More

    ಶಾಸಕರ ಸವಾಲು ಸ್ವೀಕರಿಸಿದ ಮಾಜಿ ಶಾಸಕ ಬಾಲಕೃಷ್ಣ : 19 ರಂದು ಮೋಟೆಗೌಡನಪಾಳ್ಯದಲ್ಲಿ ಕೆಶಿಪ್ ವಿಚಾರವಾಗಿ ಚರ್ಚೆ

    ಮಾಗಡಿ : ಕೆಶಿಪ್ ವಿಚಾರವಾಗಿ ಶಾಸಕ ಎ. ಮಂಜುನಾಥ್ ಚರ್ಚೆಗೆ ಮುಕ್ತ ಆಹ್ವಾನ ನೀಡಿದ್ದು, ಏ.19ರಂದು ಮೋಟೆಗೌಡನಪಾಳ್ಯದ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಚರ್ಚೆಗೆ ಬರುವುದಾಗಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಶಾಸಕ ಎ.ಮಂಜುನಾಥ್ ಸವಾಲು ಸ್ವೀಕರಿಸಿದ್ದಾರೆ.

    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೈಸ್ ರಸ್ತೆಯಿಂದ ಕುಣಿಗಲ್ ರಸ್ತೆ ಅಭಿವೃದ್ಧಿಗೆ ಎಚ್.ಡಿ. ಕುಮಾರಸ್ವಾಮಿ ಮತ್ತು ನಾನು ಸೇರಿ 1,700 ಕೋಟಿ ರೂ. ಹಣ ತಂದು ರಸ್ತೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಮಹದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದಲ್ಲಿ ಶಾಸಕರು ಹೇಳಿದ್ದಾರೆ. ಇಲ್ಲಿ ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಎಂದಿದ್ದಾರೆ. ಬೇರೆ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಂತರ ಕಳೆದ ಗುರುವಾರ ಮಾಗಡಿಯ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಇದೇ ವಿಷಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಹೆಸರನ್ನು ಸೇರಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೆಶಿಪ್ ರಸ್ತೆ ಮಂಜೂರಾಗಿ, ಟೆಂಡರ್ ನಡೆದದ್ದು ನಮ್ಮ ಅವಧಿಯಲ್ಲಿ ಎಂದು ಶಾಸಕರು ಹೇಳಿದ್ರೆ ಚರ್ಚೆಗೆ ಆಸ್ಪದ ಇರುತ್ತಿರಲಿಲ್ಲ. ನಾನಿಲ್ಲದಿದ್ರೆ ರಸ್ತೆ ಆಗುತ್ತಿರಲಿಲ್ಲ ಎಂದಿದ್ದಾರೆ. ಶಾಸಕರಾಗುವ ಮುನ್ನವೇ ರಸ್ತೆಗೆ ಭೂಮಿ ಬಿಟ್ಟುಕೊಟ್ಟ ರೈತರು ಹಣ ಪಡೆದಿದ್ದಾರೆ. ರೈತರು ಹಣ ಪಡೆದ ಮೇಲೆ ಯೋಜನೆ ನಿಂತು ಹೋಗಲು ಸಾಧ್ಯವೇ? ಎಂದರು.

    ಶಾಸಕರು ತೊಡೆ ತಟ್ಟಿ ಚರ್ಚೆಗೆ ಕರೆದಿದ್ದಾರೆ. ಅವರ ಪಂಥಾಹ್ವಾನ ಸ್ವೀಕರಿಸದಿದ್ದರೆ ಜನರಲ್ಲಿ ನನ್ನ ಮೇಲೆ ಅಪನಂಬಿಕೆ ಮೂಡುತ್ತದೆ. ಹಾಗಾಗಿ ಅವರ ಆಹ್ವಾನ ಸ್ವೀಕರಿಸಿದ್ದೇನೆ. ಅಧಿಕಾರಿಗಳು, ಶಾಸಕರು, ನಾನು ಮತ್ತು ಮಾಧ್ಯಮದವರ ನಡುವೆ ಚರ್ಚೆ ನಡೆದಾಗ ಸತ್ಯಾಸತ್ಯತೆ ಹೊರಬಂದು ಅನಾವಶ್ಯಕ ಚರ್ಚೆ ಅಂತ್ಯವಾಗುತ್ತದೆ ಎಂದರು.

    ಸುಳ್ಳು ಆರೋಪ: ನಾಡಪ್ರಭು ಕೆಂಪೇಗೌಡ ಕೋಟೆ, ಗೌರಮ್ಮನ ಕೆರೆ ಅಭಿವೃದ್ದಿಗೆ ಕಾಯಕಲ್ಪ ನೀಡಿದ್ದೆ. ಈಗ ನಿಂತುಹೋಗಿದೆ. ಅಭಿವೃದ್ದಿ ಮಾಡಲು ತಾಕತ್ತು ಇಲ್ಲವೆ, ಧರ್ಮಪತ್ನಿ ಹೆಸರಲ್ಲಿ ಉದ್ಯಾನವನವನ್ನು ದತ್ತು ಪಡೆಯುತ್ತೇನೆ ಎಂದು 2 ವರ್ಷಗಳ ಹಿಂದೆ ಶಾಸಕರು ಹೇಳಿದ್ದು ಏನಾಗಿದೆ ಎಂದು ಎ. ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹೇಮಾವತಿ ಯೋಜನೆ ಕುರಿತಂತೆ ಎಚ್.ಸಿ. ಬಾಲಕೃಷ್ಣ ರೈತರನ್ನು ಎತ್ತಿಕಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದು ಈ ಬಗ್ಗೆ ಶಾಸಕರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದರು.

    ಆಹಾರ ಕಿಟ್‌ಗಳಿಗೆ ಜೆಡಿಎಸ್ ಚಿಹ್ನೆ: ಕರೊನಾ ವೇಳೆ ಕಾರ್ಮಿಕ ಇಲಾಖೆಯಿಂದ ಬಂದ 2 ಸಾವಿರ ಆಹಾರ ಕಿಟ್‌ಗಳಿಗೆ ಜೆಡಿಎಸ್ ಚಿಹ್ನೆ ಹಾಕಿಕೊಂಡು ಹಂಚುವ ನೀಚ ಕೃತ್ಯಮಾಡುವುದಿಲ್ಲ. ಕರೊನಾ ವೇಳೆ ಜನರ ನೋವಿಗೆ ಸ್ಪಂದಿಸಬೇಕಾದ ಶಾಸಕರು ಯಾರೊಂದಿಗೆ ಪಾರ್ಟಿ ನಡೆಸುತ್ತಿದ್ದರು ಎನ್ನುವುದನ್ನು ಬೇಕಾದರೆ ಬಹಿರಂಗಗೊಳಿಸುತ್ತೇನೆ. ನನಗೆ ಕಾರ್ಯಕರ್ತರ ಮನೆಗಳೇ ಕಚೇರಿ. ಪಕ್ಷದ ಕಚೇರಿಯಿಲ್ಲದೆ 20 ವರ್ಷಗಳಿಂದ ರಾಜಕೀಯ ಮಾಡಿದ್ದೇನೆ. ಅವರ ಪಾರ್ಟಿ ಕಚೇರಿ ಯಾರ ಹೆಸರಿನಲ್ಲಿದೆ, ಅದರ ದಾಖಲೆಗಳು ಯಾರ ಬಳಿಯಿದೆ ಎಂಬ ಬಗ್ಗೆಯೂ ಚರ್ಚೆಗೆ ಸಿದ್ಧ ಎಂದು ಬಾಲಕೃಷ್ಣ ಹೇಳಿದರು.

    ಹೊಡೆದಾಡೋಣ : ಬಾಲಕೃಷ್ಣನ ಮೇಲೆ ಕೋಪವಿದ್ದರೆ, ಮೈದಾನದಲ್ಲಿ ಹೊಡೆದಾಡೋಣ. ಅದನ್ನು ಬಿಟ್ಟು ಕಾರ್ಮಿಕರು, ರೈತರ ಮೇಲೆ ಗದಾಪ್ರಹಾರ ಮಾಡುವುದು ಬೇಡ. ಆಶೋಕ ಚಕ್ರವರ್ತಿ ಎಲ್ಲ ರಾಜ್ಯಗಳ ಮೇಲೆ ದಂಡಯಾತ್ರೆ ಹೋಗಿ ಗೆದ್ದು ಕೊನೆಗೆ ಬೌದ್ಧಧರ್ಮ ಸ್ವೀಕರಿಸಿ ರಾಜ್ಯವನ್ನೇ ತೊರೆದ. ಆ ರೀತಿ ಶಾಸಕರು ಆಗುವುದು ಬೇಡ ಎಂದು ಶಾಸಕರ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts