More

    ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್; ₹1.29 ಕೋಟಿ ವಶ ನಾಲ್ವರ ಬಂಧನ

    ಚಿಂತಾಮಣಿ: ನಗರದ ಖಾಸಗಿ ಫೌಂಡೇಷನ್ ಕಟ್ಟಡದಲ್ಲಿ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದ ಮೂವರು ದಂಧೆಕೋರರನ್ನು ಪೊಲೀಸರು ಮಾಲು ಸಮೇತ ಶುಕ್ರವಾರ ಬಂಧಿಸಿದ್ದಾರೆ.

    ಬೆಂಗಳೂರಿನ ಹೆಗಡೆ ನಗರದ ನಿವಾಸಿಗಳಾದ ದಾವೂದ್ ವಾಸಿ, ಶೇಖ್ ಹಿದಾಯತ್, ಸ್ಥಳೀಯ ಬಾರ್ನ್ ಫೌಂಡೇಷನ್ ಕಟ್ಟಡದ ಉಸ್ತುವಾರಿ ಚಿಂತಾಮಣಿ ತಾಲೂಕಿನ ಗಾಜಲಹಳ್ಳಿಯ ಶಿವ ಬಂಧಿತರು.

    ಖಚಿತ ಮಾಹಿತಿ ಮೇರೆಗೆ ಎಎಸ್ಪಿ ಕುಶಾಲ್ ಚೋಕ್ಸೆ ನೇತೃತ್ವದ ತಂಡವು ದಂಧೆ ಮೇಲೆ ದಾಳಿ ನಡೆಸಿ ಆರೋಪಿಗಳಿಂದ ಬರೋಬ್ಬರಿ 1.29 ಕೋಟಿ ರೂ. ಮೌಲ್ಯದ ಖೋಟಾ ನೋಟು, ನೋಟು ತಯಾರಿಕೆಗೆ ಬಳಸುತ್ತಿದ್ದ ಜೆರಾಕ್ಸ್ ಮಷಿನ್, ಕಲರ್ ಪ್ರಿಂಟರ್, ಲ್ಯಾಮಿನೇಟರ್, ಒಂದು ಲ್ಯಾಪ್‌ಟಾಪ್ ಹಾಗೂ ಮೂವರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಾದ ಶಂಕರಪ್ಪ, ರಾಜಣ್ಣ, ಇಂತಿಯಾಜ್, ಅಬ್ದುಲ್ಲಾ ನಾಪತ್ತೆಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

    ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್; ₹1.29 ಕೋಟಿ ವಶ ನಾಲ್ವರ ಬಂಧನ
    ಖೋಟಾ ನೋಟು ಮುದ್ರಣ ಮಾಡಿ ಸಿಕ್ಕಿಹಾಕಿಕೊಂಡಿರುವ ಅರೋಪಿಗಳು.

    3 ಕೋಟಿ ಮುದ್ರಣದ ಗುರಿ: ಖೋಟಾ ನೋಟು ಪ್ರಿಂಟ್‌ಗೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಯೊಬ್ಬ ಆರೋಪಿಗಳಿಗೆ ಗುತ್ತಿಗೆ ಕೆಲಸದ ಜವಾಬ್ದಾರಿ ವಹಿಸಿದ್ದ. ಬರೋಬ್ಬರಿ 3 ಕೋಟಿ ರೂ. ಗುರಿ ನೀಡಿದ್ದ. ಇದನ್ನು ಒಪ್ಪಿಕೊಂಡು 4.60 ಲಕ್ಷದ ನಕಲಿ ನೋಟುಗಳನ್ನು ಪ್ರಿಂಟ್ ಮಾಡಲಾಗಿದೆ. ಇವುಗಳ ಮೇಲೆ 9 ಬಿಆರ್ 381891 ನಂಬರ್ ಇದೆ. 3170 ನೋಟ್‌ಗಳ ಮುಂಭಾಗ ಮತ್ತು 3050 ನೋಟುಗಳ ಹಿಂಭಾಗ ಮುದ್ರಿಸಲಾಗಿದೆ. ಕೊನೆಯಲ್ಲಿ ಒಂದಕ್ಕೊಂದು ಜೋಡಿಸಿ
    ಒಂದು ನೋಟನ್ನು ಸಿದ್ಧಪಡಿಸಲಾಗುತ್ತಿತ್ತು.

    ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್; ₹1.29 ಕೋಟಿ ವಶ ನಾಲ್ವರ ಬಂಧನ
    ಖೋಟಾ ನೋಟುಗಳ ಮುದ್ರಣಕ್ಕೆ ಬಳಿಸಿರುವ ಯಂತ್ರಗಳು.

    ಅಕ್ರಮ ಚಟುವಟಿಕೆ ಬೆನ್ನಟ್ಟಿದಾಗ: ಆಂಧ್ರ ಗಡಿ ಭಾಗದಲ್ಲಿರುವ ಚಿಂತಾಮಣಿ ತಾಲೂಕಿನಲ್ಲಿ ಅಂದರ್ ಬಾಹರ್, ಮದ್ಯ ಅಕ್ರಮ ಮಾರಾಟ ಸೇರಿ ಅಕ್ರಮ ಚಟುವಟಿಕೆ ತಡೆಗಟ್ಟುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಸ್ಥಳೀಯ ಬೆಳವಣಿಗೆಗೆಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಬ್ಬಂದಿಗೆ ಸೂಚಿಸಿತ್ತು. ಅದರಂತೆ ಜಾಲಾಡಿದ ಸಂದರ್ಭದಲ್ಲಿ ಖೋಟಾ ನೋಟು ಪ್ರಿಂಟ್ ದಂಧೆ ರಹಸ್ಯ ಬಯಲಿಗೆ ಬಂದಿದೆ.

    ಚಿಂತಾಮಣಿ ಉಪ ವಿಭಾಗದ ಎಎಸ್‌ಪಿ ಕುಶಲ್‌ಚೌಕ್ಸೆ ನೇತೃತ್ವದಲ್ಲಿ ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಂಗಶಾಮಯ್ಯ, ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸುಧಾಕರರೆಡ್ಡಿ, ಪಿಎಸ್‌ಐಗಳಾದ ಎಂ.ರೇಣುಕಯ್ಯ, ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಸುರೇಶ್, ಸಂದೀಪ್ ಕುಮಾರ್, ವೆಂಕಟರವಣ, ನರೇಶ್, ಮಂಜುನಾಥರೆಡ್ಡಿ, ಚನ್ನಕೇಶವ, ಶ್ರೀನಾಥರಾವ್, ಗಿರೀಶ್ ಒಳಗೊಂಡ ತಂಡವು ದಂಧೆಗೆ ಬಳಸುತ್ತಿದ್ದ ಉಪಕರಣಗಳ ಜತೆಗೆ ದಂಧೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ..

    ನಕಲಿ ನೋಟು ಮುದ್ರಣದ ಅಡ್ಡೆಯ ಮೇಲೆ ದಾಳಿ ನಡೆಸಿ, 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುದ್ರಣಕ್ಕೆ ಪ್ರಭಾವಿ ವ್ಯಕ್ತಿಯೊಬ್ಬ ಆರೋಪಿಗಳಿಗೆ 2 ಲಕ್ಷ ರೂ.ಗಳಿಗೆ ಗುತ್ತಿಗೆ ನೀಡಿದ್ದ. ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಲಾಗುವುದು.
    | ಡಿ.ಎಲ್.ನಾಗೇಶ್ ಎಸ್ಪಿ ಚಿಕ್ಕಬಳ್ಳಾಪುರ

    ದಂಧೆಯ ಹಿಂದೆ ದೊಡ್ಡ ಕೈವಾಡ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧೆಡೆ ಮನಿ ಡಬಲಿಂಗ್ ಇಲ್ಲವೇ ರೈಸ್ ಪುಲ್ಲಿಂಗ್ ದಂಧೆಯೂ ನಡೆಯುತ್ತಿದೆ. ಇದಕ್ಕೆ ಬಳಸಲು ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತೆ? ಚುನಾವಣಾ ಸಂದರ್ಭದಲ್ಲಿ ನಕಲಿ ನೋಟು ನೀಡುವ ಹುನ್ನಾರವೇ? ಎನ್ನುವುದು ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದರ ನಡುವೆ ದಂಧೆಯ ಹಿಂದೆ ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದೆ. ಪ್ರಮುಖ ರೂವಾರಿಯನ್ನು ಬಂಧಿಸಲು ಬಲೆ ಬೀಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts