More

    ಕುಮಾರಸ್ವಾಮಿಯದ್ದು ಚುನಾವಣೆ ಗಿಮಿಕ್

    ಮಂಡ್ಯ : ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯ ಹುತಾತ್ಮ ನಾಯಕರ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ. ಇದಕ್ಕಾಗಿ ಅವರ ಪುಣ್ಯಭೂಮಿಗೆ ತೆರಳಿ ಪುಷ್ಪನಮನ ಸಲ್ಲಿಸಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಪಾಂಡವಪುರ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ವ್ಯಂಗ್ಯವಾಡಿದರು.


    ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯ ಬಿಟ್ಟು, ಇದನ್ನು ಪ್ರಶ್ನಿಸಿದ ರೈತರಿಗೆ ಅಣೆಕಟ್ಟೆ ಕೀ ದೆಹಲಿಯಲ್ಲಿದೆ ಹೋಗಿ ತಗೊಳ್ಳಿ ಎಂದು ಉದ್ದಟನದ ಪ್ರದರ್ಶಿಸಿದರು. ಚುನಾವಣಾ ಸಂದರ್ಭವಾಗಿರುವ ಕಾರಣಕ್ಕೆ ಮೇಕೆದಾಟು ಮತ್ತು ಕಾವೇರಿ ಸಮಸ್ಯೆಯನ್ನು ಇತ್ಯಾರ್ಥ ಪಡಿಸುತ್ತೇನೆ ಎಂದು ನಾಟಕವಾಡುತ್ತಿದ್ದಾರೆ. 2019ರಲ್ಲಿ ರಾಜ್ಯದಿಂದ 27 ಸಂಸದರು ಆಯ್ಕೆಯಾಗಿದ್ದರು ಏಕೆ ಕಾವೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿಲ್ಲ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದರು ಅವರ‌್ಯಾಕೆ ಸಮಸ್ಯೆ ಬಗೆಹರಿಸಲಿಲ್ಲ. ಅವಕಾಶ ಇದ್ದಾಗ ಮಾಡದ ಕೆಲಸವನ್ನು ಈಗ ಮಾಡುತ್ತಾರಯೇ? ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


    ಸಿದ್ದರಾಮಯ್ಯ ಅವರು ಒಕ್ಕಲಿಗರನ್ನು ತುಳಿದರು ಎಂಬ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಂಚ ಗ್ಯಾರಂಟಿಗಳನ್ನು ಎಲ್ಲ ಜಾತಿ, ಜನಾಂಗಕ್ಕೆ ನೀಡಿದ್ದಾರೆ. ಈ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಒಕ್ಕಲಿಗರ ನಾಯಕ ಎಂದು ಕರೆಯಿಸಿಕೊಳ್ಳುವ ಕುಮಾರಸ್ವಾಮಿ ಅವರು, ಎಸ್.ಡಿ.ಜಯರಾಮು, ಸಿದ್ದರಾಜು ಅವರ ಕುಟುಂಬವನ್ನು ಕಡೆಗಣಿಸುವ ಮೂಲಕ ಜಿಲ್ಲೆಯ ಒಕ್ಕಲಿಗ ನಾಯಕರನ್ನು ತುಳಿದಿದ್ದಾರೆ. ಜಿಲ್ಲೆಯವರಾದ ಸಿ.ಎಸ್.ಪುಟ್ಟರಾಜು ಅವರಿಗೆ ಲೋಕಸಭೆ ಟಿಕೆಟ್ ಕೊಡಬೇಕಿತ್ತು. ಸ್ವಾರ್ಥ ಮತ್ತು ಕುಟುಂಬ ರಾಜಕಾರಣದ ಭಾಗವಾಗಿ ಅವರೇ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಜಿಲ್ಲೆಯ ಜನ ಸ್ವಾಭಿಮಾನಿಗಳು ಎಂಬುದು ಹಿಂದಿನ ಚುನಾವಣೆಗಳಲ್ಲೂ ಸಾಭೀತಾಗಿದ್ದು, ಈಗಲೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಹೃದಯವಂತ ಮತ್ತು ಗುಣವಂತ ಎಂದು ಬಿಂಬಿಸಿ ಮತ ಕೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಹಣ ಇಲ್ಲವೇ? ಎಚ್‌ಡಿಕೆ ಒಡೆದು ಆಳುವ ನೀತಿ ಬಿಡಬೇಕು ಎಂದು ಒತ್ತಾಯಿಸಿದರು.


    ಕಾರ್ಯಕ್ರಮದಲ್ಲಿ ಕುರುಬರ ಸಂಘದ ತಾಲೂಕು ಅಧ್ಯಕ್ಷ ಹುಚ್ಚೇಗೌಡ, ಕಾಂಗ್ರೆಸ್ ಮುಖಂಡರಾದ ಅಂತನಹಳ್ಳಿ ಬಸವರಾಜು, ಟಿ.ಎಸ್.ಹಾಳಯ್ಯ, ಹರಳಹಳ್ಳಿ ಲೋಕೇಶ್, ಕೋ.ಪು.ಗುಣಶೇಖರ್, ದೊಡ್ಡಬ್ಯಾಡರಹಳ್ಳಿ ಪ್ರಕಾಶ್, ಹಿರೇಮರಳಿ ಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts