More

    ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ

    ಪಿರಿಯಾಪಟ್ಟಣ : ಪರಿಸರದ ಸ್ವಚ್ಛತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮೈಕಾಪ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫುಲ್ ಹಸನ್ ಹೇಳಿದರು.

    ತಾಲೂಕಿನ ದೊಡ್ಡಬೇಲಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಐಟಿಸಿ ಮತ್ತು ಮೈರಾಡ ಕಾವೇರಿ ಸಂಸ್ಥೆಯ ವತಿಯಿಂದ ಗುರುವಾರ ಆಯೋಜಿಸಿದ್ದ ಶಾಲೆ, ಅಂಗನವಾಡಿಗಳಿಗೆ ನೆರವು ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಾಲೂಕಿನ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಐಟಿಸಿ ಕಂಪನಿಯು ಮೈಕಾಪ್ಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿ ಪರಿಸರ ಸಂರಕ್ಷಣೆಗಾಗಿ ಹಲವು ರೀತಿಯ ನೆರವು ನೀಡುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡಾಗ ಮಾತ್ರ ಸಫಲತೆ ಕಾಣಲಿದೆ ಎಂದರು.

    ಮೈಸೂರು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗ್ರಾಮೀಣ ಘನತಾಜ್ಯ ಸಂಗ್ರಹಣೆ ಮತ್ತು ಉತ್ತಮ ನಿರ್ವಹಣೆ ಮಾಡುತ್ತಿರುವ ಪಂಚಾಯಿತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನೂತನವಾಗಿ ನಿರ್ಮಿಸಿರುವ ಶಾಲಾ ಶೌಚಗೃಹಗಳು, ಅಂಗನವಾಡಿ ನವೀಕರಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಹಸ್ತಾಂತರ ಮಾಡಲಾಗುತ್ತಿದ್ದು ದೊಡ್ಡಬೇಲಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

    ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಐಟಿಸಿ ಮತ್ತು ಮೈಕ್ಯಾಪ್ ಸಂಸ್ಥೆಗಳು ತಾಲೂಕಿನಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದೆಯೂ ಅದನ್ನು ಮುಂದುವರಿಸಲಿ. ಇದಕ್ಕೆ ನಮ್ಮ ಪ್ರೋತ್ಸಾಹ ಇದೆ ಎಂದರು.

    ಐಟಿಸಿ ಸಂಸ್ಥೆಯ ಲೀಫ್ ಮ್ಯಾನೇಜರ್ ಪೂರ್ಣೇಶ್ ಮಾತನಾಡಿ, ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಾಗೆ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ಪೀಳಿಗೆಗೆ ಪರಿಸರ ಸಂಪತ್ತನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವ ಮೂಲಕ ಸಮುದಾಯವನ್ನು ಶುಚಿಯಾಗಿರುವಂತೆ ಪ್ರೇರೇಪಿಸುತ್ತಾ ಬರುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಗ್ರಾಮೀಣ ಘನತ್ಯಾಜ್ಯ ಸಂಗ್ರಹಣೆ ಮತ್ತು ಉತ್ತಮ ನಿರ್ವಹಣೆ ಮಾಡುತ್ತಿರುವ ಚಿಕ್ಕನೇರಳೆ, ಕಂಪಲಾಪುರ, ಕಿರನಲ್ಲಿ, ಎನ್.ಶೆಟ್ಟಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿಗಳ ಪಿಡಿಒ ಮತ್ತು ಸ್ವಚ್ಛತಾ ಚಾಲಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳ ಸ್ನೇಹಿ ಶಾಲಾ ಶೌಚಗೃಹ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಆವರಣ ಮತ್ತು ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ನಿರ್ಮಾಣ, ಗಂಗೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕಿತ್ತೂರು ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆ, ಅಬ್ಬಳತಿ ಅಂಗನವಾಡಿ ನವೀಕರಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ತೆಲಗಿನ ಕುಪ್ಪೆ ಅಂಗನವಾಡಿ ನವೀಕರಣ ಕಾಮಗಾರಿಗಳಿಗೆ ನೆರವು ನೀಡಲಾಯಿತು.

    ಶಾಲೆಯ ಎಸ್‌ಡಿಎಂಸಿ ಸದಸ್ಯ ಗಣೇಶ್, ದೊಡ್ಡಬೇಲಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಲ್.ಅನಿತಾ, ಉಪಾಧ್ಯಕ್ಷೆ ಸಾವಿತ್ರಮ್ಮ, ಪಿಡಿಒ ರಾಮರಾಧ್ಯ, ಮುಖ್ಯ ಶಿಕ್ಷಕ ರಾಜಯ್ಯ, ರೇಖಾ, ಕರುಣಾಕರ್,ಪ್ರದೀಪ್, ಚೇತನ್, ರಾಜಪ್ಪ, ರತೀಶ್ ಕುಮಾರ್ ಹಾಗೂ ವಿವಿಧ ಗ್ರಾಪಂ ಪಿಡಿಒಗಳು, ಶಾಲಾ ಮಕ್ಕಳು, ಮೈಕಾಪ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts