More

    ಭಾರಿ ಸ್ಫೋಟಕ ದಾಸ್ತಾನು ಪತ್ತೆ: ಬಂದರ್ ಗನ್ ಶಾಪ್ ಮಾಲೀಕನ ಬಂಧನ

    ಮಂಗಳೂರು: ನಗರದ ಬಂದರು ಅಜೀಜುದ್ದೀನ್ ರಸ್ತೆಯಲ್ಲಿರುವ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ ಗನ್ ಶಾಪ್ ಮಾಲೀಕ, ಬಂಟ್ವಾಳ ತಾಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಎಂಬಾತನನ್ನು ಬಂಧಿಸಲಾಗಿದೆ.

    ವಾಣಿಜ್ಯ ಹಾಗೂ ವಸತಿ ಎರಡು ಮಾದರಿಯ ಕಟ್ಟಡವಾಗಿದ್ದು, ಮೆಟ್ಟಿಲುಗಳ ಅಡಿಯಲ್ಲಿ ಕೊಠಡಿ ನಿರ್ಮಿಸಿ ಅದರಲ್ಲಿ ಸ್ಫೋಟಕ ದಾಸ್ತಾನು ಮಾಡಲಾಗಿತ್ತು. 400 ಕೆ.ಜಿ. ಸಲ್ಫರ್ ಪೌಡರ್, 240 ಕೆ.ಜಿ. ಚಾರ್ಕೊಲ್, 375 ಕೆ.ಜಿ. ಸಾಲ್ಟ್ ಪೀಟರ್ (ಪೊಟಾಶಿಯಂ ನೈಟ್ರೇಟ್), 25 ಕೆ.ಜಿ. ಅಪಾಯಕಾರಿ ಪೊಟಾಷಿಯಂ ಕ್ಲೋರೇಟ್, 55 ಕೆ.ಜಿ. ಅಲ್ಯುಮಿನಿಯಂ ಬೀಡ್ ಬ್ಯಾಗ್, 50 ಕೆಜಿ ಬೆರಿಯಂ ನೈಟ್ರೇಟ್, 80 ಕೆಜಿ ಅಲ್ಯುಮಿನಿಯಂ ಪೌಡರ್, 161 ಪ್ಯಾಕೆಟ್‌ನಲ್ಲಿ ತಲಾ 100 ಏರ್‌ರೈಲ್ ಪೆಲೆಟ್ಸ್, 6 ಪ್ಯಾಕೆಟ್‌ನಲ್ಲಿ ತಲಾ 5 ಕೆಜಿಯ ಲೆಡ್‌ಬಾಲ್, ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 1.11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ಸ್ಫೋಟಕ ದಾಸ್ತಾನು ಮಾಹಿತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದಾಸ್ತಾನು ಬೆಳಕಿಗೆ ಬಂದಿದೆ. ವಾರಸುದಾರರು ಯಾರು ಎಂದು ವಿಚಾರಿಸಿದಾಗ ಬಂದರು ಪ್ರದೇಶದಲ್ಲಿ ಪರವಾನಗಿ ಪಡೆದು ಗನ್ ಶಾಪ್ ನಡೆಸುತ್ತಿದ್ದ ಆನಂದ ಗಟ್ಟಿ ಎಂದು ತಿಳಿದು ಬಂದಿದೆ. ಗನ್ ಶಾಪ್‌ನಲ್ಲಿ ಮಾರಾಟ ಮಾಡುವ ವಸ್ತುಗಳಿಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲ. ಕೋರೆ, ಪಟಾಕಿ, ಬಾವಿಯ ಕಲ್ಲು ಒಡೆಯಲು, ಮೀನು ಹಿಡಿಯಲು ಇದನ್ನು ಸ್ಫೋಟಕವಾಗಿ ಬಳಸುತ್ತಾರೆ. ಆ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈತನಿಗೆ ಸ್ಫೋಟಕ ಪೂರೈಕೆ ಮಾಡುವವರು ಯಾರು, ಯಾರೆಲ್ಲ ಶಾಮೀಲಾಗಿದ್ದಾರೆ, ಮೊದಲಾದ ಕೋನದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

    ಅಕ್ರಮ ಕೃತ್ಯಗಳಿಗೆ ಬಳಕೆ?:  ಮಂಗಳೂರು ನಗರ, ಉಡುಪಿ, ಚಿಕ್ಕಮಗಳೂರು ಸುತ್ತಮುತ್ತಲ ಪ್ರದೇಶ ಸೂಕ್ಷ್ಮ ಹಾಗೂ ನಕ್ಸಲ್ ಚಟುವಟಿಕೆಗಳಿಗೂ ಹೆಸರಾಗಿದೆ. ಈ ರೀತಿ ಸ್ಫೋಟಕಗಳನ್ನು ಅಕ್ರಮವಾಗಿ ದಾಸ್ತಾನು ಇರಿಸುವುದು ಆಂತರಿಕ ಭದ್ರತೆಗೆ ಸವಾಲಾಗಿದೆ. ಇವುಗಳು ದುಷ್ಕರ್ಮಿಗಳ ಕೈಗೆ ಸುಲಭವಾಗಿ ಸಿಗುವ ಸಾಧ್ಯತೆ ಇರುವುದರಿಂದ ಅಕ್ರಮ ಕೃತ್ಯಗಳಿಗೆ ಬಳಕೆಯಾಗುವುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?: ನಗರದ ಶಿವಭಾಗ್ ಬಳಿ ಜುಲೈ 2ರಂದು ಅನಿಲ್ ಸೋನ್ಸ್ ಎಂಬಾತ ಏರ್ ಗನ್‌ನಿಂದ ಬೀದಿನಾಯಿಗೆ ಗುಂಡು ಹೊಡೆದು ಸಾಯಿಸಿದ್ದ. ಆತ ರೈಫಲ್‌ನಲ್ಲಿ 0.22 ಎಂ.ಎಂ. ಬುಲೆಟ್ ಬಳಕೆ ಮಾಡಿರುವುದು ತನಿಖೆ ವೇಳೆ ಸ್ಪಷ್ಟವಾಗಿತ್ತು. ಅಂತಹ ಬುಲೆಟ್ ಎಲ್ಲೆಲ್ಲ ಸಿಗುತ್ತದೆ ಎಂದು ಡಿಸಿಪಿ ಹರಿರಾಂ ಶಂಕರ್ ಪರಿಶೀಲನೆ ನಡೆಸಿದ್ದು, ಅದರಂತೆ ಬಂದರ್ ಪ್ರದೇಶಕ್ಕೂ ಭೇಟಿ ನೀಡಿ ತಪಾಸಣೆ ನಡೆಸಿದಾಗ ಈ ಸ್ಫೋಟಕಗಳು ಪತ್ತೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts