More

    ಫೇಸ್​ಬುಕ್ ಫೇಕ್ ರಿಕ್ವೆಸ್ಟ್ ಜನಸಾಮಾನ್ಯರೇ ಟಾರ್ಗೆಟ್; ಕೇವಲ ಮೆಸೇಜ್ ನೋಡಿ ಹಣ ಕೊಡಬೇಡಿ..

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಫೇಸ್​ಬುಕ್ ಜಾಲತಾಣದಲ್ಲಿ ಸ್ನೇಹಿತರು, ಪರಿಚಯಸ್ಥರಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಎಚ್ಚರ. ಖಾತೆಯನ್ನು ಖಚಿತಪಡಿಸಿ ಕೊಳ್ಳದೇ ಕೇವಲ ಪ್ರೊಫೈಲ್ ಫೋಟೊ ನೋಡಿ ಅವರನ್ನು ಅಕ್ಸೆಪ್ಟ್ ಮಾಡಿಕೊಂಡರೆ ದುಬಾರಿ ಬೆಲೆ ತೆರಬೇಕಾಗಬಹುದು! ಕರೊನಾ ಸಂಕಷ್ಟದ ಸಂದರ್ಭದಲ್ಲೇ ನಕಲಿ ಖಾತೆಗಳನ್ನು ಸೃಷ್ಟಿಸಿ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಸೈಬರ್ ವಂಚಕರು ಆರಂಭದಲ್ಲಿ ಗಣ್ಯರು, ಶ್ರೀಮಂತರು, ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಸಲಿ ಖಾತೆಗೆ ಹೋಲುವ ಅವರ ಪ್ರೊಫೈಲ್ ಚಿತ್ರಗಳನ್ನೇ ಬಳಸಿ, ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ನಂತರ ಚಾಟ್ ಶುರು ಮಾಡಿ, ತುರ್ತಾಗಿ ಹಣದ ಅಗತ್ಯವಿದೆ ಎಂದು ನಂಬಿಸಿ, 5 ರಿಂದ 20 ಸಾವಿರ ರೂಪಾಯಿಗಳನ್ನು ಗೂಗಲ್ ಪೇ, ಫೋನ್ ಪೇನಂತಹ ವ್ಯಾಲೆಟ್​ಗೆ ಜಮಾ ಮಾಡುವಂತೆ ಮನವಿ ಮಾಡುತ್ತಾರೆ. ಅನೇಕ ಮಂದಿ ಹಣ ಜಮಾ ಮಾಡಿದ ಮೇಲೆ ಫೋನ್ ಮಾಡಿ ವಿಚಾರಿಸಿದಾಗ ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದೆ. ಅಷ್ಟರಲ್ಲಿ ಲಕ್ಷಾಂತರ ರೂಪಾಯಿ ಸೈಬರ್ ಕಳ್ಳರ ಪಾಲಾಗಿರುತ್ತದೆ. ಇಂಥ ಹಲವು ಪ್ರಕರಣಗಳು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಖದೀಮರು ಸಾಮಾನ್ಯರ ಖಾತೆಗಳನ್ನು ನಕಲು ಮಾಡಿ, ಅವರ ಸ್ನೇಹಿತರಿಂದ ಹಣ ಕೀಳುತ್ತಿದ್ದಾರೆ.

    ಕರೊನಾ ನೆಪ: ಕರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತಾಗಿ ಹಣ ಬೇಕೆಂದು ವ್ಯಾಲೆಟ್​ಗೆ ಜಮೆ ಮಾಡಿಸಿಕೊಂಡ ಉದಾಹರಣೆ ಇದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ವಿದೇಶದಲ್ಲಿ ಇರುವ ಬಾಲ್ಯದ ಸ್ನೇಹಿತನ ಸೋಗಿನಲ್ಲಿ ಹಣ ಪಡೆಯಲಾಗಿದೆ. ಹಣ ವರ್ಗಾವಣೆ ಆದ ಮೇಲೆ ಸ್ನೇಹಿತನಿಗೆ ಕರೆ ಮಾಡಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದು ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.

    3 ತಿಂಗಳಲ್ಲಿ ಒಂದೂವರೆ ಸಾವಿರ ಕೇಸ್: ಜನವರಿಯಿಂದ ಮಾರ್ಚ್ ಅಂತ್ಯದ ವೇಳೆ 1472 ಸೈಬರ್ ಕ್ರೖೆಂ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1043 ಕೇಸು ದಾಖಲಾಗಿದ್ದವು. ಫೆಬ್ರವರಿಯಲ್ಲಿ 431, ಮಾರ್ಚ್​ನಲ್ಲಿ 479 ಸೈಬರ್ ಕ್ರೖೆಂ ಕೇಸುಗಳು ರಾಜ್ಯದಲ್ಲಿ ದಾಖಲಾಗಿವೆ. ಸೈಬರ್ ವಂಚಕರು ಹಿರಿಯ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಮತ್ತು ಪಿ. ಹರಿಶೇಖರನ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಆಪ್ತರಿಗೆ ಎಸ್​ಎಂಎಸ್ ಮಾಡಿ ಹಣದ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ವರದಿಗಾರನ ಬಳಿ 5 ಸಾವಿರ ರೂ. ಹಣ ಕೇಳಿದ್ದರು.

    ವಂಚನೆಗೆ ತರಬೇತಿ!: ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ ಮುಂತಾಗಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಸೈಬರ್ ಕ್ರೖೆಂ ಎಸಗುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಹೈಸ್ಕೂಲ್​ವರೆಗೆ ಓದಿರುವ ಯುವಕರನ್ನು ಗುಂಪಾಗಿ ಮಾಡಿ ತರಬೇತಿ ನೀಡಲಾಗುತ್ತದೆ. ಅದಕ್ಕೆ ಬೇಕಾದ ಲ್ಯಾಪ್​ಟಾಪ್, ಮೊಬೈಲ್, ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಒದಗಿಸಿಕೊಂಡು ಯುವಕರು ಪ್ರತಿದಿನ ಸೈಬರ್ ಕ್ರೖೆಂ ಮಾಡುವುದನ್ನೇ ವೃತ್ತಿ ಮಾಡಿಕೊಂಡು ನೂರಾರು ಮಂದಿಗೆ ಬಲೆಬೀಸುತ್ತಾರೆ. ಬಂದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.

    ನಕಲಿ ಖಾತೆ ಬಗ್ಗೆ ಜಾಗೃತಿ ಇರಲಿ

    • ಫೇಸ್​ಬುಕ್, ಟ್ವಿಟರ್ ಖಾತೆಯಲ್ಲಿ ಡೇಟಾ ಕದಿಯಲು ಬಿಡದಂತೆ ಫ್ರೊಫೈಲ್ ಲಾಕ್ ಮಾಡಿ
    • ಜಾಲತಾಣದಲ್ಲಿ ಹಣ ಕೇಳಿದರೆ ಸಂಬಂಧಿಸಿದವರ ಮೊಬೈಲ್​ಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ
    • ಒಮ್ಮೆ ಫ್ರೆಂಡ್ ಆಗಿರುವ ಸ್ನೇಹಿತನ ಕಡೆಯಿಂದ ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಬಂದರೆ ಎಚ್ಚರ ವಹಿಸಿ
    • ನಿಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ತಿಳಿದರೆ ಕೂಡಲೇ ಆಪ್ತರಿಗೆ ತಿಳಿಸಿ
    • ನಕಲಿ ಖಾತೆ ಕುರಿತು ಫೇಸ್​ಬುಕ್, ವಾಟ್ಸ್ ಆಪ್​ನಲ್ಲಿ ಮಾಹಿತಿ ಹಂಚಿಕೊಳ್ಳಿ, ಸಾಧ್ಯವಾದರೆ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts