More

    ರಾಜಕೀಯವನ್ನೇ ಹಾಳು ಮಾಡುತ್ತಿದೆ ಬಿಜೆಪಿ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ

    ಗೌರಿಬಿದನೂರು: ದೇಶದಲ್ಲಿ ಬಿಜೆಪಿ ನಾಯಕರು ರಾಜಕೀಯ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ, 18 ಶಾಸಕರನ್ನು ಖರೀದಿಸುವ ಮೂಲಕ ನಮ್ಮ ಸರ್ಕಾರವನ್ನು ಕೆಡವಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

    ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಣದ ಮೂಲಕ ಯಾರನ್ನು ಬೇಕಾದರೂ ಖರೀದಿಸಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ನಾವು ಅವರ ಮಟ್ಟಕ್ಕೆ ಇಳಿಯಲು, ಹಣಬಲ ಪ್ರದರ್ಶಿಸಲು ಸಾಧ್ಯವಿಲ್ಲ. ನಮ್ಮ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇವೆ ಎಂದರು.

    30-40 ವರ್ಷಗಳಿಂದ ಎರಡೂ ಜಿಲ್ಲೆಗಳಲ್ಲಿ ಜನತಾ ಪರಿವಾರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಆ ಪರಂಪರೆ ಮುಂದುವರಿಯಲಿದೆ. 25 ಕ್ಷೇತ್ರಗಳ ಪೈಕಿ 6ರಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಎಚ್ಡಿಕೆ ಹೇಳಿದರು.

    ರಾಜ್ಯ ಸರ್ಕಾರ ವಿಫಲ: ರಾಜ್ಯ ಸರ್ಕಾರ ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದೆ. ಆಡಳಿತ ವೈಫಲ್ಯ ಎದ್ದು ಕಾಣುತ್ತಿದ್ದು, ರಾಜ್ಯದ ಸಾಲ ಪ್ರಮಾಣ ಸಹ ಹೆಚ್ಚಾಗುತ್ತಿದೆ. ಅಕಾಲಿಕ ಮಳೆಯಿಂದ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಆದರೆ ಸೂಕ್ತ ಪರಿಹಾರ ಕಲ್ಪಿಸಿಲ್ಲ. ಸುಪ್ರೀಕೋರ್ಟ್ ಛಾಟಿ ಬೀಸಿದರೂ ಈವರೆಗೆ ಕರೊನಾದಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಸಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ದೇಶದ ಜನರು ಪ್ರಾದೇಶಿಕ ಪಕ್ಷಗಳನ್ನು ಬಯಸುತ್ತಿದ್ದಾರೆ. ಆಂಧ್ರ, ತಮಿಳುನಾಡು, ತೆಲಂಗಾಣ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿದಿರುವುದು ಇದಕ್ಕೆ ಉತ್ತಮ ನಿದರ್ಶನ. ಅದೇ ರೀತಿ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬೇಕು ಎಂದು ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮನವಿ ಮಾಡಿದರು.

    ಅಭ್ಯರ್ಥಿ ವಕ್ಕಲೇರಿ ರಾಮು, ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ಮಾಜಿ ಸದಸ್ಯ ಹರಿನಾಥರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್ ಅಬ್ಬಾಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದ ಅನೇಕ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಇದ್ದರು.

    ಅಧಿಕಾರ ಸಿಕ್ಕರೆ ಪಂಚಸೂತ್ರ ಜಾರಿ: ಜನವರಿಯಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. 2023ರಲ್ಲಿ ಜೆಡಿಎಸ್‌ಗೆ ಸಂಪೂರ್ಣ ಅಧಿಕಾರ ನೀಡಿದಲ್ಲಿ ಪಂಚಸೂತ್ರ ಯೋಜನೆ ಜಾರಿಗೊಳಿಸಲಾಗುವುದು. ಪ್ರತಿ ಕುಟುಂಬಕ್ಕೆ ಉದ್ಯೋಗ, ಆರೋಗ್ಯ, ಮನೆ ನೀಡುವ ಜತೆಗೆ 7 ದಶಕಗಳಿಂದ ನೀರಾವರಿ ವಿಷಯದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಾಗಿ ಕುಮಾರಸ್ವಾಮಿ ಭರವಸೆಯಿತ್ತರು. ಒಂದೂಕಾಲು ಲಕ್ಷ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಂಡು, ಪ್ರತಿ ಗ್ರಾಪಂ ಮಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಗ್ರಾಮೀಣ ಮಕ್ಕಳಿಗೆ ಆಂಗ್ಲ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಲಾಗಿದ್ದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಇಂದಿನ ಸರ್ಕಾರ ಖಾಸಗಿಯವರಿಗೆ ಕೊಡಲು ಮುಂದಾಗಿರುವುದು ವಿಪರ್ಯಾಸ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts