More

    ಕೇಂದ್ರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷೆ

    ಹಾವೇರಿ: ಕರೊನಾ ಲಾಕ್​ಡೌನ್​ನಿಂದ ತೊಂದರೆಗೊಳಗಾದ ರೈತರಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹೊಸ ಪ್ಯಾಕೇಜ್ ಘೋಷಣೆ ಮೂಲಕ ಉತ್ತೇಜನ ನೀಡುವ ನಿರೀಕ್ಷೆಯಿದೆ. ಈ ಕುರಿತು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದ ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಕೆಲ ರಾಜ್ಯಗಳಲ್ಲಿ ಮೆಕ್ಕೆಜೋಳವನ್ನು ಆಹಾರವಾಗಿ ಸೇವಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಅದನ್ನು ಈಗಾಗಲೇ ಪಿಡಿಎಸ್​ಗೆ (ಪಡಿತರ ಧಾನ್ಯ) ಸೇರಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಪಡಿತರವಾಗಿ ಯಾರೂ ಪಡೆಯುವುದಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಮಾಡಿ ರಾಜ್ಯದ ರೈತರ ಮೆಕ್ಕೆಜೋಳವನ್ನು ಬೆಂಬಲಬೆಲೆಯಡಿ ಖರೀದಿಗೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

    ಲಾಕ್​ಡೌನ್​ಗೂ ಮುನ್ನ ಉದ್ಯೋಗ ಅರಸಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದು ಜಿಲ್ಲೆಯಲ್ಲಿ ಉಳಿದಿರುವ ಕಾರ್ವಿುಕರು ಹಾಗೂ ಜಿಲ್ಲೆಯಿಂದ ಬೇರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಉಳಿದುಕೊಂಡಿರುವ ಕಾರ್ವಿುಕರು ತಮ್ಮ ಸ್ವಂತ ಗ್ರಾಮಕ್ಕೆ ತೆರಳುವ ಅಪೇಕ್ಷೆ ಹೊಂದಿದ್ದಾರೆ. ಮೇ 3ರ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಅವರವರ ಗ್ರಾಮಗಳಿಗೆ ಕಳುಹಿಸುವ ಕುರಿತಂತೆ ರ್ಚಚಿಸಲಾಗುತ್ತದೆ ಎಂದರು.

    ಜಿಲ್ಲೆಯಲ್ಲಿ ಈವರೆಗೆ ಕರೊನಾ ಸೋಂಕು ಹರಡಿಲ್ಲ. ಜಿಲ್ಲೆ ಗ್ರೀನ್ ವಲಯದಲ್ಲಿದೆ. ಇದಕ್ಕೆ ಕಾರಣರಾದ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು, ಪೊಲೀಸರು, ವೈದ್ಯರು, ನರ್ಸ್​ಗಳು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಕರೊನಾ ವಿರುದ್ಧ ಹೋರಾಡಲು ಸಾಮೂಹಿಕವಾಗಿ ಕೈಜೋಡಿಸಿ ನೆರವು ನೀಡಬೇಕು. ಪ್ರತಿಯೊಬ್ಬರೂ ಕನಿಷ್ಠ 10 ರೂ.ಗಳನ್ನು ನೆರವು ನೀಡಬೇಕು. ಈ ನೆರವಿನ ಹಣವನ್ನು ಕೋವಿಡ್ ಹೋರಾಟದ ಔಷಧ ಹಾಗೂ ಸಾರ್ವಜನಿಕ ತುರ್ತು ಆರೋಗ್ಯ ಸೇವೆಗೆ ಬಳಸಲಾಗುವುದು. ಈವರೆಗೆ 6,500 ಕೋಟಿ ರೂ. ದೇಶದಲ್ಲಿ ಸಂಗ್ರಹವಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ ಇದ್ದರು.

    ಆರೋಗ್ಯ ಸೇತು ಡೌನ್​ಲೋಡ್ ಮಾಡಿಕೊಳ್ಳಿ: ಕರೊನಾ ಸುರಕ್ಷತೆಗಾಗಿ ಎಲ್ಲರೂ ಆರೋಗ್ಯ ಸೇತು ಆಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಇದರಿಂದ ತಾವು ಕೋವಿಡ್​ನಿಂದ ತಾವು ಎಷ್ಟು ಸುರಕ್ಷಿತ ಹಾಗೂ ಮಾರ್ಗಸೂಚಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ಸಂಸದರು ಮನವಿ ಮಾಡಿಕೊಂಡರು.

    ಸಾಲದ ಕಂತು ರಿನಿವಲ್: ರೈತರ ಸಾಲದ ಕಂತುಗಳನ್ನು ರಿನಿವಲ್ ಮಾಡಲು ಮೂರು ತಿಂಗಳು ಮುಂದೂಡುವ ಕುರಿತಂತೆ ಈಗಾಗಲೇ ರ್ಚಚಿಸಿ ತೀರ್ಮಾನ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಲಾಕ್​ಡೌನ್​ನಿಂದ ಮೆಣಸಿನಕಾಯಿ ವ್ಯಾಪಾರಿಗಳು, ದಲ್ಲಾಳಿಗಳಿಗೆ ಉಂಟಾಗಿರುವ ತೊಂದರೆ ಕುರಿತಂತೆ ಈಗಾಗಲೇ ರ್ಚಚಿಸಲಾಗಿದೆ. ಬ್ಯಾಂಕ್​ಗಳೊಂದಿಗೆ ರ್ಚಚಿಸಿ ಒಒಡಿ ನೀಡುವಂತೆ ಸಲಹೆ ಮಾಡಲಾಗಿದೆ. ಬ್ಯಾಡಗಿ ಮಾರುಕಟ್ಟೆಗೆ ಹೊರರಾಜ್ಯಗಳಿಂದ ಬರುವ ಚಾಲಕರು, ಹಮಾಲರಿಗೆ ವೈದ್ಯಕೀಯ ತಪಾಸಣೆಯನ್ನು ತೀವ್ರಗೊಳಿಸಲು ಸೂಚಿಸಲಾಗಿದೆ ಎಂದು ಸಂಸದ ಉದಾಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts