More

    ಗುತ್ತಲ ಹೋಬಳಿಯಲ್ಲಿ ಚುರುಕುಗೊಂಡ ಉಳುಮೆ


    ಗುತ್ತಲ: ಕಳೆದ ವಾರ ಉತ್ತಮ ಮಳೆಯಾಗಿದ್ದರಿಂದ ಗುತ್ತಲ ಹೋಬಳಿಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ.
    ರೈತರು ಎರಿ ಭೂಮಿಯಲ್ಲಿ ಹೆಸರು, ಶೇಂಗಾ, ತೊಗರಿ ಹಾಗೂ ನೀರಾವರಿ ಭೂಮಿಯಲ್ಲಿ ಮೆಕ್ಕೆಜೋಳ, ಶೇಂಗಾ, ತೊಗರಿ ಬಿತ್ತನೆ ಮಾಡುತ್ತಿದ್ದಾರೆ. ಇನ್ನುಳಿದ ರೈತರು ಮುಂದಿನ ಮಳೆಗಳು, ನಕ್ಷತ್ರಗಳನ್ನು ಗಮನದಲ್ಲಿಟ್ಟುಕೊಂಡು ಸೋಯಾಬೀನ್, ಶೇಂಗಾ, ಭತ್ತ, ಹೆಸರು, ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
    ಗುತ್ತಲ ಹೋಬಳಿಯ ಉತ್ತರ ಈಶಾನ್ಯ ಪ್ರದೇಶ ಬಹುತೇಕ ಎರೆ ಭೂಮಿ ಹೊಂದಿದೆ. ಇಲ್ಲಿ ಶೇ. 45ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಉಳಿದ ಪ್ರದೇಶ ಕೆಂಪು ಮಣ್ಣಿನಿಂದ ಕೂಡಿದ್ದು, ಆ ಭಾಗದ ರೈತರು ಬಿತ್ತನೆಗೆ ಸಿದ್ಧತೆಯಲ್ಲಿದ್ದಾರೆ. ಗುತ್ತಲ, ನೆಗಳೂರ, ತಿಮ್ಮಾಪುರ, ಕಂಚಾರಗಟ್ಟಿ, ಹರಳಹಳ್ಳಿ, ಹಾವನೂರ, ಬಮ್ಮನಕಟ್ಟಿ, ಬಸಾಪುರ, ಕೆಸರಳ್ಳಿ, ಹೊಸರಿತ್ತಿ ಗ್ರಾಮಗಳಲ್ಲಿ ತುಂಗಾ ಮೇಲ್ದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯವಿದೆ. ಈ ಭಾಗದಲ್ಲಿ ರೈತರು ಮಳೆ, ಕಾಲುವೆ ನೀರಿನ ಲಭತ್ಯೆ ನೋಡಿಕೊಂಡು ಯಾವ ಬೆಳೆ ಬೆಳೆಯಬೇಕೆಂಬ ಚಿಂತನೆಯಲ್ಲಿದ್ದಾರೆ.
    ಅನೇಕ ರೈತರು ನರ್ಸರಿಗಳಲ್ಲಿ ಬೆಳೆಸಿರುವ ಮೆಣಸಿಕಾಯಿ, ಟೊಮ್ಯಾಟೊ ಸಸಿಗಳನ್ನು ತಂದು ನಾಟಿ ಮಾಡುತ್ತಿದ್ದಾರೆ. ಮಳೆಯಾಶ್ರಿತ, ನೀರಾವರಿ ಸೌಲಭ್ಯವಿರವ ರೈತರು ಸಹ ಸಾಂಪ್ರದಾಯಿಕ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ರೋಹಿಣಿ ಮಳೆಗೆ ಅನೇಕರು ಹೆಸರು ಬಿತ್ತನೆ ಮಾಡಿದ್ದಾರೆ. ಮುಂಗಾರಿಗೂ ಮುನ್ನ ಎರಡು ಚಂಡ ಮಾರುತಗಳ ಪರಿಣಾಮ ಸುರಿದ ಮಳೆಯಿಂದ ಅವಧಿಗೂ ಮುಂಚೆ ಬಿತ್ತನೆ ಕಾರ್ಯ ಚುರುಕು ಪಡೆದಿದೆ.
    3012 ಎಕರೆ ಗುರಿ: 1887 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ, 150 ಎಕರೆಯಲ್ಲಿ ಶೇಂಗಾ, 360 ಎಕರೆಯಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಲಾಗಿದೆ. 444 ಎಕರೆಯಲ್ಲಿ ಭತ್ತ, 183 ಎಕರೆ ಪ್ರದೇಶದಲ್ಲಿ ಸೋಯಾಬೀನ್ ಬೆಳೆ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 3012 ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
    ಅಗತ್ಯ ರಸಗೊಬ್ಬರ ದಾಸ್ತಾನು: ಯೂರಿಯಾ 350 ಮೆಟ್ರಿಕ್ ಟನ್, ಡಿಎಪಿ 425 ಮೆಟ್ರಿಕ್ ಟನ್, ಎಂಒಪಿ 125 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 450 ಮೆಟ್ರಿಕ್ ಟನ್ ರಸಗೊಬ್ಬರ ಗುತ್ತಲದ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿದೆ.

    ರೈತರು ಈಗಾಗಲೇ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಭೂಮಿ ಹದ ನೋಡಿಕೊಂಡು ಬಿತ್ತನೆ ಮಾಡಲು ಸಲಹೆ ನೀಡಲಾಗಿದೆ. ಬೀಜೋಪಚಾರ ವಿಷಯಕ್ಕೆ ಹೆಚ್ಚು ಗಮನ ನೀಡಲು ತಿಳಿಸಲಾಗಿದೆ. ಭೂಮಿ ಸಂಪೂರ್ಣ ಹದವಿದ್ದಾಗ ಮಾತ್ರ ಸೋಯಾಬೀನ್ ಬಿತ್ತನೆ ಮಾಡುವುದು ಉತ್ತಮ.
    | ಪುಟ್ಟರಾಜ ಹಾವನೂರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುತ್ತಲ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts