More

    ಎರಡುವರ್ಷವಾದರೂ ಮುಗಿಯದ ಕಾಮಗಾರಿ

    ಮರಿಯಮ್ಮನಹಳ್ಳಿ: ಪಾವಗಡ ಕುಡಿವ ನೀರಿನ ಯೋಜನೆಯಿಂದ ಪಟ್ಟಣದ ಕೂಡ್ಲಿಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಬಂಧ ಪಟ್ಟವರು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಳೆದೆರಡು ವರ್ಷಗಳಿಂದ ಪಟ್ಟಣದ ಕೂಡ್ಲಿಗಿ ರಸ್ತೆ ಹಾಗೂ ವೆಂಕಟಾಪುರ ರಸ್ತೆ ಉದ್ದಕ್ಕೂ ಪಾವಗಡ ಕುಡಿವ ನೀರಿನ ಯೋಜನೆಗೆ ನಾಲ್ಕು ಅಡಿ ಪೈಪ್‌ಗಳನ್ನು ಹಾಕುತ್ತಿದ್ದಾರೆ. ಇದರಿಂದ ನಿತ್ಯ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸಬೇಕಾಗಿದೆ. ಸಮಸ್ಯೆ ನಿಯಂತ್ರಿಸುವಲ್ಲಿ ಗುತ್ತಿಗೆದಾರರು ಕ್ರಮ ಕೈಗೊಳ್ಳುತ್ತಿಲ್ಲ.

    ಈ ರಸ್ತೆ ಪಿಡಬ್ಲ್ಯುಡಿ ರಾಜ್ಯ ಹೆದ್ದಾರಿಯಾಗಿದ್ದು, ಪೊಲೀಸ್ ಠಾಣೆಯಿಂದ ದೇವಲಾಪುರವರೆಗೂ 3 ಕಿ.ಮಿ.ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಬದಿಯಲ್ಲೇ ಪೈಪ್ ಲೈನ್ ಹಾಕುತ್ತಿದ್ದರಿಂದ ರಸ್ತೆಯಲ್ಲೆಲ್ಲಾ ಮಣ್ಣುಬಿದ್ದಿದೆ. ಅಲ್ಲದೆ ತಗ್ಗು ಕುಣಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಂತಾಗಿದ್ದು, ಶಾಲಾ ಮಕ್ಕಳು, ವೃದ್ಧರು ಜಾರಿ ಬೀಳುತ್ತಿದ್ದಾರೆ.

    ಇದನ್ನೂ ಓದಿ: ಡಾಂಬರು ಕಾಣದ ತಾಂಡಾದ ರಸ್ತೆಗಳು ; ಬೇಸಿಗೆಯಲ್ಲಿ ಧೂಳಿನ ಮಜ್ಜನ ; ಮಳೆಗಾಲದಲ್ಲಿ ಕೆಸರು ಗದ್ದೆಯಾಗುವ ದಾರಿಗಳು

    ಅಲ್ಲದೇ ಬೇಸಿಗೆಯಲ್ಲಿ ವಾಹನ ಸಂಚರಿಸಿದರೆ ಸಾಕು ರಸ್ತೆಯಲ್ಲಿ ಓಡಾಡುವರಿಗೆಲ್ಲಾ ಧೂಳಿನ ಮಜ್ಜನವಾಗುತ್ತದೆ. ಅಧಿಕಾರಿಗಳ ಹಾಗೂ ಕುಡಿವ ನೀರಿನ ಯೋಜನೆಯ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಓಡಾಡುವವರಿಗೆ ನಿತ್ಯ ಕಿರಿಕಿರಿ ತಪ್ಪುತ್ತಿಲ್ಲ. ಸಧ್ಯ ರಸ್ತೆಯಲ್ಲಿ ಮೊಣಕಾಲು ಉದ್ದ ತೆಗ್ಗು ಕುಣಿಗಳು ಬಿದ್ದಿದ್ದು, ಹತ್ತಾರು ರಸ್ತೆ ಅಪಘಾತಗಳಾಗುತ್ತಿವೆ.

    ಇಬ್ಬರು ಪ್ರಯಾಣಿಕರು ಮೃತ

    ಅಲ್ಲದೇ ಎರಡು ಬಾರಿ ಆಟೋ ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಹತ್ತಕ್ಕೂ ಅಧಿಕ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮರಿಯಮ್ಮನಹಳ್ಳಿಯ ಬಹುಪಾಲು ರಸ್ತೆಗಳು ದುರಸ್ತಿ ಕಾಣದೆ ಜನರು ಸಂಚರಿಸಲು ಯೋಗ್ಯ ಇಲ್ಲದಂತಾಗಿವೆ. ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೊಳಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

    ಜೀವ ಕೈಯಲ್ಲಿ ಹಿಡಿದುಕೊಂಡು ಕೂಡ್ಲಿಗಿ ರಸ್ತೆಯಲ್ಲಿ ಓಡಾಡಬೇಕಿದೆ. ಪಾವಗಡ ಕುಡಿವ ನೀರಿನ ಯೋಜನೆಯಿಂದ ರಸ್ತೆ ಹದಗೆಟ್ಟಿದ್ದು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳು, ಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ವಿಪರ್ಯಾಸ.


    ಡಾ.ಈ.ಯರ್ರಿಸ್ವಾಮಿ ಚಿಂತಕ

    ಕುಡಿವ ನೀರಿನ ಯೋಜನೆಯ ಗುತ್ತಿಗೆ ಪಡೆದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ನಿತ್ಯ ಒಂದಲ್ಲ ಒಂದು ರಸ್ತೆ ಸಮಸ್ಯೆ ಉಲ್ಬಣವಾಗುತ್ತಿದೆ. ಹಂಪಿನಕಟ್ಟೆ ಹಾಗೂ ಕೂಡ್ಲಿಗಿ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರಸ್ತೆ ಡಾಂಬರೀಕರಣ ಮಾಡಿಕೊಡುವಂತೆ ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗಳಿಗೆ ನೋಟಿಸ್ ನೀಡಲಾಗುವುದು.


    ಬಿ.ಎಂ.ಗಾದಿಲಿಂಗನ ಗೌಡ


    ಪಪಂ ಮುಖ್ಯಾಧಿಕಾರಿ ಎಂಎಂ ಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts