More

    ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ? ಸುಳಿವು ನೀಡಿದ ಸಚಿವ ಸವದಿ

    ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಬೆಚ್ಚಿಬಿದ್ದು ಕೇಂದ್ರದ ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿತ್ತು. ಇದೀಗ ಪರಿಷ್ಕೃತ ಶುಲ್ಕ ಕೈಬಿಟ್ಟು ಕೇಂದ್ರದ ಕಾಯ್ದೆ ಯಥಾವತ್ ಜಾರಿಗೆ ಉತ್ಸುಕತೆ ತೋರಿದೆ. ಸಾರಿಗೆ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಸುಳಿವನ್ನು ನೀಡಿದ್ದು, ಬಜೆಟ್ ಅಧಿವೇಶನದ ಬಳಿಕ ದಂಡ ಶುಲ್ಕ ಪರಿಷ್ಕರಣೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಪ್ರಮಾಣ ಇಳಿಸಲಾಗಿತ್ತು. ದಂಡ ಪ್ರಯೋಗ ಹೆಚ್ಚಾದಂತೆ ನಿಯಮ ಉಲ್ಲಂಘನೆ ಪ್ರಕರಣಗಳು ತಗ್ಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಕಾಯ್ದೆ ಪ್ರಕಾರ ದಂಡ ಜಾರಿ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.

    ಕೇಂದ್ರ ಸರ್ಕಾರ ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ದುಬಾರಿ ದಂಡವೇ ಸೂಕ್ತ ಎಂದು ಭಾವಿಸಿ ಕಾನೂನು ರೂಪಿಸಿತ್ತು. ಆದರೆ, ದೇಶಾದ್ಯಂತ ಇದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಈ ಕಾನೂನನ್ನು ಒಪ್ಪದೇ ಪರಿಷ್ಕೃತ ದಂಡ ರೂಪದ ಆದೇಶಗಳನ್ನು ಹೊರಡಿಸಿಕೊಂಡಿತು. ಕರ್ನಾಟಕದಲ್ಲಿ ಸಹ ಒಂದಷ್ಟು ಆಕ್ರೋಶ ವ್ಯಕ್ತವಾಯಿತು. ಜತೆಗೆ ಉಪ ಚುನಾವಣೆ ಎದುರಿಗಿದ್ದ ಕಾರಣ ವ್ಯತಿರಿಕ್ತ ಪರಿಣಾಮ ಬೀರಬಹುದೆಂದೆಣಿಸಿ ರಾಜ್ಯ ಸರ್ಕಾರ ಇತರೆ ರಾಜ್ಯಗಳ ದಾರಿಯನ್ನೇ ಅನುಸರಿಸಿತು. ಇದೇ ವೇಳೆ ತನ್ನ ತೀರ್ವನಕ್ಕೆ ಎಲ್ಲಾ ರಾಜ್ಯಗಳು ಹೋಗಲಿ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಂದಾದರೂ ಸೂಕ್ತ ಬೆಂಬಲ ಸಿಗುತ್ತದೆಂದು ನಿರೀಕ್ಷಿಸಿದ್ದ ಕೇಂದ್ರಕ್ಕೆ ಕರ್ನಾಟಕದ ನಡೆ ಕೂಡ ಕಸಿವಿಸಿ ಉಂಟುಮಾಡಿತ್ತು.

    ಕೇಂದ್ರದ ದಂಡ ಶುಲ್ಕವೆಷ್ಟಿದೆ?
    • ಸಿಗ್ನಲ್ ಜಂಪ್- 2000
    • ಹೆಲ್ಮೆಟ್ ರಹಿತ ಚಾಲನೆ- 1000 ರೂ., ಲೈಸೆನ್ಸ್ ಮೂರು ತಿಂಗಳು ಅಮಾನತು
    • ಓವರ್ ಸ್ಪೀಡ್- 1000 ರೂ. (ಎಲ್​ವಿ), 2000 ರೂ.(ಎಂಎಂವಿ)
    • ವಿಮೆ ರಹಿತ- 5 ಸಾವಿರ ರೂ. ನಂತರ 10 ಸಾವಿರ
    • ಪರವಾನಗಿ ರಹಿತ ಚಾಲನೆ- 10 ಸಾವಿರ
    ಚಿಂತನೆಗೆ 3 ಕಾರ್ಯ ಕಾರಣಗಳು
    1. ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನಗಳ (ತಿದ್ದುಪಡಿ) 1919 ಕಾಯ್ದೆಯ ವ್ಯಾಪಕ ಪ್ರಚಾರವಾಗಿದೆ. ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ.
    2. ಕೇಂದ್ರದ ಹೊಸ ಕಾಯ್ದೆ ಜಾರಿ ದೀರ್ಘಾವಧಿವರೆಗೆ ತಡೆ ಹಿಡಿದು, ದಂಡ ಶುಲ್ಕಕ್ಕೆ ವಿನಾಯಿತಿ ನೀಡುವುದರಿಂದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಸೃಷ್ಟಿ ಸಾಧ್ಯತೆ.
    3. ಜನ-ಸಾಮಾನ್ಯರಿಗೆ ಮನವರಿಕೆ ಮಾಡುವ ಉದ್ದೇಶ ದಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಿದ್ದೆವು ಎಂದು ಕೇಂದ್ರದ ಓಲೈಕೆ. ಹಾಗೆಯೇ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಏರಿಕೆಯಾಗಲಿದೆ. ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಗಣನೀಯವಾಗಿ ತಗ್ಗಿವೆ ಎಂಬ ಪೊಲೀಸ್ ಇಲಾಖೆ ವರದಿಯನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿದೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ಅಧಿಕ ದಂಡ ವಿಧಿಸುವುದಕ್ಕೆ ವಾತಾವರಣ ‘ಹದ’ವಾಗಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರ. ಹೀಗಾಗಿಯೇ ಸಂಚಾರಿ ನಿಯಮಗಳ ಉಲ್ಲಂಘನೆಗೆ ಅಧಿಕ ದಂಡ ವಿಧಿಸುವ ಕಾಯ್ದೆ ಬಗ್ಗೆ ಆಸಕ್ತಿವಹಿಸಿದ್ದು, ಕೇಂದ್ರದ ಮೆಚ್ಚುಗೆ ಗಳಿಸುವುದು ಸೇರಿ ಬಹು ಲಾಭವನ್ನು ಗಮನದಲ್ಲಿರಿಸಿ ಈ ಬಗ್ಗೆ ಯೋಚಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts