More

    ಸೌಲಭ್ಯ ವಂಚಿತ ವೀರಾಪೂರ

    ಗಜೇಂದ್ರಗಡ: ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಅಸಡ್ಡೆ ಜತೆಗೆ ಜನರ ಸೂಕ್ತ ಸ್ಪಂದನೆ ದೊರೆಯದೆ ಇದ್ದರೆ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿದರೂ ಕಾಮಗಾರಿಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಸಮೀಪದ ವೀರಾಪೂರ ಗ್ರಾಮವೇ ಸಾಕ್ಷಿ.

    ಗ್ರಾಮದಲ್ಲಿ ಗಟಾರ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಜನರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ತಾಲೂಕು ಕೇಂದ್ರದಿಂದ 5 ಕಿಮೀ ದೂರದಲ್ಲಿರುವ ವೀರಾಪೂರ ಗ್ರಾಮ ಮೂಲಸೌಲಭ್ಯದಿಂದ ವಂಚಿತವಾಗಿದೆ. ಸುಮಾರು 1300 ಜನಸಂಖ್ಯೆ ಹೊಂದಿರುವ ವೀರಾಪೂರ ಗ್ರಾಮ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದೆ.

    ಬಸ್ ಸೌಲಭ್ಯ ಇಲ್ಲ: ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲ. ಗ್ರಾಮಸ್ಥರ ಒತ್ತಡದ ಮೇರೆಗೆ ಇಲ್ಲಿ ಕೆಲ ವರ್ಷಗಳ ಹಿಂದೆ ಸಾರಿಗೆ ಇಲಾಖೆ ಬಸ್ ಸೌಲಭ್ಯ ಕಲ್ಪಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ಗ್ರಾಮದಲ್ಲಿ ಒಂದೇ ಒಂದು ಸಾರ್ವಜನಿಕ ಮಹಿಳಾ ಶೌಚಗೃಹವಿದೆ. ಅದೂ ಉಪಯೋಗಕ್ಕೆ ಬಾರದಂತಹ ಸ್ಥಿತಿ ತಲುಪಿದೆ. 2003ರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ಶೌಚಗೃಹದ ಸುತ್ತಲೂ ಗಿಡ ಕಂಟಿಗಳು ಬೆಳೆದು ಶಿಥಿಲಗೊಂಡಿದೆ.

    ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ: ಹಿಂದಿನ ಶಾಸಕರು ಗಜೇಂದ್ರಗಡ ಬಸ್ ಡಿಪೋದಿಂದ ವೀರಾಪೂರ ಗ್ರಾಮಕ್ಕೆ ತೆರಳಲು ಸಿಸಿ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡು

    ಎರಡೂವರೆ ವರ್ಷವಾದರೂ ಶೇ.80 ರಷ್ಟು ಮಾತ್ರ ಕೆಲಸ ಮುಗಿದಿದೆ. ಅದೂ ಕಳಪೆಯಾಗಿದ್ದರಿಂದ ಅಲ್ಲಲ್ಲಿ ಕಿತ್ತು ಹೋಗಿದೆ. ವೀರಾಪೂರ ಸರ್ಕಾರಿ ಶಾಲೆಯಿಂದ ಊರಿನ ಒಳಗಡೆ ಹೋಗುವ ರಸ್ತೆ ಪೂರ್ಣಗೊಂಡಿಲ್ಲ ಇದರಿಂದ ವೃದ್ಧ್ದು, ಮಕ್ಕಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಇಬ್ಬರು ಗ್ರಾಪಂ ಸದಸ್ಯರಿದ್ದರೂ ಗ್ರಾಮ ಮೂಲಸೌಲಭ್ಯದಿಂದ ವಂಚಿತಗೊಂಡಿದೆ.

    ಗ್ರಾಮದಲ್ಲಿ ಶೀಘ್ರ ಮಹಿಳಾ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಗುವುದು.

    | ಯಲ್ಲವ್ವ ಸಾಬಳೆ, ಮಳಿಯವ್ವ ಗೌಡರ, ಗ್ರಾಮಸ್ಥರು

    ಮಹಿಳೆಯರಿಗೆ ಗ್ರಾಪಂ ವತಿಯಿಂದ ಶೌಚಗೃಹ ಕಟ್ಟಿಸಲು ಅವಕಾಶ ಇದೆ. ಯಾರಾದರೂ ಅದನ್ನು ನಿರ್ವಹಣೆ ಮಾಡಲು ಮುಂದೆ ಬಂದರೆ ಶೀಘ್ರ ಗ್ರಾಪಂ ವತಿಯಿಂದ ಮಂಜೂರು ಮಾಡಲಾಗುವುದು. ಗ್ರಾಮವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

    | ಶರಣಪ್ಪ ನರೇಗಲ್ಲ, ಪಿಡಿಒ ರಾಂಪೂರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts