More

    ಹು-ಧಾ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮೇಲೆ ಕಣ್ಣು

    ಸಂತೋಷ ವೈದ್ಯ ಹುಬ್ಬಳ್ಳಿ
    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆ ನಡೆದು ಎರಡು ವಾರಗಳು ಕಳೆದಿದೆ.

    ಇದೀಗ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಮೇಲೆ ಕಾರ್ಪೊರೇಟರ್‌ಗಳ ಕಣ್ಣು ನೆಟ್ಟಿದೆ.


    2022-23ರ ಸಾಲಿನಲ್ಲಿ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಜುಲೈ 11 (2022)ರಂದು ನಡೆಸಲಾಗಿತ್ತು.

    ಇದರರ್ಥ, ಹಿಂದಿನ ಸ್ಥಾಯಿ ಸಮಿತಿಗಳ ಅವಧಿ ಜು. 10ರಂದು ಕೊನೆಗೊಳ್ಳಲಿದೆ. ನೂತನ ಮೇಯರ್-ಉಪ ಮೇಯರ್ ಆಯ್ಕೆಯಾಗುವುದರ ಜತೆಗೆ ಹಿಂದಿನ ಸ್ಥಾಯಿ ಸಮಿತಿಗಳ ಅವಧಿಯೂ ಕೊನೆಗೊಳ್ಳಲಿದೆ ಎಂಬ ಅರ್ಥವೂ ಇದೆ.


    ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿಯೇ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕು.

    ಚುನಾವಣೆ ದಿನಾಂಕವನ್ನು ಅವರೇ ನಿಗದಿಪಡಿಸುತ್ತಾರೆ. ನಿತೇಶ ಪಾಟೀಲ ಅವರು ಪ್ರಭಾರ ಪ್ರಾದೇಶಿಕ ಆಯುಕ್ತರಾಗಿದ್ದಾರೆ. ಅವರಿಗೆ ಕೆಲ ದಿನಗಳ ಹಿಂದೆ ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಪತ್ರ ಬರೆದು, ಹಾಲಿ ಸ್ಥಾಯಿ ಸಮಿತಿಗಳ ಅವಧಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.


    4-3ರ ಸೂತ್ರ: ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಸಬೇಕು.


    ಪ್ರತಿ ಸಮಿತಿಗೆ 7 ಸದಸ್ಯರು ಆಯ್ಕೆಯಾಗುತ್ತಾರೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ನಡುವೆ 4-3ರ ಸೂತ್ರದಡಿ ಸದಸ್ಯ ಸ್ಥಾನ ಹಂಚಿಕೆಯಾಗುತ್ತದೆ. ಹಿಂದಿನ ಅವಧಿಗೆ ಪಾಲಿಕೆಯ ಸದಸ್ಯರ ಸಂಖ್ಯೆ 67ರಿಂದ 82ಕ್ಕೆ ಏರಿಕೆಯಾದರೂ ಸ್ಥಾಯಿ ಸಮಿತಿಗಳ ಸದಸ್ಯರ ಸಂಖ್ಯೆಯಲ್ಲಿ ಯಾವುದೇ ಏರಿಕೆಯಾಗಿರಲಿಲ್ಲ. ಈ ಬಾರಿಯೂ ಹಾಗೇ ಮುಂದುವರಿಯಲಿದೆ.


    4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ. ಮೇಯರ್-ಉಪ ಮೇಯರ್ ಹಾಗೂ ಆಡಳಿತಾರೂಢ ಪಕ್ಷದ ಮುಖಂಡರ ಶಿಫಾರಸ್ಸಿನ ಮೇಲೆ ಆಯ್ಕೆ ನಡೆಯುತ್ತದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಬಿಜೆಪಿಗೆ ದಕ್ಕಲಿದೆ.

    ಮೇಯರ್-ಉಪ ಮೇಯರ್ ಸ್ಥಾನವನ್ನು ಸ್ವಲ್ಪದರಲ್ಲಿ ಕಳೆದುಕೊಂಡವರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ನೀಡಿ ಸಮಾಧಾನ ಪಡಿಸಲಾಗುತ್ತದೆ. ಹಿಂದಿನ ಅವಧಿಯಲ್ಲಿ ಮೇಯರ್ ಆಕಾಂಕ್ಷಿಯಾಗಿದ್ದ ವಿಜಯಾನಂದ ಶೆಟ್ಟಿಗೆ ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.


    ಚುನಾವಣೆ ದಿನಾಂಕ ನಿಗದಿಯಾಗದೇ ಇರುವುದರಿಂದ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಪೈಪೋಟಿ ಅಷ್ಟಾಗಿ ಕಂಡು ಬಂದಿಲ್ಲ. ಆದರೆ, ಮೇಯರ್-ಉಪ ಮೇಯರ್ ಸ್ಥಾನ ಕೈ ತಪ್ಪಿದವರು ಸ್ಥಾಯಿ ಸಮಿತಿಗಳ ಸದಸ್ಯ (ಬಳಿಕ ಅಧ್ಯಕ್ಷರಾಗುವ ಅವಕಾಶ ಇರುತ್ತದೆ) ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

    ಅದರಲ್ಲೂ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯನ್ನೇ ಎಲ್ಲರೂ ಬಯಸುತ್ತಾರೆ.
    ಸಭಾನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಗಳು ಒಂದೆರಡು ದಿನಗಳಲ್ಲಿ ನಿರ್ಧಾರವಾಗಲಿದ್ದು, ಇದರ ಆಧಾರದ ಮೇಲೂ ಸ್ಥಾಯಿ ಸಮಿತಿ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆಯ ಲೆಕ್ಕಾಚಾರ ಇರುತ್ತದೆ.


    ಪಾತ್ರ ಹಿರಿದು

    ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ತರುವ ಬಹುತೇಕ ವಿಷಯಗಳು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಗೆ ತಂದ ನಂತರವೇ ಸಾಮಾನ್ಯ ಸಭೆಗೆ ಮಂಡಿಸಲಾಗುತ್ತದೆ. ವಿವಿಧ ಕಾಮಗಾರಿಗಳು, ಅನುದಾನದ ಹಂಚಿಕೆ ವಿಷಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯಕ್ಕೆ ಬರುತ್ತದೆ. ಈ ದೃಷ್ಟಿಯಿಂದ ಸ್ಥಾಯಿ ಸಮಿತಿಗಳು ಮಹತ್ವ ಪಡೆದುಕೊಂಡಿದೆ. ಬಜೆಟ್ ಮಂಡನೆ ಲೆಕ್ಕದಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಯ ಪಾತ್ರ ಹಿರಿದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts