪರೀಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಾಲೂಕು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

    ವಿವಿಧ ಬೆಳೆಗಳ ಬಿತ್ತನೆಗೆ ಕ್ರಮ: ಪ್ರಸ್ತುತ ಮುಂಗಾರಿನಲ್ಲಿ ಸುಮಾರು 25,000 ಹೆಕ್ಟೇರ್ ಸೋಯಾಬೀನ್, 7,350 ಹೆಕ್ಟೇರ್ ಗೋವಿನ ಜೋಳ, 6,060 ಹೆಕ್ಟೇರ್ ಹತ್ತಿ ಹಾಗೂ 6,400 ಹೆಕ್ಟೇರ್ ಶೇಂಗಾ ಸೇರಿ ಅಂದಾಜು 64,000 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ಸಂಭವವಿದೆ. ಇದಕ್ಕಾಗಿ ಕೇಂದ್ರ ಕಚೇರಿಯಿಂದ ನಿಗದಿತವಾದ 7,650 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜದ ವಿತರಣೆಗಾಗಿ ಬೇಡಿಕೆ ನೀಡಿ ಆ ಪೈಕಿ 6,000 ಕ್ವಿಂಟಾಲ್ ಸಂಗ್ರಹಿಸಲಾಗಿದೆ.

    ರಸ ಗೊಬ್ಬರ ದಾಸ್ತಾನು: 5,893 ಮೆಟ್ರಿಕ್ ಟನ್ ರಸಗೊಬ್ಬರ ಪ್ರಮಾಣಕ್ಕೆ ಈಗಾಗಲೇ ಎಲ್ಲ ಪಿಕೆಪಿಎಸ್‌ಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ 2,100 ಮೆಟ್ರಿಕ್ ಟನ್ ರಸಗೊಬ್ಬರದ ಲಭ್ಯತೆ ಇದೆ. ರಿಯಾಯಿತಿಯಲ್ಲಿ ಪಡೆದ ಬಿತ್ತನೆ ಬೀಜವನ್ನು ಪರಭಾರೆ, ಮಾರಾಟ ಅಥವಾ ಇನ್ನಾವುದೇ ದುರುಪಯೋಗ ಮಾಡಿದಲ್ಲಿ ಅಂಥ ರೈತರಿಗೆ ಕೃಷಿ ಇಲಾಖೆಯಿಂದ ಕಪ್ಪು ಪಟ್ಟಿಗೆ ಸೇರಿಸಿ ಬರುವ ಮೂರು ವರ್ಷಗಳಲ್ಲಿ ಯಾವುದೇ ಸೌಲಭ್ಯ ನೀಡದಂತೆ ಕ್ರಮ ಕೈಗೊಳ್ಳಲು ನಿರ್ದೇಶನವಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು 43 ಕೇಂದ್ರಗಳ ಸ್ಥಾಪನೆ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಒಂದೇ ಸ್ಥಳದಲ್ಲಿ ಅಧಿಕ ರೈತರು ಸೇರಬಾರದೆಂಬ ಉದ್ದೇಶದಿಂದ ಕಳೆದ ಸಾಲಿನಲ್ಲಿದ್ದ 19 ಬೀಜ ವಿತರಣಾ ಕೇಂದ್ರಗಳೊಂದಿಗೆ ಹೆಚ್ಚುವರಿಯಾಗಿ 24 ಕೇಂದ್ರ (ಒಟ್ಟು 43 ಕೇಂದ್ರ)ದ ಮೂಲಕ ಬೀಜ ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಗೋವಿನ ಜೋಳ 550 ಕ್ವಿಂಟಾಲ್, ಜೋಳ 35 ಕ್ವಿಂಟಾಲ್, ಉದ್ದು, ಹೆಸರು, ತೊಗರಿ ತಲಾ 5 ಕ್ವಿಂಟಾಲ್ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಬೀಜ ಮಾರಾಟ ಪರವಾನಗಿ ಪಡೆದ ಪಿಕೆಪಿಎಸ್, ಇತರೆ ನೋಂದಾಯಿತ ಹಾಗೂ ಆರ್ಥಿಕವಾಗಿ ಸದೃಢವಾದ ಸಂಘ-ಸಂಸ್ಥೆಗಳ ಮೂಲಕ ವಿತರಣೆ ಕೈಗೊಳ್ಳಲಾಗುತ್ತಿದೆ.

    15ರಿಂದ ಎಲ್ಲ ಕೇಂದ್ರಗಳಲ್ಲಿ ಬೀಜ ವಿತರಣೆ ಪ್ರಾರಂಭ ಮಾಡಲಾಗುತ್ತಿದೆ. ಕೋವಿಡ್-19 ಹತೋಟಿಗೆ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ರೈತರು ಪಾಲಿಸಬೇಕು ಹಾಗೂ ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಂಡು ಬಿತ್ತನೆ ಬೀಜ ಪಡೆದುಕೊಳ್ಳಬೇಕು.

    ಎಂ.ಎಸ್. ಪಟಗುಂದಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ
    ಮುಂಗಾರು ಹಂಗಾಮಿಗೆ ಬೇಕಾದ ಬೀಜ, ರಸಗೊಬ್ಬರದ ಮಾಹಿತಿಯನ್ನು ಸರಿಯಾಗಿ ನೀಡಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಮಹಾಮಾರಿ ಕರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ತಿಳಿಸಿದಂತೆ ರೈತರು ಪರಸ್ಪರ ಅಂತರ, ಮಾಸ್ಕ್ ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು.
    |ಉಮೇಶ ಕತ್ತಿ ಶಾಸಕ

    | ಬಾಬು ಸುಂಕದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts