More

    ನಿರೀಕ್ಷೆಯಂತೆ ಆದಾಯ ಗುರಿ ಮುಟ್ಟಿದ ಅಬಕಾರಿ ಇಲಾಖೆ: 34,410 ಕೋಟಿ ರೂ.ರಾಜಸ್ವ ಸಂಗ್ರಹ

    ಬೆಂಗಳೂರು:ಹೆಚ್ಚು ಆದಾಯ ತರುವಲ್ಲಿ ಮುಂಚೂಣಿಯಲ್ಲಿರುವ ಅಬಕಾರಿ ಇಲಾಖೆ, ಸರ್ಕಾರ ನೀಡಿದ್ದ ರಾಜಸ್ವ ಗುರಿಯನ್ನು ನಿರೀಕ್ಷೆಯಂತೆ ಮುಟ್ಟಿದೆ.
    2023-24ರಲ್ಲಿ 36 ಸಾವಿರ ಕೋಟಿ ರೂ.ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸಿತ್ತು. ಬಳಿಕ, 34,500 ಕೋಟಿ ರೂ.ಗೆ ಪರಿಷ್ಕರಿಸಿ ಆದಾಯ ಸಂಗ್ರಹಿಸಲು ಸರ್ಕಾರ, ಇಲಾಖೆಗೆ ಟಾರ್ಗೆಟ್​ ನೀಡಲಾಗಿತ್ತು. ಅದರಂತೆ, 2023ರ ಏಪ್ರಿಲ್​ನಿಂದ 2024ರ ಮಾರ್ಚ್​ವರೆಗೆ 34,410 ಕೋಟಿ ರೂ. ಆದಾಯ ಸಂಗ್ರಹಿಸಿದೆ. 2022-23ನೇ ಸಾಲಿಗೆ ಹೋಲಿಸಿದರೆ 2023-24ರಲ್ಲಿ ಶೇ.15ರಷ್ಟು ಮದ್ಯ ಆದಾಯದಲ್ಲಿ ಬೆಳವಣಿಗೆಯಾಗಿದೆ. 2024-25ನೇ ಸಾಲಿನಲ್ಲಿ ಇಲಾಖೆಗೆ 38,525 ಕೋಟಿ ರೂ.ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಹೆಚ್ಚು ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಪ್ರತಿ ವರ್ಷ ಮದ್ಯದ ಬೆಲೆ ಹೆಚ್ಚಿಸುವ ಮೂಲಕ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿ ನಿಗದಿಪಡಿಸಿಕೊಂಡು ಬರುತ್ತಿದೆ.

    ಹಾರ್ಡ್​ ಡ್ರಿಂಕ್ಸ್​ ಹೆಚ್ಚು ಸೇಲ್​
    ರಾಜ್ಯದಲ್ಲಿ 3,988 ವೈನ್​ಶಾಪ್​(ಸಿಎಲ್​2), 279 ಕ್ಲಬ್​ (ಸಿಎಲ್​4), 78 ಸ್ಟಾರ್​ ಹೋಟೆಲ್​ ( ಸಿಎಲ್​6ಎ), 2,382 ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​&7), 68 ಮಿಲಿಟರಿ ಕ್ಯಾಂಟಿನ್​ ಮಳಿಗೆ (ಸಿಎಲ್​8), 3,634 ಬಾರ್​ ಆ್ಯಂಡ್​ ರೆಸ್ಟೋರೆಂಟ್​ (ಸಿಎಲ್​9), 1,041 ಎಂಎಸ್​ಐಎಲ್​ (ಸಿಎಲ್​11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 2023-24ರಲ್ಲಿ 705 ಲಕ್ಷ ಬಾಕ್ಸ್​ ಇಂಡಿಯನ್​ ಮೇಡ್​ ಲಿಕ್ಕರ್​ (ಐಎಂಎಲ್​) ಸೇಲ್​ಯಾದರೆ, 444 ಲಕ್ಷ ಬಾಕ್ಸ್​ ಬಿಯರ್​ ಮಾರಾಟವಾಗಿದೆ. 2022-23ರಲ್ಲಿ 698 ಲಕ್ಷ ಬಾಕ್ಸ್​ ಐಎಂಎಲ್​, 390 ಲಕ್ಷ ಬಾಕ್ಸ್​ ಬಿಯರ್​ ಸೇಲ್​ ಆಗಿತ್ತು. ಪ್ರತಿ ವರ್ಷವೂ ಬಿಯರ್​ಗಿಂತ ಹಾರ್ಡ್​ ಡ್ರಿಂಕ್ಸ್​ ಹೆಚ್ಚು ಮಾರಾಟವಾಗುತ್ತಿರುವುದು ಗಮನಾರ್ಹ.

    ಮದ್ಯ ವ್ಯಸನಿಗಳು ಹೆಚ್ಚಳ
    ವರ್ಷದಿಂದ ವರ್ಷಕ್ಕೆ ಸರ್ಕಾರಕ್ಕೆ ಬರುತ್ತಿರುವ ಆದಾಯ ಹೆಚ್ಚುತ್ತಿರುವ ನಡುವೆಯೂ ಮದ್ಯ ಸೇವಿಸುತ್ತಿರುವವರ ಸಂಖ್ಯೆಯೂ ಅಷ್ಟೇ ಏರುಗತಿಯಲ್ಲಿದೆ. 21 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ರ್ನಿಬಂಧ ಇದ್ದರೂ ಮದ್ಯದಂಗಡಿಗಳಲ್ಲಿ ಹದಿಹರೆಯವರು ಮದ್ಯ ಚಟ ಅಂಟಿಸಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಯರ್​ ಕುಡಿಯವವರಗಿಂತ ವಿಸ್ಕಿ ಕುಡಿಯವವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಬಿಯರ್​ ದರ ಹೆಚ್ಚು ಇರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿಸ್ಕಿ ಕುಡಿಯುತ್ತಿದ್ದಾರೆ.

    ಹಳ್ಳಿಗಳಲ್ಲೂ ಮದ್ಯದ ಘಮಲು
    ರಾಜ್ಯದ ಶೇ.85 ಹಳ್ಳಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾದರೂ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಇದುವರೆಗೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ನಾಮ್​ಕೇವಾಸ್ತೆ ಎಂಬಂತೆ ಪ್ರಕರಣ ದಾಖಲಿಸಿ ಲಂಚ ಪಡೆದು ಅಧಿಕಾರಿಗಳು ಸುಮ್ಮನಾಗುತ್ತಾರೆ. ಮದ್ಯ ನಶೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts