ಮೂಡಿಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದೆ. ಸರ್ಕಾರ ನಿರ್ವಹಿಸಬೇಕಾದ ಕೆಲಸಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜನೆಯಿಂದ ಹಮ್ಮಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಸವಲತ್ತುಗಳನ್ನು ಪಡೆದು ಸಬಲರಾಗುತ್ತಿದ್ದಾರೆ. ಧರ್ಮಸ್ಥಳದ ಸವಲತ್ತುಗಳು ಫಲಾನುಭವಿಗಳನ್ನು ತಲುಪುತ್ತಿವೆ ಎಂದು ತಾಪಂ ಇಒ ಡಾ. ರಮೇಶ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಶೌರ್ಯ ವಿಪತ್ತು ನಿರ್ವಹಣೆ ಘಟಕ ಆಶ್ರಯದಲ್ಲಿ ಗುರುವಾರ ಹೊಸನಗರದಲ್ಲಿ ಆಯೋಜಿಸಿದ್ದ ಗಾಂಧಿ ಸ್ಮತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಸೀಮಿತವಾಗಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿರುವುದರಿಂದ ಗ್ರಾಮೀಣ ಜನರಿಗೆ ಸವಲತ್ತು ಸಿಗುತ್ತಿದೆ. ಜನ ಸರ್ಕಾರಿ ಕಚೇರಿಗಳ ಮೊರೆ ಹೋಗುವುದಕ್ಕಿಂತ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಕಚೇರಿಗೆ ಹೆಚ್ಚಾಗಿ ಹೋಗುತ್ತಿರುವುದು ಕಂಡುಬರುತ್ತಿದೆ. ಇದು ಸಾಧನೆ ಎಂದರು.
ಹೆಸಗಲ್ ಗ್ರಾಪಂ ಅಧ್ಯಕ್ಷೆ ನಜ್ಮಾ ಬೇಗಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್, ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ, ಗ್ರಾಪಂ ಉಪಾಧ್ಯಕ್ಷ ಎಚ್.ಆರ್.ಆದರ್ಶ್, ಶೌರ್ಯ ವಿಪತ್ತು ಘಟಕದ ತಾಲೂಕು ಅಧ್ಯಕ್ಷ ಪ್ರವೀಣ್ ಪೂಜಾರಿ, ಗ್ರಾಪಂ ಸದಸ್ಯ ಅಹಮದ್, ಯೋಜನೆಯ ಬಣಕಲ್ ಘಟಕದ ಸಂಯೋಜಕ ಕೆ.ಎಲ್.ರವಿ, ದಾಮೋದರ, ಕಿಶೋರ್ ಇತರರಿದ್ದರು.