More

    ಬೀಡಿ ಸಿಗರೇಟ್ ಸೇದೋರಿಗೆ ಕರೊನಾ ಸೋಂಕು ಬೇಗ ತಗಲುತ್ತಾ?

    ಕರೊನಾ ಸೋಂಕು ಶ್ವಾಸಕೋಶ ಸಂಬಂಧಿಸಿದ ಸಮಸ್ಯೆ. ಆದ್ದರಿಂದ ಹೆಚ್ಚಿಗೆ ಧೂಮಪಾನ ಮಾಡುವವರಿಗೆ ಈ ಸೋಂಕು ಬಹುಬೇಗ ತಗಲಬಹುದು ಎಂಬ ಮಾತೂ ಓಡಾಡುತ್ತಿದೆ. ನಿಮಗೂ ಇದರ ಬಗ್ಗೆ ಸಂದೇಹಗಳಿವೆಯೇ? ಇಲ್ಲಿ ಓದಿನೋಡಿ…

    * ಪ್ರಶ್ನೆ: ಸ್ಮೋಕ್‌ ಮಾಡುವವರಿಗೆ ಕರೊನಾ ಸೋಂಕು ಬೇಗ ಹರಡುತ್ತದೆಯೆ?

    ಉತ್ತರ: ಧೂಮಪಾನ ಮಾಡುವ ಜನರಿಗೆ ಕರೊನಾ ಸೋಂಕು ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ ಎಂಬ ಬಗ್ಗೆ ಇದುವರೆಗೆ ಯಾವುದೇ ಖಚಿತ ಪುರಾವೆ ಸಿಕ್ಕಿಲ್ಲ. ಆದರೆ ಧೂಮಿಪಾನಿಗಳಲ್ಲದವರಿಗಿಂತ ಸ್ಮೋಕರ್‌ಗಳಿಗೆ ಸೋಂಕು ಬೇಗನೆ ತಲುಪುವ ಎಲ್ಲಾ ಸಾಧ್ಯತೆಗಳೂ ಇವೆ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ಬಾಯಿ, ಕಣ್ಣು ಮತ್ತು ಮೂಗುಗಳನ್ನು ಪದೇ ಪದೇ ಮುಟ್ಟಿಕೊಳ್ಳುವುದರಿಂದ ಸೋಂಕು ಬೇಗನೆ ತಗಲುತ್ತದೆ. ಧೂಮಪಾನಿಗಳು ಉಳಿದವರಿಗಿಂತಲೂ ಹೆಚ್ಚಾಗಿ ಆಗಾಗ್ಗೆ ಕೈಯನ್ನು ಬಾಯಿ ಮತ್ತು ಮುಖಕ್ಕೆ ಮುಟ್ಟಿಕೊಳ್ಳುವುದು ಸಾಮಾನ್ಯ. ಇದು ಅಪಾಯಕಾರಿ. ಹಾಗೆಯೇ, ಸ್ಮೋಕಿಂಗ್‌ನಿಂದಾಗಿ ಶ್ವಾಸಕೋಶ ಈಗಾಗಲೇ ಹಾಳಾಗಿದ್ದರೆ, ಸ್ಮೋಕಿಂಗ್‌ ಸಂಬಂಧಿಸಿದ ಕ್ಯಾನ್ಸರ್‌ ಅಥವಾ ಇನ್ನಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸೋಂಕು ಬೇಗ ಬಾಧಿಸುವ ಸಾಧ್ಯತೆಗಳಿವೆ.

    * ಪ್ರಶ್ನೆ: ಧೂಮಪಾನಿಗಳು ಕರೊನಾ ವೈರಸ್‌ ಬಾಧೆಗೊಳಗಾದರೆ, ಇತರರಿಗಿಂತಲೂ ಹೆಚ್ಚಿನ ಅಪಾಯವಿದೆಯೆ?

    ಉತ್ತರ: ಇದು ಸಾಧ್ಯವಿದೆ. ಏಕೆಂದರೆ ದೀರ್ಘಾವಧಿಯವರೆಗೆ ಸ್ಮೋಕ್‌ ಮಾಡುವವರಿಗೆ ಸಾಮಾನ್ಯವಾಗಿ ಶ್ವಾಸಕೋಶವು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಉದಾಹರಣೆಗೆ; ಶ್ವಾಸಕೋಶವು ಸ್ವಾಭಾವಿಕವಾಗಿ ಒಂದು ರೀತಿಯ ಲೋಳೆಯನ್ನು ಉತ್ಪಾದಿಸುತ್ತವೆ, ಧೂಮಪಾನಿಗಳಲ್ಲಿ ಈ ಲೋಳೆಯ ಪ್ರಮಾಣ ಅಧಿಕವಾಗಿರುತ್ತದೆ. ಸ್ಮೋಕಿಂಗ್‌ ಅಧಿಕವಾದಾಗ ಈ ಲೋಳೆಯಿಂದ ಶ್ವಾಸಕೋಶದ ಬಾಗಿಲು ಮುಚ್ಚುವ ಕಾರಣ, ಶ್ವಾಸಕೋಶವನ್ನು ಶುಚಿಗೊಳಿಸುವ ಕಾರ್ಯವು ನಿಧಾನವಾಗುತ್ತದೆ. ಅಷ್ಟರ ಒಳಗೆ ಸೋಂಕು ತಗುಲಿದರೆ ಅದು ಬೇಗನೆ ಶ್ವಾಸಕೋಶವನ್ನು ಹಾಳುಮಾಡುವ ಸಂಭವವಿದೆ. ಧೂಮಪಾನಿಗಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವ ಕಾರಣ, ಸೋಂಕಿನ ವಿರುದ್ಧ ಹೋರಾಟ ಮಾಡುವುದು ಕಷ್ಟವಾಗಿ ಬಹುಬೇಗನೆ ಸೋಂಕುಪೀಡಿತರಾಗಬಹುದು.
    ಇವಿಷ್ಟೇ ಅಲ್ಲದೇ, ಹೃದ್ರೋಗ ಸಮಸ್ಯೆ ಮತ್ತು ಕ್ಯಾನ್ಸರ್‌ ಸಮಸ್ಯೆ ಇರುವವರಿಗೂ ಸೋಂಕು ತಗುಲಿದರೆ ಹೆಚ್ಚು ಅಪಾಯವಿದೆ.

    * ಪ್ರಶ್ನೆ: ಈ ಹಿಂದೆ ಸ್ಮೋಕ್‌ ಮಾಡುತ್ತಿದ್ದು, ಈಗ ಬಿಟ್ಟಿದ್ದರೂ ಕರೊನಾ ವೈರಸ್‌ನಿಂದ ಸಮಸ್ಯೆ ಇದೆಯೆ?

    ಉತ್ತರ: ಎಂದಿಗೂ ಸ್ಮೋಕ್‌ ಮಾಡದ ವ್ಯಕ್ತಿಗೆ ಹೋಲಿಸಿದರೆ ಮಾಜಿ ಧೂಮಪಾನಿಗಳಿಗೆ ಕರೊನಾ ವೈರಸ್‌ ಹೆಚ್ಚು ಅಪಾಯ ತಂದೊಡ್ಡಿರಬಹುದೇ ಎಂದು ಇದೂವರೆಗೂ ಖಚಿತವಾಗಿಲ್ಲ. ಧೂಮಪಾನಿಗಳಿಗೆ ಸಾಮಾನ್ಯವಾಗಿ ಶ್ವಾಸಕೋಶದ ಸೋಂಕಿನ ಅಪಾಯ ಇರುತ್ತದೆ. ಆದರೆ ಅದನ್ನು ನಿಲ್ಲಿಸಿದಾಗ ಶ್ವಾಸಕೋಶಗಳು ವೇಗವಾಗಿ ಸೋಂಕಿನಿಂದ ಗುಣಮುಖವಾಗುತ್ತ ಬರುತ್ತದೆ. ಆದರೆ ಎಂದಿಗೂ ಧೂಮಪಾನ ಮಾಡದ ವ್ಯಕ್ತಿಯಂತೆ ಮಾಜಿ ಧೂಮಪಾನಿಗೆ ಅಪಾಯವನ್ನು ಕಡಿಮೆ ಮಾಡಲು ಎಷ್ಟು ಸಮಯವಿದೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಒಂದಂತೂ ನಿಜ. ಸ್ಮೋಕ್‌ ಮಾಡುವುದನ್ನು ಮುಂದುವರೆಸಿರುವ ವ್ಯಕ್ತಿಗಿಂತಲೂ ನೀವು (ಒಂದು ವೇಳೆ ಈಗಾಗಲೇ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇಲ್ಲದ ಪಕ್ಷದಲ್ಲಿ) ಬೇಗ ಗುಣಮುಖವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

    * ಪ್ರಶ್ನೆ: ಕರೊನಾ ವೈರಸ್‌ನಂಥ ಸೋಂಕಿನಿಂದ ಪಾರಾಗಲು ಜನರು ಎಷ್ಟು ಸಮಯದವರೆಗೆ ಧೂಮಪಾನವನ್ನು ನಿಲ್ಲಿಸಬೇಕು?

    ಉತ್ತರ: ಇದರ ಬಗ್ಗೆ ಇನ್ನೂ ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಧೂಮಪಾನವನ್ನು ನಿಲ್ಲಿಸುವುದರಿಂದ ಕೆಲವೇ ತಿಂಗಳುಗಳಲ್ಲಿ ಶ್ವಾಸಕೋಶದ ಆರೋಗ್ಯ ಸುಧಾರಿಸುತ್ತದೆ ಎಂಬುದು ದೃಢಪಟ್ಟಿದೆ. ಶ್ವಾಸಕೋಶದ ಸೋಂಕಿನಂತಹ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾಗಳ ಪ್ರಮಾಣವೂ ಕಡಿಮೆಯಾಗುತ್ತದೆ.

    * ಪ್ರಶ್ನೆ: ಧೂಮಪಾನವನ್ನು ನಿಲ್ಲಿಸಲು ನನಗೆ ಯಾವುದು ಸಹಾಯ ಮಾಡಬಲ್ಲುದು?

    ಉತ್ತರ: ನಿಮ್ಮ ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ಧೂಮಪಾನವನ್ನು ನಿಲ್ಲಿಸುವುದು. ಧೂಮಪಾನವನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ಸ್ಮೋಕಿಂಗ್‌ ಬಿಡಿಸುವ ಸಂಬಂಧ ಕೆಲವು ‘ಡಿ ಅಡಿಕ್ಷನ್‌ ಸೆಂಟರ್‌’ ಸೇರಿ ಹಲವಾರು ವೈದ್ಯರು ಇದರ ಟ್ರೀಟ್‌ಮೆಂಟ್‌ ನೀಡುತ್ತಾರೆ. ಅವರನ್ನು ಸಂಪರ್ಕಿಸಬಹುದು. (ಏಜೆನ್ಸೀಸ್)

     

    ಹೋಮ್ ಕ್ವಾರಂಟೈನ್ ಏನು?..ಎತ್ತ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts