More

    ಕಳೆಗುಂದಿದ ಬೆಳಗಾವಿ ಕುಂದಾ!

    ಬೆಳಗಾವಿ: ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆನಾಡ ಸೆರಗಿನ ಬೆಳಗಾವಿಯಲ್ಲಿ ತಯಾರಿಸುವ ಪಾರಂಪರಿಕ ಸಿಹಿ ಖಾದ್ಯಗಳು ದೇಶದಲ್ಲಿಯೇ ಪ್ರಖ್ಯಾತಿ ಪಡೆದಿವೆ. ಅದರಲ್ಲಿ ಬೆಳಗಾವಿ ಕುಂದಾ ಎಲ್ಲರ ಬಾಯಲ್ಲಿ ನೀರು ತರಿಸುವ ಖ್ಯಾತಿ ಹೊಂದಿದೆ. ಆದರೆ, ದೇಶ ವ್ಯಾಪಿ ಕರೊನಾ ಸೋಂಕಿನ ಭೀತಿ ಸಿಹಿ ಖಾದ್ಯ ಉದ್ಯಮಕ್ಕೆ ಕಹಿಯಾಗಿ ಪರಿಣಮಿಸಿದೆ.

    ಪ್ರವಾಸಿಗರಿಗೆ ಅಚ್ಚುಮೆಚ್ಚು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ತಾಣಗಳ ವೀಕ್ಷಣೆಗೆ ವರ್ಷಕ್ಕೆ ಎಲ್ಲ ಋತುವಿನಲ್ಲೂ ಲಕ್ಷ್ಷಾಂತರ ಪ್ರವಾಸಿಗರು ಬರುತ್ತಾರೆ. ಇಲ್ಲಿಂದ ವಾಪಸ್ ಮರಳುವಾಗ ಕುಂದಾ ತೆಗೆದುಕೊಂಡು ಹೋಗುವುದು ಒಂದು ರೀತಿ ಸಂಪ್ರದಾಯದಂತಾಗಿದೆ. ಹೀಗಾಗಿಯೇ ಬೆಳಗಾವಿ ಕುಂದಾನಗರಿ ಎಂದೇ ಹೆಸರುವಾಸಿ. ಕರೊನಾಂತಕದಿಂದ ದೇಶವೇ ಲಾಕ್‌ಡೌನ್ ಆಗಿದ್ದರಿಂದ ಇದೀಗ ಗ್ರಾಹಕರಿಲ್ಲದೆ ವ್ಯಾಪಾರಸ್ಥರಿಗೆ ಕುಂದಾ ಕಹಿಯಾಗಿ ಪರಿಣಮಿಸಿದೆ.

    ಮನೆಯಲ್ಲೇ ಉಳಿದ ಕುಂದಾ: ಕೇವಲ ಪ್ರವಾಸಿಗರು ಕೊಂಡೊಯ್ಯುತ್ತಿದ್ದಷ್ಟೇ ಅಲ್ಲದೆ ಬೆಳಗಾವಿ ಹಾಗೂ ಘಟಪ್ರಭಾ ಮಾರ್ಗಗಳಲ್ಲಿ ಸಂಚರಿಸುವ ಎಲ್ಲ ರೈಲ್ವೆಗಳಲ್ಲಿಯೂ ಕುಂದಾ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಇದೀಗ ಕರೊನಾ ವೈರಾಣು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಏ.14ರ ವರೆಗೆ ಇಡೀ ದೇಶ ಲಾಕ್‌ಡೌನ್ ಆಗಿದ್ದು, ಸಾರಿಗೆ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಮಾರಾಟಕ್ಕಾಗಿ ನೂರಾರು ಕುಟುಂಬಗಳು ತಯಾರಿಸಿದ್ದ ಟನ್‌ಗಟ್ಟಲೇ ಕುಂದಾ ಮನೆಯಲ್ಲಿಯೇ ಉಳಿದುಕೊಂಡಿದೆ.

    ಆನ್‌ಲೈನ್ ವ್ಯಾಪಾರವೂ ಆಫ್: ಕುಂದಾಕ್ಕೆ ಪಾರಂಪರಿಕವಾಗಿ ಬಹುಬೇಡಿಕೆ ಇತ್ತಾದರೂ, 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಮತ್ತು ಅದಕ್ಕೂ ಕೆಲ ವರ್ಷಗಳ ಮುನ್ನ ಆರಂಭವಾದ ಚಳಿಗಾಲದ ಅಧಿವೇಶನಗಳಿಂದ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ರತಿ ತಿಂಗಳು ಹೊರ ರಾಜ್ಯಗಳಿಗೆ ಬೇಡಿಕೆಗೆ ತಕ್ಕಂತೆ 70-80 ಟನ್ ಕುಂದಾ ಕಳುಹಿಸಲಾಗುತ್ತಿತ್ತು. ಇನ್ನೂ ಅಮೆರಿಕ, ಇಂಗ್ಲೆಂಡ್, ಬಾಂಗ್ಲಾದೇಶ ಸೇರಿ ವಿದೇಶಗಳಿಗೆ 20 ರಿಂದ 25 ಟನ್ ಕುಂದಾ ರಪ್ತಾಗುತ್ತಿತ್ತು. ಕೆಜಿ ಕುಂದಾಗೆ 280, 360, 400 ರಿಂದ 430 ರೂ. ದರ ನಿಗದಿ ಮಾಡಲಾಗುತ್ತಿತ್ತು. ಅದೇ ದರದಲ್ಲಿ ಹೊರರಾಜ್ಯಗಳಿಂದಲೂ ಆನ್‌ಲೈನ್ ಮೂಲಕ ಆರ್ಡ್‌ರ್ ಪಡೆದು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇದೀಗ ಹೊರ ರಾಜ್ಯಗಳ ಸಾರಿಗೆ-ಸಂಪರ್ಕ ಬಂದ್ ಮಾಡಿದ್ದರಿಂದ ಎಲ್ಲಿಯೂ ಕಳುಹಿಸಲಾಗುತ್ತಿಲ್ಲ. ಸ್ಥಳೀಯವಾಗಿಯೂ ಮಾರಾಟ ಸಾಧ್ಯವಾಗದೆ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

    ಈ ಕುರಿತು ವಿಜಯವಾಣಿ ಜತೆಗೆ ಮಾತನಾಡಿದ ಬೇಕರಿ ವ್ಯಾಪಾರಿ ಕೆ.ವಿ.ಪುರೋಹಿತ್, ಬೆಳಗಾವಿ ಕುಂದಾ ರಪ್ತು ಮಾಡುವಂತೆ ಹೊರ ರಾಜ್ಯಗಳು ಹಾಗೂ ವಿದೇಶಗಳಿಂದ ಬೇಡಿಕೆ ಇದೆ. ಆದರೆ, ಲಾಕ್‌ಡೌನ್‌ನಿಂದಾಗಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಹಿವಾಟು ನಿಂತಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಾನಿಯಾಗುತ್ತದೆ ಎಂದು ಸರ್ಕಾರದ ನಿಯಮ ಉಲ್ಲಂಘಿಸಿ ಕುಂದಾ ಸರಬರಾಜು ಮಾಡಲು ಮನಸ್ಸಿಲ್ಲ. ಏಕೆಂದೆರೆ ಸೋಂಕು ನಮ್ಮವರಿಗೆ ಹರಡದಿರಲಿ ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಜರುಗಿಸಿದೆ. ತಯಾರಿಸಿದ ಕುಂದಾ ಕಹಿಯಾದರೂ ಪರವಾಗಿಲ್ಲ ಕುಟುಂಬಕ್ಕೆ ಕರೊನಾ ಬರೋದು ಬೇಡ ಎಂದು ಆರ್ಥಿಕ ಸಂಕಷ್ಟದ ನಡುವೆಯೂ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿಯಲ್ಲಿ 220 ಸಿಹಿ ಖಾದ್ಯ ಮಾರಾಟ ಅಂಗಡಿಗಳಿವೆ. ನಮ್ಮ ಅಂಗಡಿಯಲ್ಲಿಯೇ ಕಳೆದ ಅಧಿವೇಶನದ ವೇಳೆ ಅಂದಾಜು 5 ಟನ್(5,000 ಕೆಜಿ) ಕುಂದಾ ಮಾರಾಟವಾಗಿತ್ತು. ಆದರೆ, ಈ ಬಾರಿ ಅಧಿವೇಶನವೂ ನಡೆಯಲಿಲ್ಲ. ಇದೀಗ ಕರೊನಾ ಹಾವಳಿಯಿಂದ ವ್ಯಾಪಾರವೂ ಸಂಪೂರ್ಣ ಸ್ತಬ್ಧವಾಗಿರುವುದರಿಂದ ಲಕ್ಷಾಂತರ ನಷ್ಟ ಸಂಭವಿಸಿದೆ.
    |ಇನಾಂದಾರ್ ಕುಂದಾ ತಯಾರಕರು, ಬೆಳಗಾವಿ

    ಪ್ರತಿ ರೈಲಿನಲ್ಲಿಯೂ ಕುಂದಾ ಮಾರಾಟ ಮಾಡುತ್ತಿದ್ದೆವು. ಕೆಲ ದಿನಗಳಿಂದ ರೈಲು ಸಂಚಾರ ಇಲ್ಲದ್ದರಿಂದ ಈಗಾಗಲೇ ಸಿದ್ಧಪಡಿಸಿದ್ದ 600 ಕೆಜಿ ಗೂ. ಅಧಿಕ ಪ್ರಮಾಣದ ಕುಂದಾ ಮನೆಯಲ್ಲಿಯೇ ಉಳಿದಿದೆ. ನಮ್ಮ ಇಡೀ ಕುಟುಂಬ ಕುಂದಾ ವ್ಯಾಪಾರದಿಂದಲೇ ಬದುಕು ಸಾಗಿಸುತ್ತಿತ್ತು, ಇದೀಗ ಏಕಾಏಕಿ ವ್ಯಾಪಾರವೇ ಇಲ್ಲವಾಗಿ ನಷ್ಟದಲ್ಲಿ ಸಿಲುಕಿದ್ದೇವೆ.
    |ವಿಜಯ ಬೆಳಗಾಂವಕರ್
    ಕುಂದಾ ವ್ಯಾಪಾರಿ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts