More

    ಸಕಾಲಕ್ಕೆ ದೊರೆಯದ ಸೌಲಭ್ಯ

    ಕೆ.ಆರ್.ಪೇಟೆ: ತಾಲೂಕಿನ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಜಾನುವಾರುಗಳ ಸಂರಕ್ಷಣೆ ಹಾಗೂ ರೈತರಿಗೆ ಸಕಾಲಕ್ಕೆ ಸೌಲಭ್ಯ ತಲುಪಿಸಲು ಈಗಿರುವ ಸಿಬ್ಬಂದಿ ಹೆಣಗಾಡುವಂತಾಗಿದೆ.

    ಪಶುವೈದ್ಯ ಇಲಾಖೆಯಲ್ಲಿ 92 ಮಂಜೂರಾತಿ ಹುದ್ದೆಗಳಿದ್ದು, ಇದರಲ್ಲಿ 59 ಖಾಲಿ ಇದೆ. ಶೇ.65ರಷ್ಟು ಹುದ್ದೆ ಭರ್ತಿಯಾಗಬೇಕಿದ್ದು, ಸದ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ಸಿಬ್ಬಂದಿ ಹೆಚ್ಚುವರಿಯಾಗಿ ಜವಾಬ್ದಾರಿ ನಿರ್ವಹಿಸುವ ಸ್ಥಿತಿ ಎದುರಾಗಿದೆ.
    ಜಾನುವಾರ ಸಂರಕ್ಷಣೆ ವಿಷಯದಲ್ಲಿ ರೈತರು ಪಶು ಇಲಾಖೆಯನ್ನೇ ಅವಲಂಬಿಸಿದ್ದಾರೆ. ಆದರೆ, ಇಲಾಖೆಯಲ್ಲಿ ವೈದ್ಯರಿಂದ ಹಿಡಿದು ಡಿ ದರ್ಜೆಯ ಹುದ್ದೆಗಳು ಖಾಲಿ ಇರುವುದರಿಂದ ಸೌಲಭ್ಯ ಪಡೆಯಲು ರೈತಾಪಿ ವರ್ಗಕ್ಕೆ ಸಮಸ್ಯೆಯಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕದೆ ಪರದಾಡುವಂತಾಗಿದೆ.

    ಏನೇನು ಸಮಸ್ಯೆ?: ರೈತರು ಕೃಷಿ ಜತೆಗೆ ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹಾಲು ಉತ್ಪಾದನೆಯಲ್ಲಿಯೂ ತಾಲೂಕಿನ ರೈತರು ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಹಾಲು ನೀಡುವ ಹಸು, ಎಮ್ಮೆಗಳಿಗೆ ಪ್ರಮುಖವಾಗಿ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಪಶುವೈದ್ಯರ ಮಾರ್ಗದರ್ಶನದ ಅವಶ್ಯಕತೆಯೂ ಬಹಳಷ್ಟಿದೆ. ಸಾಂಕ್ರಾಮಿಕ ರೋಗ ಬಾಧೆ ಬಂದಾಗಲಂತೂ ರೈತರ ಗೋಳು ಹೇಳತೀರದು. ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೆ ಅನೇಕ ಜಾನುವಾರುಗಳು ಮೃತಪಟ್ಟಿರುವ ಘಟನೆಗಳೂ ನಡೆದಿವೆ.
    ಇನ್ನು ಕೋಳಿ ಮತ್ತು ಕುರಿಗಳಿಗೂ ಸಾಮೂಹಿಕ ರೋಗ ಬಂದಾಗ ಅದನ್ನು ಶೀಘ್ರ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಪ್ರಮುಖ ಕಾರಣ ವೈದ್ಯರ ಕೊರತೆ ಎಂಬುದು ರೈತರ ದೂರು.

    ಹುದ್ದೆಗಳ ವಿವರ: ಮುಖ್ಯ ಪಶು ವೈದ್ಯಾಧಿಕಾರಿ- 6, ಹಿರಿಯ ಪಶು ವೈದ್ಯಾಧಿಕಾರಿ-6, ಜಾನುವಾರು ಅಧಿಕಾರಿಗಳು-3, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು-3, ಪಶು ವೈದ್ಯಕೀಯ ಪರೀಕ್ಷಕ-1, ಕಿರಿಯ ಪಶು ಪರೀಕ್ಷಕ- 5 ಹುದ್ದೆಗಳು ಖಾಲಿಯಿವೆ. ಇದರೊಂದಿಗೆ ವಾಹನ ಚಾಲಕ 1 ಹಾಗೂ ಡಿ ದರ್ಜೆ ನೌಕರರ 36 ಹುದ್ದೆ ಖಾಲಿ ಇವೆ. ಸರ್ಕಾರ ಈ ಸಂಬಂಧ ಶೀಘ್ರ ಕ್ರಮ ವಹಿಸುವ ಅಗತ್ಯವಿದೆ.

    ಪಶು ಇಲಾಖೆಯಲ್ಲಿ ಪ್ರತಿ ವಷರ್ ಒಂದೊಂದು ಹೊಸ ಯೋಜನೆ ಸೇರ್ಪಡೆಯಾಗುತ್ತಿದ್ದು, ಇರುವ ಸಿಬ್ಬಂದಿಯೇ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಹೊಣೆ ಹೊತ್ತಿದ್ದಾರೆ. ಆದರೆ ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲಾಗದೆ ಸಮರ್ಪಕ ಸೇವೆ ನೀಡಲು ಆಗುತ್ತಿಲ್ಲ.

    ವರ್ಷದಲ್ಲಿ ನಾಲ್ಕು ಬಾರಿ ಲಸಿಕೆ ಅಭಿಯಾನ ನಡೆಯಲಿದೆ. ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದರ ಜತೆಗೆ ಕುರಿ, ಮೇಕೆ, ಜಾನುವಾರು ಆಕಸ್ಮಿಕವಾಗಿ ಮೃತಪಟ್ಟರೆ ಮಹಜರು ನಡೆಸಿ ವರದಿ ನೀಡಬೇಕು. ಇದರೊಂದಿಗೆ ವಿಮೆ ದೃಢೀಕರಣ ಕೆಲಸವನ್ನೂ ವೈದ್ಯರು ಮಾಡಬೇಕಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹುದ್ದೆಗಳು ಖಾಲಿ ಇರುವುದರಿಂದ ಕಾಲುಬಾಯಿ ಜ್ವರ ಹಾಗೂ ಇತರ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ.

    ತಾಲೂಕಿನಲ್ಲಿ ರೈತರು ಪ್ರಮುಖವಾಗಿ ಒಕ್ಕಲುತನ, ಹೈನುಗಾರಿಕೆ, ಕುರಿ ಸಾಕಣೆ ಮಾಡುತ್ತಿದ್ದು, ಸದ್ಯ ಮಳೆಗಾಲ ಇರುವುದರಿಂದ ಜಾನುವಾರುಗಳಲ್ಲಿ ಸಾಮಾನ್ಯವಾಗಿ ಗಂಟಲು ಬೇನೆ, ಕಾಲುಬೇನೆ, ಕರುಳು ಬೇನೆ ಕಾಣಿಸಿಕೊಳ್ಳುತ್ತದೆ. ರೈತರು ಜಾನುವಾರು, ಕುರಿ-ಮೇಕೆಗಳ ಚಿಕಿತ್ಸೆಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ.

    ನಿರೀಕ್ಷಿತ ಗುರಿ ಸಾಧನೆಗೆ ತೊಡಕು: ತಾಲೂಕಿನ ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತಾಪಿ ಸಮೂಹಕ್ಕೆ ಅಗತ್ಯ ಸೇವೆ ಸಿಗುತ್ತಿಲ್ಲ. ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೂ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗತ್ತಿಲ್ಲ. ದೇಸಿ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಪಶು ಆರೋಗ್ಯ ಸೇವೆ ಕಲ್ಪಿಸುವುದು, ಬ್ಯಾಕ್ಟೀರಿಯಾ, ವೈರಸ್ ರೋಗಗಳ ಪತ್ತೆ ಹಚ್ಚುವಿಕೆ, ರೋಗಗಳಿಂದ ನರಳುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ಹಾಗೂ ಪ್ರಾಣಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ, ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವುದು ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲು ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ಸಿಬ್ಬಂದಿ ಕೊರತೆ.

    ತಾಲೂಕಿನಲ್ಲಿ 8 ಪಶು ಚಿಕಿತ್ಸಾ ಕೇಂದ್ರ, 9 ಪಶು ಚಿಕಿತ್ಸಾಲಯ, 6 ಪಶು ಆಸ್ಪತ್ರೆಗಳಿವೆ. ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಪಶು ಚಿಕಿತ್ಸೆ ಕೇಂದ್ರಗಳಿಗೆ ಬೇಡಿಕೆಯಿದ್ದು, ಸರ್ಕಾರ ಹೊಸ ಕೇಂದ್ರಗಳ ಸ್ಥಾಪನೆಗೆ ಕ್ರಮವಹಿಸಬೇಕು. ವೈದ್ಯರು ಜರ್ಸಿ ಹಸುಗಳ ತಪಾಸಣೆ, ಚಿಕಿತ್ಸೆಗೆ ದೂರದ ಊರುಗಳಿಗೆ ತೆರಳುತ್ತಿದ್ದು, ಕನಿಷ್ಠ ಪಂಚಾಯಿತಿಗೊಂದು ಕೇಂದ್ರ ಸ್ಥಾಪನೆಯಾದರೆ ಒತ್ತಡ ಕಡಿಮೆಯಾಗಿ ರೈತರಿಗೆ ಸಕಾಲದಲ್ಲಿ ಸೇವೆ ಸಿಗಲಿದೆ.

    ತಾಲೂಕಿನ ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆಯಿದ್ದರೂ ರೈತರಿಗೆ ಇಲಾಖೆಯಿಂದ ಯಾವುದೇ ಸಮಸ್ಯೆಯಾಗದಂತೆ ಒತ್ತಡದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.
    ಡಾ.ದೇವರಾಜು ಸಹಾಯಕ ನಿರ್ದೇಶಕ, ಪಶುವೈದ್ಯ ಇಲಾಖೆ, ಕೆ.ಆರ್.ಪೇಟೆ

    ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜರ್ಸಿ ಹಸುಗಳು, ಎಮ್ಮೆಗಳನ್ನು ಸಾಕುತ್ತಾರೆ. ಸದ್ಯ ಮಳೆಗಾಲ ಇರುವುದರಿಂದ ಜಾನುವಾರು ಹಾಗೂ ಕುರಿ-ಮೇಕೆಗಳಿಗೆ ವಿವಿಧ ಕಾಯಿಲೆಗಳು ಎದುರಾಗುತ್ತದೆ. ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರ-ಸಿಬ್ಬಂದಿ ಕೊರತೆಯಿಂದ ಹೈನುಗಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ರೈತರಿಗೆ ತಲುಪುತ್ತಿಲ್ಲ. ಆದ್ದರಿಂದ, ಸಿಬ್ಬಂದಿ ಶೀಘ್ರ ಭರ್ತಿ ಮಾಡಿದರೆ ರೈತರು, ಜಾನುವಾರುಗಳಿಗೆ ಸಹಕಾರಿಯಾಗಲಿದೆ.
    ರಾಘವೇಂದ್ರ, ಯುವ ರೈತ, ಸಿಂಧಘಟ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts