More

    ಸಂಸ್ಕಾರಕ್ಕೆ ಮಾನ್ಯತೆ: ಮನೋಲ್ಲಾಸ

    ಸಂಸ್ಕಾರಕ್ಕೆ ಮಾನ್ಯತೆ: ಮನೋಲ್ಲಾಸ| ಡಾ. ಗಣಪತಿ ಹೆಗಡೆ

    ಅದೊಂದು ಪ್ರಾಚೀನಕಾಲದ ದೇವಸ್ಥಾನ. ನೂರಾರು ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು ಭಗವಂತನ ದರ್ಶನ ಪಡೆಯುತ್ತಿದ್ದರು. ಅಲ್ಲೊಂದು ಮಗು ಪ್ರಯಾಸದಿಂದ ಮೆಟ್ಟಿಲುಗಳನ್ನು ಹತ್ತುತ್ತ ತಂದೆಯ ಜತೆ ಹೆಜ್ಜೆ ಹಾಕುತ್ತಿತ್ತು. ‘ನೋಡು ಇಲ್ಲೊಂದು ಕಲ್ಲಿನ ಮಂಚವಿದೆ. ಕೂತು ವಿಶ್ರಾಂತಿ ಪಡೆದು ಹೋಗೋಣ’ ಎಂದರು ತಂದೆ. ದೇವಸ್ಥಾನ ಹತ್ತಿರದ ಕಲ್ಲಿನ ದೊಡ್ಡ ಗೋಡೆಯನ್ನು ದಾಟಿ ಮುಂದೆ ಹೋದರು. ದೇವಸ್ಥಾನದ ಮಹಾದ್ವಾರ ಪೂರ್ತಿ ಕಲ್ಲಿನಿಂದಲೇ ಕಟ್ಟಿದ್ದು. ಮತ್ತಿನ್ನಷ್ಟು ಒಳಗೆ ಹೋದ ಮೇಲೆ ದೊಡ್ಡ ದೊಡ್ಡ ಕಲ್ಲಿನ ಕಂಬಗಳ ಮೇಲೆ ದೇವಸ್ಥಾನ ನಿಂತಿರುವುದನ್ನು ಮಗು ನೋಡಿತು. ಕಲ್ಲಿನ ಗರ್ಭಗುಡಿಯ ಒಳಗೆ ಸುಂದರವಾದ ದೇವರ ಕಲ್ಲಿನ ವಿಗ್ರಹವಿದೆ. ಅರ್ಚಕರು ಮಂತ್ರಗಳನ್ನು ಹೇಳಿ ಪೂಜಿಸುತ್ತಿದ್ದರು. ಅಭಿಷೇಕ ಮಾಡುತ್ತಿದ್ದರು. ಹೂವು ಹಣ್ಣು ಅರ್ಪಿಸಿ ಕೈಮುಗಿದು ಪ್ರಾರ್ಥಿಸುತ್ತಿದ್ದರು.

    ಪ್ರದಕ್ಷಿಣೆ ಮುಗಿಸಿ ಬಂದು ಕುಳಿತಾಗ ಮಗು ಕೇಳಿತು, ‘ಅಪ್ಪ ನಾವು ಹತ್ತಿ ಬಂದೆವಲ್ಲ ಅವು ಕಲ್ಲಿನ ಮೆಟ್ಟಿಲು ತಾನೆ? ಕುಳಿತುಕೊಂಡ ಮಂಚ, ಹೊರಗಿನ ಗೋಡೆ, ದೇವಸ್ಥಾನದಲ್ಲಿ ನಿಲ್ಲಿಸಿರುವ ಕಂಬಗಳೂ ಕಲ್ಲೇ ತಾನೇ? ಗರ್ಭಗುಡಿ, ಮತ್ತೆ ಒಳಗಡೆ ಇರುವ ವಿಗ್ರಹ ಕಲ್ಲಿಂದೇ ಹೌದಲ್ಲವೇ? ಇಷ್ಟೆಲ್ಲ ಕಲ್ಲುಗಳಿದ್ದಾಗಲೂ ಎಲ್ಲರೂ ಹೋಗಿ ವಿಗ್ರಹದ ಕಲ್ಲಿಗೆ ನಮಸ್ಕಾರ, ಪ್ರದಕ್ಷಿಣೆ, ಅಭಿಷೇಕ, ನೈವೇದ್ಯ ಎಲ್ಲ ಮಾಡುತ್ತಾರೆ ಯಾಕೆ?’.

    ‘ಮೊದಲು ಎಲ್ಲ ಕಲ್ಲುಗಳ ಹಾಗೆಯೇ ವಿಗ್ರಹದ ಕಲ್ಲು ಕೂಡ ಇತ್ತು. ಶಿಲ್ಪಿಗಳು ಈ ಕಲ್ಲನ್ನು ಕೆತ್ತಿ ಕೈಕಾಲು, ತಲೆ, ಮುಖಗಳನ್ನು ಮೂಡಿಸಿದರು. ಅದಕ್ಕೊಂದು ದೃಷ್ಟಿಯನ್ನಿಟ್ಟು ಸುಂದರವಾದ ರೂಪವನ್ನು ಕೊಟ್ಟರು. ನಂತರ ನೂರಾರು ಜನ ಪುರೋಹಿತರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂತ್ರಗಳನ್ನು ಹೇಳುತ್ತಾ, ಆ ಮೂರ್ತಿಗೆ ಜೀವಕಳೆ, ದೈವತ್ವವನ್ನು ತುಂಬಿ ಪ್ರತಿಷ್ಠಾಪನೆ ಮಾಡಿದರು. ಆಗ ವಿಗ್ರಹ ರೂಪದ ಈ ಕಲ್ಲು ವಿಶೇಷತೆ ಪಡೆದುಕೊಂಡಿತು. ಇಲ್ಲದಿದ್ದರೆ ಯಾರೂ ಪೂಜಿಸುತ್ತಿರಲಿಲ್ಲ. ತನ್ನ ಸ್ವರೂಪವನ್ನು ಶಿಲ್ಪಿಗಳು ಕೆತ್ತಿದಂತೆ ಬದಲಾಯಿಸಿಕೊಂಡಿರುವುದಕ್ಕೆ ಬೆಲೆ ಬಂತು.

    ಇದನ್ನೂ ಓದಿ: ಒಕ್ಕಲಿಗರಿಗೆ ಮೀಸಲಾತಿ ನೀಡದಿದ್ದಲ್ಲಿ ಹೋರಾಟ: ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

    ಮಗೂ! ಆರಂಭದಲ್ಲಿ ನಾವೆಲ್ಲರೂ ಕಲ್ಲಿದ್ದಂತೆಯೇ. ತಂದೆ-ತಾಯಿ, ಗುರುಹಿರಿಯರು, ಹಿತೈಷಿಗಳು ಸಂಸ್ಕಾರಗಳ ಮೂಲಕ ನಮಗೊಂದು ರೂಪಕೊಡುತ್ತಾರೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ನಾವು ಕೂಡ ಗರ್ಭಗುಡಿಯಲ್ಲಿನ ವಿಗ್ರಹದಂತೆ ಸಮಾಜದಿಂದ ಗೌರವವನ್ನು ಪಡೆದುಕೊಳ್ಳಬಹುದು. ಇಲ್ಲದೇ ಹೋದರೆ ಎಲ್ಲರೂ ತುಳಿಯುವ ಮೆಟ್ಟಿಲೋ, ಇಲ್ಲ ದೇವಸ್ಥಾನವನ್ನು ಎತ್ತಿ ಹಿಡಿಯುವ ಕಂಬಗಳೋ, ಇಲ್ಲ ಕಲ್ಲಿನ ಮಂಚಗಳೋ ಆಗುತ್ತೇವೆ. ಈ ಎಲ್ಲಾ ಸಂಸ್ಕಾರಗಳನ್ನು ಪಡೆದು ಜೀವನದಲ್ಲಿ ರೂಢಿಸಿಕೊಂಡು ವಿಗ್ರಹದ ಶಿಲೆಯಂತೆ ವಿಶೇಷವಾಗಿ ಬದುಕಬೇಕು. ಇಲ್ಲವೇ ಮನಸ್ಸಿಗೆ ಬಂದಂತೆ ಬದುಕಿ ಮಂಚದ, ಮೆಟ್ಟಿಲು ಕಲ್ಲುಗಳಾಗಬೇಕು. ಏನಾಗಬೇಕೆಂಬ ನಿರ್ಧಾರ ನಮ್ಮದೇ ಇರಬೇಕು’ ಎಂದು ತಂದೆ ವಿವರಿಸಿದ. ಸಮಾಜದ ಕಣ್ಣಿನಲ್ಲಿ ಪ್ರಮುಖ ವ್ಯಕ್ತಿಯಾಗಬೇಕಾದರೆ ನಾನು ತಂದೆ ತಾಯಿ, ಗುರು ಹಿರಿಯರು ಕೊಟ್ಟಂತಹ ವಿದ್ಯೆ, ಸಂಸ್ಕಾರ, ಜ್ಞಾನ ಇವನ್ನೆಲ್ಲಾ ಸ್ವೀಕಾರ ಮಾಡಬೇಕು ಎನ್ನುವ ನಿರ್ಧಾರ ಮಗುವಿನ ಮನಸ್ಸಿನಲ್ಲಿ ಮೂಡಿತು.

    (ಲೇಖಕರು ಸಂಸ್ಕೃತ ಉಪನ್ಯಾಸಕರು)

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts