More

    ನೆರೆ ಬಂದ್ರೆ ಪರಿಹಾರವಿಲ್ಲ, ಸ್ಥಳಾಂತರವಾಗದ ಕುಟುಂಬಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ

    ಚಿಕ್ಕಮಗಳೂರು: ಸುರಕ್ಷಿತ ಸ್ಥಳಕ್ಕೆ ಹೋಗಲು ಸಮ್ಮತಿಸಿ ಒಂದು ಲಕ್ಷ ರೂ. ಪರಿಹಾರ ಪಡೆದು ಇದೀಗ ಸ್ಥಳಾಂತರವಾಗದಿರುವ ಮೂಡಿಗೆರೆ ತಾಲೂಕಿನ ಅತಿವೃಷ್ಟಿ ಸಂತ್ರಸ್ತರು ಈ ವರ್ಷ ಮತ್ತೆ ಮಳೆ ಅನಾಹುತಕ್ಕೆ ಗುರಿಯಾದರೆ ಅವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ(ದಿಶಾ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಜಿಲ್ಲಾಡಳಿತ ಸಾಕಷ್ಟು ಕಾಲಾವಕಾಶ ನೀಡಿದರೂ ಅವರು ಮಾತು ಕೇಳದಿರುವುದರಿಂದ ಅಂಥವರಿಗೆ ಮತ್ತೆ ಪರಿಹಾರ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

    ಅತಿವೃಷ್ಟಿ ಹಾನಿ ಹಾಗೂ ಪರಿಹಾರದ ಕುರಿತು ಸಭೆಗೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಮಳೆಯಿಂದ ತೊಂದರೆಗೀಡಾಗಿ ಸ್ಥಳಾಂತರಕ್ಕೆ ಒಪ್ಪಿದ್ದ ಮೂಡಿಗೆರೆ ತಾಲೂಕಿನ 357 ಸಂತ್ರಸ್ತರಲ್ಲಿ 133 ಜನರು ಮೊದಲ ಕಂತಿನ ಹಣ ಪಡೆದ ಬಳಿಕ ಸ್ಥಳಾಂತರಕ್ಕೆ ಹಿಂಜರಿದರು. ಉಳಿದವರ ಮನೆಗಳು ವಿವಿಧ ಹಂತದಲ್ಲಿ ನಿರ್ವಣಗೊಳ್ಳುತ್ತಿವೆ ಎಂದು ತಿಳಿಸಿದರು.

    ಸ್ಥಳಾಂತರಕ್ಕೆ ಹಿಂಜರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಇಲ್ಲದಿದ್ದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಪರಿಹಾರ ನೀಡುವುದೇ ಹೊರೆಯಾಗಬಹುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸ್ಥಳಾಂತರಕ್ಕೆ ಒಪ್ಪಿ ಪ್ರಮಾಣಪತ್ರ ನೀಡಿದವರೇ ಈಗ ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆಕ್ಷೇಪಿಸಿದರು.

    ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್​ಕುಮಾರ್ ಮಾತನಾಡಿ, ಈ 133 ಮಂದಿ ಜೀವನಾಧಾರಕ್ಕೆ ಇದ್ದ ಕೃಷಿ ಜಾಗ ಬಿಟ್ಟು ಬೇರೆಡೆ ಹೋಗಲು ಮುಂದಾಗುತ್ತಿಲ್ಲ. ಅದೇ ಕೃಷಿ ಜಮೀನು ಒದಗಿಸಿದಲ್ಲಿ ಅವರು ಸ್ಥಳಾಂತರಕ್ಕೆ ಸಿದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಲೆಕ್ಕ ತಪಾಸಣೆ ಹೆಸರಲ್ಲಿ ಶೋಷಣೆ: ಪಿಡಿಒಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕಾರಣವಿಲ್ಲದೆ ಸಾಮಾಜಿಕ ಲೆಕ್ಕ ತಪಾಸಣಾಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ ಎಂದು ಶಾಸಕರಾದ ಬೆಳ್ಳಿಪ್ರಕಾಶ್ ಮತ್ತು ಡಿ.ಎಸ್.ಸುರೇಶ್ ಆಕ್ಷೇಪಿಸಿದರು.

    ಸ್ವತಃ ತಾಂತ್ರಿಕ ಪರಿಣತರಂತೆ ಈ ಅಧಿಕಾರಿಗಳು ವರ್ತಿಸುತ್ತಾರೆ. ಕೆಲಸವಾದ ವರ್ಷದ ಬಳಿಕ ದಾಖಲೆ ತೆಗೆಯಲು ಹೇಳುತ್ತಾರೆ. ಈ ತಂಡದಲ್ಲಿರುವ ಅಧಿಕಾರಿಗಳು ಪ್ರಾಮಾಣಿಕರಲ್ಲ. ಅವರು ಕೊಟ್ಟ ವರದಿ ಮೇಲೆ ಕೂಡಲೇ ಪಿಡಿಒಗಳನ್ನು ಅಮಾನತುಗೊಳಿಸಲಾಗುತ್ತಿದೆ. ಹೀಗಾದರೆ ಕೆಲಸ ಮಾಡುವುದು ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಪರ್ಸೆಂಟೇಜ್ ಕೊಟ್ಟರೆ ಎಲ್ಲವೂ ಸರಿ. ಇಲ್ಲದಿದ್ದರೆ ಎಲ್ಲ ತಪ್ಪು ಎನ್ನುತ್ತಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದಕ್ಕೆ ಸ್ಪಷ್ಟನೆ ನೀಡಿ, ಸಾಮಾಜಿಕ ಲೆಕ್ಕಪರಿಶೋಧನೆಗೆ ಕಾನೂನಿನಲ್ಲಿ ಅವಕಾಶವಿದೆ. ಅವರು ಅನವಶ್ಯಕ ತೊಂದರೆ ಕೊಟ್ಟರೆ ತಾಪಂ ಇಒಗೆ ದೂರು ಕೊಡಬಹುದು. ಆಗಬೇಕಾದ ರೀತಿಯಲ್ಲಿ ಕೆಲಸವಾಗದಿದ್ದರೆ ಪಿಡಿಒಗಳು ಗುರಿಯಾಗುವ ಸಾಧ್ಯತೆ ಇದೆ ಎಂದರು. ಈ ವಿಚಾರದಲ್ಲಿ ನಿರ್ದಿಷ್ಟ ಪ್ರಕರಣಗಳಿದ್ದರೆ ತನಿಖೆ ಮಾಡಿಸಬಹುದು ಎಂದು ಹೇಳಿ ಸಚಿವ ಸಿ.ಟಿ.ರವಿ ಚರ್ಚೆಗೆ ತೆರೆ ಎಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts