More

    ಮಿತಿಮೀರಿದ ಲಂಚಗುಳಿತನ; ಹೋರಾಟಕ್ಕೆ ಅಣಿಯಾದ ಮದ್ಯ ಮಾರಾಟಗಾರರು

    ಬೆಂಗಳೂರು: ಮಿತಿ ಮೀರಿದ ಲಂಚಗುಳಿತನ, ಹೊಸ ಅಬಕಾರಿ ನೀತಿ, ದೊಡ್ಡಮಟ್ಟದಲ್ಲಿ ಹೊಸ ಸನ್ನದು ನೀಡಿಕೆ ಪ್ರಸ್ತಾಪ ಸೇರಿ ವಿವಿಧ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲು ಮದ್ಯ ವ್ಯಾಪಾರಿಗಳು ಮುಂದಾಗಿದ್ದಾರೆ.
    ಮದ್ಯ ವ್ಯಾಪಾರಿಗಳ ಸಂಘವು ಇದೇ ವಾರದಲ್ಲಿ ಸಭೆ ಸೇರಿ ಸರ್ಕಾರದ ವಿರುದ್ಧ ಸೆಣೆಸಲು ಕಾರ್ಯತಂತ್ರ ರೂಪಿಸಲಿದೆ.
    ಪ್ರಮುಖವಾಗಿ ಅಬಕಾರಿ ಇಲಾಖೆಯಿಂದ ಲಂಚಗುಳಿತನವಿದೆ. ಗುತ್ತಿಗೆದಾರರು 40 ಪರ್ಸೆಂಟ್ ಕಮೀಷನ್ ಕೊಡುವಂತೆ ನಮ್ಮದೂ ಸ್ಥಿತಿ ಇದೆ. ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ. ಮಾಮೂಲಿ ಕೊಟ್ಟು ಸಾಕಾಗಿದೆ. ನಮ್ಮನ್ನು ವ್ಯಾಪಾರಸ್ಥರಾಗಿ ನೋಡಬೇಕು, ಲಂಚ ಕೊಡಲು ನಾವು ಎಲ್ಲಿಂದ ಹಣ ತರುವುದು ಎಂದು ಮದ್ಯ ವ್ಯಾಪಾರಿಗಳ ಸಂಘದ ಪ್ರತಿನಿಧಿ ವಿಜಯವಾಣಿಗೆ ತಿಳಿಸಿದ್ದಾರೆ.
    ಅದೇ ರೀತಿ ಹೊಸ ಅಬಕಾರಿ ನೀತಿ ಬರುತ್ತಿದೆ, ಇದರ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಈ ನೀತಿಯ ಪ್ರಮುಖ ಪಾತ್ರ ನಮ್ಮದಿರುತ್ತದೆ. ನಮ್ಮ ಸಂಕಷ್ಟಗಳನ್ನೂ ಸರ್ಕಾರ ಆಲಿಸಿ ನೀತಿ ತರಬೇಕು ಎಂಬ ಅಭಿಪ್ರಾಯವಿದೆ ಮತ್ತು ಹೊಸದಾಗಿ ಬೇಕಾಬಿಟ್ಟಿ ಸನ್ನದು ಕೊಡಲು ಸರ್ಕಾರ ಹೊರಟಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ. ಈಗಲೇ ಸನ್ನದುಗಳಿಗೆ ಅವೈಜ್ಞಾನಿಕ ಮಾಸಿಕ ಗುರಿ ನೀಡಿ ಒತ್ತಡ ಹೇರಲಾಗುತ್ತಿದೆ. ಅಂಥದ್ದರಲ್ಲಿ ಮತ್ತಷ್ಟು ಸನ್ನದು ನೀಡಿದರೆ ವ್ಯಾಪಾರ ಕಷ್ಟವಾಗಲಿದೆ ಎಂದು ಮದ್ಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಅಕ್ಟೋಬರ್ 5ರಂದು ಶೇಷಾದ್ರಿಪುರಂನಲ್ಲಿ ಸಭೆ ನಡೆಸಬೇಕೆಂಬ ಉದ್ದೇಶವಿದೆ. ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಾಪಾರದಲ್ಲಿ ನಾನಾ ವಿಧದ ತೊಡಕು ತಾಪತ್ರಯ ಜಾಸ್ತಿಯಾಗಿದೆ. ದೈನಂದಿನ ಬದುಕು ಯಾತನಮಯವಾಗಿದೆ. ಹೀಗಿರುವಾಗ ಒಗ್ಗೂಡಿ ಹೋರಾಟದೇ ಹೋದರೆ ಮುಂದಿನ ದಿನಗಳಲ್ಲಿ ಅಪಾರ ನಷ್ಟ ಹೊಂದಬೇಕಾಗುತ್ತದೆ ಎಂದು ಸಭೆ ಕರೆಯಲಾಗುತ್ತಿದೆ ಎಂದು ಮದ್ಯ ವ್ಯಾಪಾರಿಗಳ ಸಂಘದ ಪ್ರತಿನಿಧಿ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts