

ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ದೋಷಿಯಾಗಿ, ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಕರಣದಲ್ಲಿ ಮೂಲಭೂತ ಪ್ರಜಾಪ್ರಭುತ್ವ ತತ್ವಗಳು ಅನ್ವಯವಾಗಬೇಕು ಎಂದು ಜರ್ಮನಿ ಅಭಿಪ್ರಾಯಪಟ್ಟಿದೆ.
ಭಾರತದ ಪ್ರತಿಪಕ್ಷದ ರಾಜಕಾರಣಿ ರಾಹುಲ್ ಗಾಂಧಿ ವಿರುದ್ಧದ ತೀರ್ಪು ಮತ್ತು ಸಂಸತ್ತಿನಿಂದ ಅವರ ಅನರ್ಹತೆಯನ್ನು ನಾವು ಗಮನಿಸಿದ್ದೇವೆ. ನಮಗೆ ತಿಳಿದಂತೆ ರಾಹುಲ್ ಗಾಂಧಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಂತದಲ್ಲಿದ್ದಾರೆ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಹುಲ್ ವಿರುದ್ಧದ ಈ ತೀರ್ಪು ನ್ಯಾಯಾಲಯದಲ್ಲಿ ನಿಲ್ಲುತ್ತದೆಯೇ ಮತ್ತು ಅವರ ಅಮಾನತು ಆದೇಶ ಯಾವುದೇ ಆಧಾರವನ್ನು ಹೊಂದಿದೆಯೇ ಎಂಬುದು ಮೇಲ್ಮನವಿ ತೀರ್ಪಿನ ನಂತರ ಸ್ಪಷ್ಟವಾಗುತ್ತದೆ ಎಂದು ವಕ್ತಾರರು ಹೇಳಿದರು.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
2019ರಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅಸಮಾಧಾನಗೊಂಡು ದೂರು ದಾಖಲಿಸಿದ್ದರು. 2019ರ ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.
ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್, 1951ರ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ 8 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಒಂದು ವೇಳೆ ಸೂರತ್ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದರೆ ರಾಹುಲ್ ನಿರಾಳರಾಗಲಿದ್ದಾರೆ. ಇನ್ನು ರಾಹುಲ್ರನ್ನು ಅನರ್ಹಗೊಳಿಸಿರುವ ನಿರ್ಧಾರ ಕೇಂದ್ರದ ರಾಜಕೀಯ ದ್ವೇಷ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್)