More

    ಕಳೆಗಟ್ಟುತ್ತಿದೆ ಅಯ್ಯನಗುಡಿ ದನಗಳ ಜಾತ್ರೆ: ರಾಸುಗಳ ಖರೀದಿಗಾಗಿ ಹುಡುಕಾಟ

    | ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
    ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಂಗಲ್ ದನಗಳ ಜಾತ್ರೆ ರದ್ದುಗೊಳಿಸಿದ್ದ ಆದೇಶಕ್ಕೆ ಸೆಡ್ಡು ಹೊಡೆದಿರುವ ರೈತರು ದನಗಳ ಜಾತ್ರೆ ನಡೆಸುವ ಮೂಲಕ ಸಂಪ್ರದಾಯ ಮುಂದುವರಿಸಿದ್ದಾರೆ.

    ಮಕರ ಸಂಕ್ರಾಂತಿ ಮರುದಿನ ಪ್ರತಿವರ್ಷ ಕೆಂಗಲ್ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದಲ್ಲಿ ಅಯ್ಯನಗುಡಿ ದನಗಳ ಜಾತ್ರೆ ಎಂದೇ ಇದು ಹೆಸರುವಾಸಿಯಾಗಿದೆ. ವರ್ಷದ ಮೊದಲು ದನಗಳ ಜಾತ್ರೆ ಈ ಬಾರಿ ನಡೆಯುವುದಿಲ್ಲ ಎನ್ನಲಾಗಿತ್ತು. ಆದರೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದಿರುವ ರೈತರು, ನೂರಾರು ರಾಸುಗಳೊಂದಿಗೆ ರಾತ್ರೋರಾತ್ರಿ ಬಂದು ಜಾತ್ರೆ ಕಟ್ಟಿದ್ದಾರೆ.

    ಕೆಲವರು ನಿಷೇಧದ ಮಾಹಿತಿ ಅರಿಯದೆ ಜಾತ್ರೆಗೆ ಬಂದಿದ್ದರೆ, ಮತ್ತೆ ಕೆಲವರು ದೂರವಾಣಿ ಮೂಲಕ ಪರಸ್ಪರ ಮಾಹಿತಿ ರವಾನಿಸಿಕೊಂಡು ಬಂದಿದ್ದಾರೆ. ಹೆದ್ದಾರಿ ಬಿಟ್ಟು, ದೇವಾಲಯದ ಅನತಿ ದೂರದಲ್ಲಿರುವ ಖಾಸಗಿ ಜಮೀನುಗಳಲ್ಲಿ ರಾಸುಗಳನ್ನು ಕಟ್ಟಿ ಮಾರಾಟ ನಡೆಸುತ್ತಿದ್ದಾರೆ. ಖರೀದಿದಾರರು ತಮ್ಮಿಷ್ಟದ ರಾಸುಗಳ ಖರೀದಿಯಲ್ಲಿ ತೊಡಗಿದ್ದಾರೆ.

    ನಿಷೇಧ ಮಾಡಲಾಗಿತ್ತು: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿರುವ ಕೆಂಗಲ್ ಆಂಜನೇಯ ಸನ್ನಿಧಿಯಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಜಾತ್ರೆಯ ವಿಶೇಷವೇ ದನಗಳ ಜಾತ್ರೆ. ಈ ಜಾತ್ರೆಯಲ್ಲಿ ರಾಸುಗಳನ್ನು ಮಾರಲು ಹಾಗೂ ಖರೀದಿಸಲು ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜನ ಆಗಮಿಸುತ್ತಾರೆೆ. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ರೈತರಲ್ಲದೆ ತಮಿಳುನಾಡು, ಆಂಧ್ರ, ತೆಲಂಗಾಣದಿಂದಲೂ ರೈತರು ಬರುತ್ತಾರೆ. ಆದರೆ, ಈ ಬಾರಿ ನಿಷೇಧಕ್ಕೆ ತಲೆಕೆಡಿಸಿಕೊಳ್ಳದ ರೈತರು ನಿಧಾನವಾಗಿ ಜಾತ್ರೆ ಕಟ್ಟುತ್ತಿದ್ದಾರೆ. ಖರೀದಿದಾರರೂ ಸಹ ರಾಸುಗಳನ್ನು ಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ನಿಷೇಧ ಇರುವುದರಿಂದ ಈ ಬಾರಿ ತಾಲೂಕು ಆಡಳಿತದ ವತಿಯಿಂದ ನೀರು, ವಿದ್ಯುತ್ ಹಾಗೂ ಮೂಲಸೌಲಭ್ಯ ಒದಗಿಸಿಲ್ಲ. ಆದರೂ ತಲೆಕೆಡಿಸಿಕೊಳ್ಳದ ರೈತರು ಇವೆಲ್ಲವನ್ನು ವ್ಯವಸ್ಥೆ ಮಾಡಿಕೊಂಡಿದ್ದಾರೆ.

    ಸಂಪ್ರದಾಯ ಓಕೆ, ಜಾಗ್ರತೆ ಬೇಡವೇಕೆ? ಮಕರ ಸಂಕ್ರಾಂತಿ ದಿನ ರಾಸುಗಳಿಗೆ ಕಿಚ್ಚು ಹಾಯಿಸಿದ ನಂತರ, ರಾಸುಗಳನ್ನು ಮಾರಾಟ ಮಾಡಲಿಚ್ಛಿಸುವ ರೈತರು ಜಾತ್ರೆಗೆ ಬರುತ್ತಾರೆ. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಪಡಿಸಲಾಗಿತ್ತು. ಈ ಬಾರಿ ಚರ್ಮಗಂಟು ರೋಗ ಎಂದರೆ ಏನರ್ಥ? ರಾಸುಗಳನ್ನು ಮಾರಲು ಅಥವಾ ಕೊಳ್ಳಲು ಈ ಜಾತ್ರೆಯನ್ನೇ ನಂಬಿದ್ದೇವೆ ಎನ್ನುವುದು ರೈತರ ವಾದವಾಗಿದೆ. ಆದರೆ, ಮಾಹಿತಿಗಳ ಪ್ರಕಾರ, ಈಗಾಗಲೇ ಜಿಲ್ಲೆಯ 571 ಗ್ರಾಮಗಳ 3524 ಹಸುಗಳಿಗೆ ಚರ್ಮಗಂಟು ರೋಗ ತಗುಲಿದೆ. ಈ ಮಾರಣಾಂತಿಕ ಕಾಯಿಲೆಗೆ ಈಗಾಗಲೇ 319 ರಾಸುಗಳು ಮರಣಹೊಂದಿವೆ. ಈ ಕಾರಣದಿಂದ ಜಾನುವಾರುಗಳ ಬಗ್ಗೆ ಜಾಗ್ರತೆ ಇರಬೇಕಲ್ಲವೇ ಎಂಬ ಮಾತುಗಳು ಸಹ ಕೇಳಿಬಂದಿವೆ.

    ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ಜಾತ್ರೆಯನ್ನು ನಿಷೇಧಿಸಲಾಗಿದೆ. ಈ ನಡುವೆ ಕೆಲ ರೈತರು ಮಾಹಿತಿ ಕೊರತೆಯಿಂದ ರಾಸುಗಳನ್ನು ಜಾತ್ರೆಗೆ ಕರೆತಂದಿದ್ದಾರೆ. ನಾವೂ ಸಹ ನಿಷೇಧದ ಬಗ್ಗೆ ರೈತರಿಗೆ ಮತ್ತೊಮ್ಮೆ ತಿಳಿಸಿದ್ದೇವೆ. ದೇವಾಲಯದ ಹೊರಭಾಗದಲ್ಲಿ ಜಾತ್ರೆ ಕಟ್ಟಿದ್ದಾರೆ. ಇನ್ನೊಮ್ಮೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು.
    | ಲಕ್ಷ್ಮಿದೇವಿ, ಪ್ರಭಾರ ತಹಸೀಲ್ದಾರ್, ಚನ್ನಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts