More

    ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಅಸಾಧ್ಯ ; ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ

    ಕುಣಿಗಲ್: ಹೇಮಾವತಿ ಜಲಾಶಯದಿಂದ ಮಾಗಡಿ ತಾಲೂಕಿಗೆ ನೀರು ಹರಿಸುವ ‘ಲಿಂಕ್ ಕೆನಾಲ್’ ಯೋಜನೆ ಸರ್ಕಾರದ ಮುಂದೆ ಇಲ್ಲ, ಇದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

    ಕುಣಿಗಲ್ ಪುರಸಭೆ ನೂತನ ಕಟ್ಟಡ ಹಾಗೂ ಕೆಆರ್‌ಎಸ್ ಅಗ್ರಹಾರದಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ನೀರು ಸಂಗ್ರಹಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಲಿಂಕ್ ಕೆನಾಲ್‌ಗೆ ಅವಕಾಶ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ಎಚ್.ಡಿ.ರಂಗನಾಥ್ ಮಾಡಿದ ಮನವಿಗೆ ವೇದಿಕೆಯಲ್ಲಿ ನಿರಾಕರಿಸಿದರು.

    ಲಿಂಕ್ ಕೆನಾಲ್‌ನಿಂದ ಕುಣಿಗಲ್ ತಾಲೂಕಿಗೆ ಅನುಕೂಲವಾಗುತ್ತಿತ್ತು ಎಂದು ನಾನು ಭಾವಿಸುವುದಿಲ್ಲ. ಯಾವುದೇ ಲಿಂಕ್ ಕೆನಾಲ್ ಯೋಜನೆ ಪ್ರಸ್ತಾಪವೇ ಈಗಿಲ್ಲ, ಶಾಸಕ ಡಾ.ರಂಗನಾಥ್‌ಗೆ ವಿಧಾನಸಭೆಯಲ್ಲಿಯೂ ಇದನ್ನು ಸ್ಪಷ್ಟಪಡಿಸಿದ್ದೇನೆ. ಜಿಲ್ಲೆಯ ಎಲ್ಲ ತಾಲೂಕುಗಳ ಹಿತದೃಷ್ಟಿಯಿಂದಲೇ ನಾಲೆ ಆಧುನೀಕರಣಕ್ಕೆ ಮುಂದಾಗಿದ್ದು ಕುಣಿಗಲ್‌ಗೂ ಸರಾಗವಾಗಿ ನೀರು ಹರಿಯಲಿದೆ ಎಂದರು.

    ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಇಬ್ಬರೂ ಶಿಕ್ಷಕರ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ಸಾಧ್ಯವಿಲ್ಲ. ರಂಗನಾಥ್ ಉತ್ಸಾಹಭರಿತರಾಗಿ ರಾಜಕೀಯವಾಗಿ ಟೀಕೆ ಮಾಡುವುದನ್ನು ಕಲಿತಿದ್ದಾರೆ. ನಾನು ತಡೆಯುವುದಿಲ್ಲ ಎಂದು ಕಾಲೆಳೆದರು.

    ಮಾರ್ಕೋನಹಳ್ಳಿ ಮತ್ತು ಮಂಗಳಾ ಲಿಂಕ್ ಯೋಜನೆಗೆ ಅನುಮತಿ ನೀಡಲು ನಾನೇ ಸೂಚನೆ ನೀಡಿದ್ದೇನೆ. ಇನ್ನೂ ಕೆಲವು ಯೋಜನೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನೂತನ ಪುರಸಭೆ ಕಟ್ಟಡಕ್ಕೆ 5 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೆ ಎಂದರು.

    ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿದರು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪುರಸಭೆ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್, ಸದಸ್ಯರಾದ ರಂಗಸ್ವಾಮಿ, ಆರುಣ್ ಕುಮಾರ್, ಸಮಿವುಲ್ಲಾ, ರೂಪಿಣಿ, ಜಯಲಕ್ಷ್ಮೀ, ಶಂಭುರಾಮಣ್ಣ ಮತ್ತಿತರರು ಇದ್ದರು.

    ಜೆಸಿಎಂಗೆ ಬಿಜೆಪಿ ಕಾರ್ಯಕರ್ತರ ತಡೆ!: ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಅವರನ್ನು ಆಹ್ವಾನಿಸಿಲ್ಲ. ಹಾಗಾಗಿ, ನೀವು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಸ್ಥಳೀಯ ಬಿಜೆಪಿ ಮುಖಂಡರು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಪ್ರವಾಸಿ ಮಂದಿರದಲ್ಲಿ ತಡೆದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಡಿ.ಕೃಷ್ಣಕುಮಾರ್ ಅವರನ್ನು ಉದ್ದೇಶಪೂರ್ವಕವಾಗಿಯೇ ಆಹ್ವಾನಿಸಿಲ್ಲ ಎಂದು ದೂರಿದರು. ಸರ್ಕಾರಿ ಕಾರ್ಯಕ್ರಮವಾದ್ದರಿಂದ ನಾನು ಹೋಗದಿರಲು ಸಾಧ್ಯವಿಲ್ಲ, ಪಕ್ಷದ ಕಾರ್ಯಕರ್ತರ ಪರವಾಗಿ ನಾನು ಇರುತ್ತೇನೆ ಎಂದು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾದರು.

    ಡೊಳ್ಳು ಬಾರಿಸುವಾಗಲೇ ಹೃದಯಘಾತದಿಂದ ಸಾವು: ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸಲು ಬಂದಿದ್ದ ಜಾನಪದ ಕಲಾವಿದ ಪುರಸಭೆಯ ಮುಂಭಾಗವೇ ಡೊಳ್ಳು ಬಾರಿಸುವಾಗ ಕುಸಿದು ಮೃತಪಟ್ಟರು. ರಾಮನಗರದ ರಮೇಶ್ (65) ಮೃತರು. ಪುರಸಭೆ ಕಟ್ಟಡವನ್ನು ಪಿತೃ ಪಕ್ಷ ಇರುವಾಗಲೇ ಉದ್ಘಾಟನೆ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರಗಳು ಎದ್ದಿರುವ ನಡುವೆಯೇ ಸಮಾರಂಭದಲ್ಲಿ ಕಲಾವಿದನ ಸಾವು ಕಾಕತಾಳೀಯ ಎನಿಸಿದೆ.

    ಕಪ್ಪು ಬಾವುಟ ಪ್ರದರ್ಶಿಸಿದ ಕೆಆರ್‌ಎಸ್ ಕಾರ್ಯಕರ್ತರು: ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ರಸ್ತೆಯಲ್ಲೇ ಶಾಮಿಯಾನ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದನ್ನು ಖಂಡಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ರಘು ಜಾಣಗೆರೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸುವ ಸಮಯದಲ್ಲಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts