More

    18ಕ್ಕೆ ನಾಗರಿಕ, ರೈತ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

    ಬಾಳೆಹೊನ್ನೂರು: ಅರಣ್ಯ ಇಲಾಖೆಯ ಮಾರಕ ಕಾಯ್ದೆ, ಅಧಿಕಾರಿಗಳಿಂದ ರೈತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ, ರೈತಪರವಾಗಿ ಹೋರಾಟ ಮಾಡುವ ಉದ್ದೇಶದಿಂದ ೆ.18ರಂದು ಶೃಂಗೇರಿ ಕ್ಷೇತ್ರ ಸೇರಿದಂತೆ ಮೂಡಿಗೆರೆ, ಚಿಕ್ಕಮಗಳೂರು ತಾಲೂಕನ್ನು ಒಳಗೊಂಡ ನಾಗರಿಕ ಮತ್ತು ರೈತ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಎನ್.ಆರ್.ಪುರ ತಾಲೂಕು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದ್ದಾರೆ.
    ಇತ್ತೀಚಿನ ದಿನಗಳಲ್ಲಿ ರೈತರ ಬದುಕಿನ ಮೇಲೆ ಅರಣ್ಯ ಇಲಾಖೆ ಮಾರಕ ಕಾಯ್ದೆಗಳಿಂದ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳ ದೌರ್ಜನ್ಯ ಹೆಚ್ಚುತ್ತಿದೆ. ರೈತರು ಜೀವನ ನಡೆಸುವುದೇ ಕಷ್ಟ ಎನಿಸುತ್ತಿದೆ. ಇದರೊಂದಿಗೆ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ಈ ಬಗ್ಗೆ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ಮೂಡಿಗೆರೆ, ಚಿಕ್ಕಮಗಳೂರು ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸಿಕೊಂಡು ಶೃಂಗೇರಿ ಕ್ಷೇತ್ರಮಟ್ಟದ ಸಮಿತಿ ಅಸ್ತಿತ್ವಕ್ಕೆ ತಂದು ಸಂಘಟಿತ ಹೋರಾಟ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಲೆನಾಡಿನ ವಿವಿಧ ಭಾಗಗಳಲ್ಲಿ ಕೆಲವು ದಿನಗಳಿಂದ ಕಾಡಾನೆ ಹಾವಳಿ ಅತಿಯಾಗಿದೆ. ನಿರಂತರವಾಗಿ ಬೆಳೆ, ಕೃಷಿ ಜಮೀನು ಹಾಳು ಮಾಡುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
    ಜಿಲ್ಲೆಯಲ್ಲಿ ಕೇವಲ ಮೂಡಿಗೆರೆ ತಾಲೂಕಿನಲ್ಲಿ ಮಾತ್ರ ಆನೆ ಕಾರ್ಯಪಡೆ ಇದ್ದು ಬೇರೆಲ್ಲೂ ಇಲ್ಲ. ಇದನ್ನು ನಮ್ಮ ತಾಲೂಕುಗಳಿಗೂ ವಿಸ್ತರಣೆ ಮಾಡಬೇಕಿದೆ. ಆನೆಗಳನ್ನು ಗ್ರಾಮಗಳಿಂದ ಬೇರೆ ಗ್ರಾಮಕ್ಕೆ ಓಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇದು ಬೇಡ. ಆನೆಗಳನ್ನು ಅಭಯಾರಣ್ಯಗಳಿಗೆ ಓಡಿಸಿ ರೈಲ್ವೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಈ ಹಿಂದೆ ಬರ್ ಜೋನ್, ಪರಿಸರ ಸೂಕ್ಷ್ಮ ವಲಯದ ಕುರಿತು ಮುಖ್ಯಮಂತ್ರಿ ಬಳಿ ತೆರಳಿ ಸಮಸ್ಯೆಯ ತೀವ್ರತೆ ತಿಳಿಸಿದಾಗ ಇದರ ಮರು ಪರಿಶೀಲನೆಗೆ ಅಂದಿನ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದು ಕೋರಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಸಚಿವರು ಪುನಃ ಸರ್ವೇ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದರು. ಆದರೆ ಇದು ಇನ್ನೂ ಕಾರ್ಯಗತವಾಗಿಲ್ಲ ಎಂದರು.
    ಸಮಿತಿ ರಚನೆ ನಂತರ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಮಾಹಿತಿ ಪಡೆಯಲಾಗುವುದು. ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವುದು, ಅಧಿಕಾರಿಗಳ ದೌರ್ಜನ್ಯ ತಡೆಗಟ್ಟಲು ಯಾವ ಮಾದರಿಯ ಹೋರಾಟ ರೂಪಿಸಬೇಕು ಎಂದು ಚರ್ಚಿಸಲಾಗುವುದು ಎಂದು ತಿಳಿಸಿದರು. ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಸದಸ್ಯ ನವೀನ್ ಕರಗಣೆ, ಕೃಷಿಕ ರತ್ನಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts