More

    ಉತ್ತಮ ಚಿಂತನೆಯಿಂದ ಸತ್ಪಲ ಪ್ರಾಪ್ತಿ

    ಬಾಳೆಹೊನ್ನೂರು: ಒಳ್ಳೆಯ ಚಿಂತನೆಗಳನ್ನು ಜನಸಮುದಾಯದಲ್ಲಿ ಬಿತ್ತಿದರೆ ಮಾತ್ರ ಉತ್ತಮ ಫಲಗಳು ಕೈಸೇರಲು ಸಾಧ್ಯ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಶ್ರೀ ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಜಾತ್ರಾ ಮಹೋತ್ಸವದ ಪ್ರಥಮ ಪ್ರಕಟಣೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

    ಸಮಾಜದಲ್ಲಿ ಸಾತ್ವಿಕ ಶಕ್ತಿ ಬೆಳೆಸಲು ಬಹಳಷ್ಟು ಶ್ರಮಿಸಬೇಕಾಗುತ್ತದೆ. ಆದರೆ ವಾತಾವರಣ ಕಲುಷಿತಗೊಳಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಗುರಿ ಸಾಧಿಸುವುದು ಬಲಪ್ರಯೋಗದಿಂದ ಅಲ್ಲ. ಸತತ ಪ್ರಯತ್ನ ಹಾಗೂ ಸಾಧನೆಯಿಂದ ಸತ್ಪಲಗಳನ್ನು ಪಡೆಯಲು ಸಾಧ್ಯ ಎಂದರು.

    ಫಲವಿತ್ತ ರೆಂಬೆ ಬಾಗುತ್ತದೆ. ಗೊನೆ ಹೊತ್ತ ಬಾಳೆ ಬಾಗುತ್ತದೆ. ತೆನೆ ಹೊತ್ತ ದಂಟು ಬಾಗುತ್ತದೆ. ಆದರೆ ದುರ್ಜನರು ಯಾವಾಗಲೂ ಪರಹಿಂಸೆ, ನಿಂದೆಗಳಲ್ಲಿ ವ್ಯರ್ಥ ಕಾಲ ಕಳೆಯುವರೇ ಹೊರತು ಭಗವಂತನ ಚಿಂತನೆಯಲ್ಲಿ ಅಲ್ಲ. ಹಸಿದವನಿಗೆ ಕೊಡುವ ಅನ್ನ, ವಿದ್ಯಾರ್ಥಿಗಳಿಗೆ ಕೊಡುವ ಪ್ರೋತ್ಸಾಹ ಮತ್ತು ಸಮಾಜಕ್ಕೆ ಮಾಡಿದ ಸೇವೆ ಇಂದಿಲ್ಲ ನಾಳೆಯಾದರೂ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

    ಅಚಲ ನಿರ್ಧಾರ, ಆತ್ಮವಿಶ್ವಾಸ ಯಶಸ್ಸಿನ ಸೋಪಾನ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಸ್ಪಷ್ಟವಾಗಿ ಬೋಧಿಸಿದ್ದಾರೆ. ಸತ್ವಭರಿತ ಆದರ್ಶ ಮೌಲ್ಯಗಳ ಸಂರಕ್ಷಣೆಗಾಗಿ ಎಲ್ಲರೂ ಸಹಕರಿಸಬೇಕು ಎಂದರು.

    ಮಾ.5ರಿಂದ 10ರವರೆಗೆ ಶ್ರೀ ರಂಭಾಪುರಿ ಧರ್ಮ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಜರುಗಲಿದೆ. ಮಾ.7ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts