More

    ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ

    ಶೃಂಗೇರಿ: ಮಹಿಳೆಯರಿಗೆ ಸರ್ಕಾರ ಹೆಚ್ಚಿನ ರಕ್ಷಣೆ ಮತ್ತು ಏಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದು, ಸರ್ಕಾರಿ ಸವಲತ್ತು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಹೇಳಿದರು.

    ಮೆಣಸೆ ಗ್ರಾಪಂನಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನು ರಚಿಸಿದ್ದರೂ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಮಹಿಳೆಯರು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
    ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಬೇಬಿ ಮಾತನಾಡಿ, ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಪ್ರದೇಶದಲ್ಲಿ ಮಂಗ ಸತ್ತಿದ್ದರೆ ತಕ್ಷಣ ಗ್ರಾಪಂ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
    ಸಿಡಿಪಿಒ ಎನ್.ಜಿ.ರಾಘವೇಂದ್ರ ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಗೆ ವಿಶೇಷ ಕಾನೂನು ಇದ್ದರೂ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದುದು ಪತ್ತೆ ಮಾಡಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಎಂದರು.
    ಮಹಿಳಾ ಸಾಂತ್ವನ ಕೇಂದ್ರದ ಸೃಷ್ಟಿ, ಆರೋಗ್ಯ ಇಲಾಖೆಯ ನೇಹಾ ಮಾತನಾಡಿದರು. ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 100 ಮೀ ಓಟದಲ್ಲಿ ಉಮಾ ಚಂದ್ರಶೇಖರ್ (ಪ್ರ), ಶಿಲ್ಪಾ ಚಂದ್ರು (ದ್ವಿ), ರಂಗೋಲಿಯಲ್ಲಿ ಸುಮಾ ಶೇಷಗಿರಿ (ಪ್ರ) ಮತ್ತು ಸುಷ್ಮಾ (ದ್ವಿ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸ್ವಾಭಿಮಾನಿ ತಂಡ (ಪ್ರ) ಮತ್ತು ಸ್ಫೂರ್ತಿ ತಂಡ ದ್ವಿತೀಯ ಸ್ಥಾನ ಪಡೆದವು.
    ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ತ್ರಿಮೂರ್ತಿ, ಶಾಮಣ್ಣ, ಸುಷ್ಮಾ, ಸಹನಾ, ಕವಿತಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ, ಪಿಡಿಒ ನಾಗಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts