More

    ಅತಿವೃಷ್ಟಿಯಿಂದ ಬೆಳೆ, ಜಮೀನಿಗೆ ಹಾನಿ

    ಗುತ್ತಲ: ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗ್ಗೆವರೆಗೆ ಸುರಿದ ಭಾರಿ ಮಳೆಯಿಂದ ಗುತ್ತಲ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

    ಭಾರಿ ಗಾಳಿ, ಗುಡುಗು ಹಾಗೂ ಸಿಡಿಲಿನೊಂದಿಗೆ ಸುರಿದ ಮಳೆ ಆರ್ಭಟಕ್ಕೆ ಜಮೀನುಗಳಲ್ಲಿನ ಒಡ್ಡು (ಬದು) ಒಡೆದು ಹೋಗಿದ್ದು, ಹೊಲಗಳಲ್ಲಿ ಕೊನ್ನಾರ (ಕೊರಕಲು) ಬಿದ್ದು ಅಪಾರ ಮಣ್ಣು ನೀರಿನೊಂದಿಗೆ ಕೊಚ್ಚಿ ಹೋಗಿದೆ.

    ವಿವಿಧ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೋ, ಬದನೆ, ಚಿಕ್ಕು, ಪೇರಲ, ಪಪ್ಪಾಯಿ, ದಾಳಿಂಬೆ ಬೆಳೆ ನೆಲಕ್ಕೆ ಬಿದ್ದು ಹಾನಿಯಾಗಿದೆ. ಇನ್ನೊಂದೆಡೆ ಬೀಜೋತ್ಪಾದನೆಯ ಸವತೆ ಹಾಗೂ ಬೆಂಡೆ ಸೇರಿ ಬಹುತೇಕ ಬೆಳೆ ಹಾಳಾಗಿದೆ.

    ಗುತ್ತಲ, ಬಸಾಪುರ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ರೈತರ ರೇಷ್ಮೆ ಮನೆಗಳಿಗೆ ಮಳೆ- ಗಾಳಿಯಿಂದ ಭಾಗಶಃ ಹಾನಿಯಾಗಿದೆ. ಕೆಲ ರೈತರ ರೇಷ್ಮೆ ಗುಡಿಸಲುಗಳು ನೆಲಕ್ಕರುಳಿವೆ.

    ಗುತ್ತಲ, ಹಳೇರಿತ್ತಿ, ಹೊಸರಿತ್ತಿ, ಬೆಳವಿಗಿ, ನೆಗಳೂರ, ತಿಮ್ಮಾಪುರ, ಕಂಚಾರಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿತ್ತು. ನೀರು ಕಡಿಮೆ ಆಗುವರೆಗೂ ಕಾದು ನಂತರ ಸಂಚಾರ ಮಾಡಬೇಕಾಯಿತು.

    ಬೆಳವಿಗಿ ಗ್ರಾಮದ ಬಳಿಯ ಗದಗ-ಹೊನ್ನಾಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಪಕ್ಕ ಚರಂಡಿ ನಿರ್ವಿುಸದ ಪರಿಣಾಮ ಮಳೆ ನೀರು ಜಮೀನುಗಳಿಗೆ ರಭಸವಾಗಿ ಹರಿದ ಬದು, ಮಣ್ಣು ಕೊಚ್ಚಿಕೊಂಡು ಹೋಗಿದೆ.

    ಪಟ್ಟಣದ ಕುಂಬಾರಗಟ್ಟಿ ಹಳ್ಳದ ಕಲ್ಲಿನ ತೋಬು (ಜಾಲಗಟ್ಟು) ಒಡೆದು ಅಪಾರ ಪ್ರಮಾಣದ ನೀರು ಹರಿಯಿತು.

    ಪಟ್ಟಣದ ಜೌಳಾಳದ ಬಳಿಯ ಹಳ್ಳವೂ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೂ ತುಂಬಿ ಹರಿಯಿತು. ಅಲ್ಲದೆ, ರಸ್ತೆಯ ಪಕ್ಕದ ಕಚ್ಚಾ ಚರಂಡಿಯಲ್ಲಿ ಕಸ, ತ್ಯಾಜ್ಯ ತುಂಬಿಕೊಂಡಿದ್ದರಿಂದ ಹಳ್ಳಕ್ಕೆ ಹೋಗಬೇಕಾಗಿದ್ದ ನೀರು ರಸ್ತೆಯ ಮೇಲೆ ಹರಿದು ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಇದೇ ಪ್ರದೇಶ ಕೆಲ ಮನೆಗಳಿಗೆ ನುಗ್ಗಿದ್ದ ಮಳೆ ನೀರು ಹೊರಹಾಕಲು ಜನರು ಪ್ರಯಾಸಪಡುವಂತಾಯಿತು.

    ಗುತ್ತಲ ಪಟ್ಟಣದಲ್ಲಿನ ಹಾವೇರಿ, ಹಾವನೂರ, ನೆಗಳೂರ, ಬೆಳವಿಗಿ, ರಾಣೆಬೆನ್ನೂರ ರಸ್ತೆಗಳ ಅಕ್ಕಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯವರು ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಸ್ತೆಯ ಮೇಲಿನ ನೀರು ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದೆ ರಸ್ತೆಯ ಹತ್ತಿರ ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಕೂಡಲೆ ಈ ರಸ್ತೆಗಳ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯವರು ಚರಂಡಿ ನಿರ್ವಿುಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಬೆಳವಿಗಿ ರಸ್ತೆಯ ಗಂಗಪ್ಪನ ಬಾವಿ ಹತ್ತಿರ ನಮ್ಮ ಜಮೀನಿನ ಪಕ್ಕದಲ್ಲಿಯೇ ಗದಗ-ಹೊನ್ನಾಳಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಜಮೀನುಗಳಲ್ಲಿನ ನೀರು ಮುಂದೆ ಸಾಗದೆ ಒಡ್ಡು ಒಡೆದಿದೆ. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಜಮೀನಿನ ಮಧ್ಯೆ ಸಣ್ಣ ಹಳ್ಳ ನಿರ್ವಣವಾಗಿದೆ.

    | ಮಾಲತೇಶ ಬಣ್ಣಮಟ್ಟಿ ವಿಎಸ್​ಎಸ್ ಮಾಜಿ ಅಧ್ಯಕ್ಷ ಗುತ್ತಲ

    ಗುತ್ತಲ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕರು ಮಳೆಯಿಂದ ಬೆಳೆಗಳಿಗೆ, ರೇಷ್ಮೆ ಗುಡಿಸಲಿಗೆ ಹಾಗೂ ಜಮೀನುಗಳ ಒಡ್ಡುಗಳು ಒಡೆದು ಹಾನಿಯಾದ ಮಾಹಿತಿ ನೀಡಿದ್ದಾರೆ. ಮಳೆಯಿಂದ ಆದ ಹಾನಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುತ್ತೇನೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿ ಪರಿಶೀಲನೆಗೆ ಹೋಗುತ್ತಾರೆ.

    | ಗಿರೀಶ ಸ್ವಾದಿ ತಹಸೀಲ್ದಾರ್ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts