More

    ಕಾಯಿಪಲ್ಲೆಗೆ ಕರೊನಾ ಕಾರ್ಮೋಡ!

    ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ಭೀತಿ ತರಕಾರಿ ಮಾರುಕಟ್ಟೆಗೂ ತಟ್ಟಿದ್ದು, ನಿತ್ಯದ ವ್ಯಾಪಾರ-ವಹಿವಾಟಿನ ವಿಧಾನವನ್ನೇ ಬದಲಿಸಿದೆ. ತರಕಾರಿ ಖರೀದಿಸಲು ಹಾಗೂ ಮಾರಾಟ ಮಾಡಲು ಮುಗಿಬೀಳುತ್ತಿದ್ದ ವ್ಯಾಪಾರಸ್ಥರು ಕೈಕಟ್ಟಿ ಕುಳಿತಿದ್ದಾರೆ. ದಿನದ 24 ಗಂಟೆಯೂ ತೆರೆದಿರುತ್ತಿದ್ದ ತಾಜಾ ತರಕಾರಿಗೆ ಪ್ರಸಿದ್ಧವಾದ ಘಟಪ್ರಭಾ ಮಾರುಕಟ್ಟೆಯೂ ಬಿಕೋ ಎನ್ನುತ್ತಿದೆ.

    ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ತರಕಾರಿ ಮಾರುಕಟ್ಟೆಯಿಂದ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ಮೂಲಕ ಪ್ರತಿದಿನ ನೂರಾರು ಟನ್ ತರಕಾರಿ ವಿದೇಶಕ್ಕೂ ರಫ್ತಾಗುತ್ತದೆ. ಆದರೆ, ಕನೊನಾ ವೈರಸ್ ಭೀತಿಯಿಂದ ಕೆಲ ದಿನಗಳಿಂದ ತರಕಾರಿ ಸಾಗಣೆಯೇ ಬಂದ್ ಆಗಿದೆ. ಈ ಮಾರುಕಟ್ಟೆಯ ಎಲ್ಲ ವ್ಯವಹಾರಕ್ಕೂ ಕಾರ್ಮೋಡ ಕವಿದಿದೆ.

    ಕೇಳುವವರೇ ಇಲ್ಲ: ಕರ್ನಾಟಕಕ್ಕಿಂತ ಹೆಚ್ಚಾಗಿ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲೂ ಘಟಪ್ರಭಾ ಮಾರುಕಟ್ಟೆಯ ತರಕಾರಿ ಹೆಸರುವಾಸಿ. ಅನ್ಯ ರಾಜ್ಯಗಳಲ್ಲಿ ಇಲ್ಲಿನ ಗುಣಮಟ್ಟದ ತರಕಾರಿಗಳಿಗೆ ಬೇಡಿಕೆ ಇರುವುದರಿಂದ ಬೆಲೆ ತುಸು ತುಟ್ಟಿಯಾದರೂ ಮಧ್ಯವರ್ತಿಗಳು ಖರೀದಿಗಾಗಿ ಮುಗಿಬೀಳುತ್ತಿದ್ದರು. ಆದರೆ, ಈಗ ದೇಶಾದ್ಯಂತ ಕರೊನಾ ಭೀತಿಯಿಂದಾಗಿ ಇಲ್ಲಿನ ತರಕಾರಿಯನ್ನು ಕೇಳುವವರೇ ಇಲ್ಲದಂತಾಗಿದೆ. ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರು ಕಡಿಮೆ ದರಕ್ಕೆ ತರಕಾರಿ ಖರೀದಿಸುತ್ತಿದ್ದಾರೆ.

    ಬೆಳೆಗಾರರಿಗೂ ದುಗುಡ: ವಿವಿಧ ತರಕಾರಿ ಬೆಳೆದು ಅವುಗಳನ್ನು ಘಟಪ್ರಭಾದ ಮಾರುಕಟ್ಟೆಗೆ ತೆರಳಿ ಮಾರಾಟ ಮಾಡಿ ಜೀವನ ನಿರ್ವಹಿಸಿಕೊಳ್ಳುತ್ತಿದ್ದ ಬೆಳೆಗಾರರಲ್ಲೂ ದುಗುಡ ಹೆಚ್ಚಿಸಿದೆ. ವರ್ಷವಿಡೀ ವ್ಯಾಪಾರಸ್ಥರು ರೈತರ ಹೊಲಗಳಿಗೇ ಬಂದು ಮುಂಗಡ ಹಣ ನೀಡಿ ತರಕಾರಿ ಒಯ್ಯುತ್ತಿದ್ದರು. ಆದರೆ, ಇದೀಗ ಕರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮದಿಂದಾಗಿ ತರಕಾರಿ ವ್ಯಾಪಾರ-ವಹಿವಾಟಿಗೂ ತೊಡಕಾಗಿದೆ.ವ್ಯಾಪಾರಸ್ಥರೂ ರೈತರ ಹೊಲದತ್ತ ಸುಳಿಯುತ್ತಿಲ್ಲ.

    ರೈಲ್ವೆ ಬೋಗಿಗಳು ಖಾಲಿ ಖಾಲಿ: ಘಟಪ್ರಭಾದ ತರಕಾರಿಗೆ ದೇಶ, ವಿದೇಶದಲ್ಲಿಯೂ ಬೇಡಿಕೆ ಇರುವುದರಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಣೆ ಮಾಡಲು ಪೂರಕವಾಗಲೆಂದು ರೈಲ್ವೆ ಇಲಾಖೆ ಅನುಕೂಲ ಕಲ್ಪಿಸಿದೆ. ವ್ಯಾಪಾರಸ್ಥರು ಹಾಗೂ ರೈತರಿಗಾಗಿ ಬೆಂಗಳೂರು-ಮಿರಜ್ ಮಾರ್ಗವಾಗಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಈಗ ಕರೊನಾ ಭೀತಿಯಿಂದ ತರಕಾರಿ ಖರೀದಿಗೆ ವ್ಯಾಪಾರಸ್ಥರು ಇತ್ತ ಸುಳಿಯದ್ದರಿಂದ ರೈಲ್ವೆ ಬೋಗಿಗಳು ಖಾಲಿ ಖಾಲಿಯಾಗಿವೆ. ಇದರಿಂದ ರೈಲ್ವೆ ಇಲಾಖೆಗೂ ಆದಾಯದಲ್ಲಿ ನಷ್ಟ ಉಂಟಾಗುತ್ತಿದೆ.

    ಎರಡು ಎಕರೆ ತೋಟದಲ್ಲಿ ಕರಿಬೇವು ಬೆಳೆದಿದ್ದೇನೆ. ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇತ್ತು. ಆದರೆ, ಈಗ ಕರೊನಾ ಭೀತಿಯಿಂದ ಗೋವಾ ಹಾಗೂ ಮುಂಬೈ ವ್ಯಾಪಾರಸ್ಥರು ಘಟಪ್ರಭಾ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಹಾಗಾಗಿ ಇಲ್ಲಿನ ಸೊಪ್ಪು ಹಾಗೂ ತರಕಾರಿಯನ್ನು ಕೇಳುವವರೇ ಇಲ್ಲ.
    | ನಾಗರಾಜ ಹುಂಡೇಕರ ಘಟಪ್ರಭಾ ರೈತ

    ಕರೊನಾ ಸೋಂಕಿನ ಭೀತಿಯಿಂದ ಘಟಪ್ರಭಾ ತರಕಾರಿ ಮಾರುಕಟ್ಟೆಯ ವ್ಯಾಪಾರ-ವಹಿವಾಟು ಕ್ಷೀಣಿಸಿದೆ. ಇಲ್ಲಿಂದ ಗೋವಾ ಹಾಗೂ ಮುಂಬೈ ಮಾರುಕಟ್ಟೆಗೆ ತರಕಾರಿ ಸಾಗಣೆ ಸ್ಥಗಿತಗೊಂಡಿದೆ. ಇದರಿಂದಾಗಿ ಪಟ್ಟಣ ಪಂಚಾಯಿತಿಗೆ ಬರುವ ಆದಾಯವೂ ಕಡಿಮೆಯಾಗಿದೆ.
    | ಕೆ.ಬಿ. ಪಾಟೀಲ ಮುಖ್ಯಾಧಿಕಾರಿ
    ಪಟ್ಟಣ ಪಂಚಾಯಿತಿ, ಮಲ್ಲಾಪುರ ಪಿಜಿ

    | ಅಕ್ಕಪ್ಪ ಗಂ.ಮಗದುಮ್ಮ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts