More

    ಹೆಚ್ಚುವರಿ ವೆಚ್ಚ ಭರಿಸುವ ಹೊರೆ

    ಶಿರಸಿ: ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಮೊಟ್ಟೆ ದರದ ವ್ಯತ್ಯಾಸ ಮೊತ್ತವನ್ನು ಆಯಾ ಪಂಚಾಯಿತಿಯೇ ಭರಿಸುವಂತೆ ಸರ್ಕಾರ ಸೂಚಿಸಿದೆ. ಈಗಾಗಲೇ ಕರ ವಸೂಲಿಗೆ ಪರದಾಡುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಈ ಆದೇಶ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿದೆ.
    ಅಂಗನವಾಡಿ ಕೇಂದ್ರಗಳ ಫಲಾನುವಿಗಳಿಗೆ ಮೊಟ್ಟೆ ಖರೀದಿಸುವಲ್ಲಿ ಹೆಚ್ಚಾಗುವ ವ್ಯತ್ಯಾಸದ ಮೊತ್ತವನ್ನು ಆಯಾ ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಭರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಜೂ. 3ರಂದು ಆದೇಶಿಸಿದೆ.
    ಕೋವಿಡ್ ಒಕ್ಕರಿಸಿದಾಗಿನಿಂದ ಗ್ರಾಮ ಪಂಚಾಯಿತಿಗಳು ಕಂದಾಯ ಸಂಗ್ರಹದಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಮನೆ, ನೀರಿನ ಕರವನ್ನು ಯಾರೂ ವ್ಯವಸ್ಥಿತವಾಗಿ ಪಾವತಿಸುತ್ತಿಲ್ಲ. ಅಂಗಡಿ, ಮುಂಗಟ್ಟುಗಳು, ಉದ್ದಿಮೆಗಳು ಸೇರಿದಂತೆ ಬಹುತೇಕ ಎಲ್ಲವೂ ಲಾಕ್​ಡೌನ್ ಕಾರಣಕ್ಕೆ ಸ್ಥಗಿತವಾಗಿದ್ದು, ನಷ್ಟದ ಕಾರಣಕ್ಕೆ ತೆರಿಗೆ ಪಾವತಿಸಿಲ್ಲ. ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವುದಕ್ಕೂ ಸಂಪನ್ಮೂಲ ಇಲ್ಲದಂತಾಗಿದೆ. ಈ ನಡುವೆ ಹಳ್ಳಿಹಳ್ಳಿಗೂ ಕರೊನಾ ಬಾಧಿಸುತ್ತಿದ್ದು, ನಿಯಂತ್ರಣ ಕ್ರಮಗಳಿಗೆ ಹಣವಿಲ್ಲದೆ ಸುಸ್ತಾಗಿವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಮೊಟ್ಟೆಯ ಹೆಚ್ಚುವರಿ ಮೊತ್ತವನ್ನು ಭರಿಸುವಂತೆ ಆದೇಶಿಸಿರುವುದು ಇನ್ನಷ್ಟು ಹೊರೆಗೆ ಕಾರಣವಾಗಿದೆ.
    ಮಾಸಿಕ 12ರಿಂದ 15 ಲಕ್ಷ ರೂ:
    ಜಿಲ್ಲೆಯಲ್ಲಿ ಅಂದಾಜು 47669 ಮಕ್ಕಳು ಮೂರು ವರ್ಷದಿಂದ ಆರು ವರ್ಷಗಳ ಒಳಗಿನವರು ಮೊಟ್ಟೆ ಪಡೆಯಲು ಅರ್ಹರು. ಅಲ್ಲದೇ, 8662 ಗರ್ಭಿಣಿಯರು, 8241 ಬಾಣಂತಿಯರಿಗೂ ಮೊಟ್ಟೆ ವಿತರಣೆ ಆಗುತ್ತಿದೆ. ತಿಂಗಳಿಗೆ ಅಂದಾಜು 8 ಲಕ್ಷ ಮೊಟ್ಟೆಗಳು ಯೋಜನೆಗೆ ಬಳಕೆಯಾಗುತ್ತಿವೆ. ಪ್ರತಿ ಮೊಟ್ಟೆಗೆ 1ರಿಂದ 2 ರೂಪಾಯಿ ಹೆಚ್ಚುವರಿ ನೀಡಬೇಕಿದ್ದು, ತಿಂಗಳಿಗೆ ಈ ಮೊತ್ತವೇ ಕನಿಷ್ಠ 12ರಿಂದ 15 ಲಕ್ಷ ರೂ.ಗಳಷ್ಟಾಗುತ್ತದೆ.
    ಏರುತ್ತಿರುವ ದರ: ಕೋವಿಡ್ 2ನೆ ಅಲೆಯ ಮುನ್ನ ಮಾರುಕಟ್ಟೆಯಲ್ಲಿ 5 ರೂಪಾಯಿಗೆ ಒಂದು ಮೊಟ್ಟೆ ಲಭಿಸುತ್ತಿದ್ದುದು, ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಈಗ ಬೆಲೆ 7 ರೂ.ಗೆ ಏರಿಕೆ ಆಗಿದೆ. ಬೇಡಿಕೆ ಹೆಚ್ಚಿದಂತೆ ದರವೂ ಏರುಮುಖವಾಗಿದೆ. ಮೊಟ್ಟೆ ಖರೀದಿ ದರ ಹೆಚ್ಚಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರವು ಈ ವೆಚ್ಚವನ್ನು ತುಂಬಿ ಕೊಡುವ ಬದಲು ಗ್ರಾಮ ಪಂಚಾಯಿತಿಗಳ ಮೇಲೆ ಹೇರಿದೆ. ಇದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.



    ಕರೊನಾ ಬಂದ ದಿನದಿಂದ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಪನ್ಮೂಲ ಕ್ರೋಢೀರಿಸಲು ಇನ್ನಿಲ್ಲದಂತೆ ಶ್ರಮಿಸುತ್ತಿದ್ದರೂ ಹೆಚ್ಚಿನ ಫಲಿತಾಂಶ ಕಾಣುತ್ತಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಂತ ಸಂಪನ್ಮೂಲದಿಂದ ವೆಚ್ಚ ಭರಿಸುವಂತೆ ಹೇಳಿದರೆ ಹೇಗೆ? ಮೊಟ್ಟೆ ಖರೀದಿ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಬೇಡಿಕೆ ಬಂದರೆ ಅದನ್ನು ಹೆಚ್ಚಿಸಬೇಕೇ ಹೊರತು ಪಂಚಾಯಿತಿಗಳನ್ನು ಗುರಿ ಮಾಡುವುದಲ್ಲ. ತಕ್ಷಣ ಈ ಆದೇಶ ಹಿಂಪಡೆಯಬೇಕು.
    -ಶ್ರೀಪತಿ ಹೆಗಡೆ- ಇಟಗುಳಿ ಪಂಚಾಯಿತಿ ಸದಸ್ಯ


    ಮನೆಗಳಿಗೆ ವಿತರಣೆ
    ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತಿರುವ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಅಪೌಷ್ಟಿಕತೆ ಕಡಿಮೆ ಮಾಡಲು ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಗಳಿಗೇ ಮೊಟ್ಟೆ ವಿತರಿಸಲಾಗುತ್ತಿದೆ. ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ವಾರದಲ್ಲಿ 3 ದಿನ, ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗುವ 3ರಿಂದ 6 ವರ್ಷದ ಮಕ್ಕಳಿಗೆ ವಾರದಲ್ಲಿ 2 ದಿನ ಹಾಗೂ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ವಾರದಲ್ಲಿ 6 ದಿನ ಮೊಟ್ಟೆ ವಿತರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts