More

    ಅಮಿತ್​ ಷಾ ಜೊತೆಗೆ ಎಚ್​ಡಿಕೆ ಚರ್ಚೆ; ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಕ್ಷೇತ್ರ ಹಂಚಿಕೆ ಅಂತಿಮ

    ನವದೆಹಲಿ: ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ಆರಂಭಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಟಕ್ಕರ್​ ಕೊಡಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಂಡಿದೆ.

    ಅದಕ್ಕೆ ಪೂರಕವೆಂಬಂತೆ ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಇ ಹಾಗೂ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.

    ಸುಮಾರು 45 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಮೈತ್ರಿ ಸೇರಿದಂತೆ ರಾಜ್ಯ ರಾಜಕೀಯದ ಹಲವರು ವಿಚಾರಗಳನ್ನು ಅಮಿತ್​​ ಷಾ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕ್ಷೇತ್ರ ಹಂಚಿಕೆಯ ಸೇರಿದಂತೆ ಜೆಡಿಎಸ್ ಪಕ್ಷ ಅಧಿಕೃತವಾಗಿ ಎನ್​​ಡಿಎ ಮೈತ್ರಿಕೂಟಕ್ಕೆ ಸೇರುವ ಪ್ರಕ್ರಿಯೆಗಳೆಲ್ಲವನ್ನು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜತೆ ಕೂತು ಚರ್ಚೆ ನಡೆಸಿದ ನಂತರ ಅಂತಿಮಗೊಳಿಸೋಣ ಎಂದು ಅಮಿತ್ ಶಾ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಹೇಳಿರುವುದಾಗಿ ವರದಿಯಾಗಿದೆ.

    ಇದಲ್ಲದೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳೆಲ್ಲವನ್ನೂ ಎನ್​ಡಿಎ ಮೈತ್ರಿಕೂಟ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿ ಆಗಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಒಟ್ಟಾಗಿ ಮಾಡೋಣ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡು ಅತ್ಯಂತ ವಿಶ್ವಾಸ, ನಂಬಿಕೆಯ ಆಧಾರದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ನಿರ್ಧಾರಗಳನ್ನು ಮಾಡೋಣ ಎಂದು ಅಮಿತ್​ ಷಾ ಅವರು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    BJP JDS

    ಇದನ್ನೂ ಓದಿ: ಕೂಲಿ ಕಾರ್ಮಿಕನ ಕವನ ಸಂಕಲನಕ್ಕೆ ಒಲಿಯಿತು 2024ನೇ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿ

    ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಒಂದು ವರ್ಷ ತುಂಬುವುದಕ್ಕೆ ಮೊದಲೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ನಿಟ್ಟಿನಲ್ಲಿ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.

    ಅಮಿತ್​ ಷಾ ಭೇಟಿ ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್​ಡಿಕೆ, ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರದ ಬಗ್ಗೆಯೂ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ರಾಜ್ಯ ಸರ್ಕಾರ ಈವರೆಗೂ ಬಿಡಿಗಾಸನ್ನು ಬರಪೀಡಿತ ಜನರಿಗೆ ಕೊಟ್ಟಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಈ ಬಗ್ಗೆ ಅಮಿತ್​ ಷಾ ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ.

    ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಕೇಂದ್ರ ಗೃಹಸಚಿವ ಅಮಿತ್​​ ಷಾ ಭೇಟಿ ಬಳಿಕ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts