More

    ಡಾಂಬರು ಕಾಣದ ತಾಂಡಾದ ರಸ್ತೆಗಳು ; ಬೇಸಿಗೆಯಲ್ಲಿ ಧೂಳಿನ ಮಜ್ಜನ ; ಮಳೆಗಾಲದಲ್ಲಿ ಕೆಸರು ಗದ್ದೆಯಾಗುವ ದಾರಿಗಳು

    ಹುಳಿಯಾರು : ದೇಶ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಆದರೂ ಹುಳಿಯಾರು ಹೋಬಳಿಯ ಅನೇಕ ತಾಂಡಾಗಳ ರಸ್ತೆಗಳು ಡಾಂಬಾರು ಕಾಣದೆ, ಸುಗಮ ಸಂಚಾರಕ್ಕೆ ತೊಡಕಾಗಿವೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇದುವರೆಗೂ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಇತ್ತಕಡೆ ಗಮನ ಹರಿಸದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹುಳಿಯಾರು ಹೋಬಳಿಯ ಬರಕನಾಲ್ ಬಳಿಯ ಗೋಪಾಲನಾಯ್ಕನ ತಾಂಡ, ಖಾನನಾಯಕನ ತಾಂಡ, ಉಂಬಳನಾಯಕನ ತಾಂಡ ಮತ್ತು ದೊಡ್ಡಹಟ್ಟಿಯ ಗ್ರಾಮಗಳು ಯರೇಹಳ್ಳಿಯನ್ನು ಸಂಪರ್ಕಿಸುತ್ತವೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಡಾಂಬರನ್ನೇ ಕಾಣದೆ ಸಂಪೂರ್ಣ ಗುಂಡಿಮಯವಾಗಿವೆ. ಕೆಲವು ಗ್ರಾಮಗಳಿಗೆ ತೆರಳುವ ರಸ್ತೆಗಳಂತೂ ಸಂಪೂರ್ಣ ಹದಗೆಟ್ಟಿದೆ. ಮೂರ್ನಾಲ್ಕು ಕಿಮೀ ಹೊಂಡಗಳೇ ನಿರ್ಮಾಣವಾಗಿವೆ. ಜಲ್ಲಿ ಕಲ್ಲು ಮೇಲೆದ್ದು ವಾಹನ ಸಂಚಾರವೇ ದುಸ್ತರವಾಗಿದೆ.

    300 ಕುಟುಂಬಗಳ ವಾಸ: ಮೂರೂ ತಾಂಡಾಗಳಲ್ಲಿ 300 ಕುಟುಂಬಗಳು ವಾಸವಾಗಿವೆ. 1,500 ಜನಸಂಖ್ಯೆ ಇದೆ. ಈ ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲ. ಹಾಗಾಗಿ, ಸ್ವಂತ ವಾಹನಗಳಲ್ಲಿ ಹದಗೆಟ್ಟಿರುವ ರಸ್ತೆಯಲ್ಲೇ ಪಟ್ಟಣಕ್ಕೆ ಹೋಗಿಬರುವುದು ಅನಿವಾರ್ಯ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ನಿತ್ಯವೂ ಏಳೆಂಟು ಕಿಮೀ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರರು ಹೆಚ್ಚಾಗಿರುವ ಇಲ್ಲಿನ ಕುಟುಂಬಗಳು ಮನೆಗೆ ಬೇಕಾಗುವ ಆಹಾರ ಸಾಮಗ್ರಿಗಳು, ಗೊಬ್ಬರ, ಸುಣ್ಣಗಳನ್ನು ತರಲು ಬಾಡಿಗೆ ವಾಹನ ಅಥವಾ ಸ್ವಂತ ವಾಹನಗಳನ್ನೇ ಅವಲಂಬಿಸಬೇಕಿದೆ.

    ಮಳೆಗಾಲದಲ್ಲಿ ಸಮಸ್ಯೆ ದುಪ್ಪಟ್ಟು : ಬೇಸಿಗೆಯಲ್ಲಿ ಈ ರಸ್ತೆಗಳಿಂದಾಗಿ ಧೂಳಿನ ಸಂಕಟವಾದರೆ, ಮಳೆಗಾಲದಲ್ಲಿ ಈ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆನೀರು ತುಂಬಿಕೊಂಡು ರಸ್ತೆಗಳು ಕೆಸರುಗದ್ದೆಗಳಾಗುತ್ತವೆ. ಬೇಸಿಗೆಯಲ್ಲಿ ಸಣ್ಣದೊಂದು ವಾಹನ ಹೋದರೂ ಏಳುವ ಧೂಳು ಮನೆಗಳನ್ನು ಆವರಿಸುತ್ತದೆ. ನಡೆದುಕೊಂಡು ಓಡಾಡುವವರ ಪಾಲಿಗೆ ರೋಗಕಾರಕವಾಗಿದೆ. ಬೈಕ್ ಸವಾರರು ಜೀವ ಕೈಯಲ್ಲಿಡಿದುಕೊಂಡು ಓಡಾಡಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಜೆಲ್ಲಿ ಕಲ್ಲಿನಿಂದಾಗಿ ವಾಹನ ಉರುಳಿ, ಕೈಕಾಲು ಮುರಿದುಕೊಳ್ಳುವುದು ಶತಃಸಿದ್ಧವಾಗಿದೆ.

    ಹಲವು ಯೋಜನೆಗಳಿದ್ದರೂ ಅಭಿವೃದ್ಧಿ ಇಲ್ಲ : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ರಸ್ತೆ ಸೇರಿದರೆ ಆರೇಳು ಗ್ರಾಮಗಳ ರಸ್ತೆಗಳು ಡಾಂಬರು ಕಾಣುತ್ತವೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಕೂಡ ರಸ್ತೆ ದುರಸ್ತಿಗೆ ಅವಕಾಶವಿದೆ. ಆದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಇತ್ತ ಗಮನಹರಿಸುತ್ತಿಲ್ಲ. ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಚುನಾವಣೆ ಪ್ರಚಾರಕ್ಕೆ ಬಂದಾಗ ಎಲ್ಲರೂ ರಸ್ತೆ ದುರಸ್ತಿಗೊಳಿಸಿಕೊಡುವ ಭರವಸೆ ನೀಡುತ್ತಾರೆ. ಚುನಾವಣೆ ಬಳಿಕ ಕೊಟ್ಟ ಭರವಸೆಯನ್ನು ಮರೆತು, ಇತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಸ್ಥಳೀಯರ ಅಳಲಾಗಿದೆ.

    ಗುಂಡಿಗಳ ನಡುವೆ ಇರುವ ರಸ್ತೆಯು ಕಿರಿದಾಗಿದೆ. ಎರಡು ಕಾರುಗಳು ಎದುರುಬದುರಾದರೆ, ವಾಹನಗಳನ್ನು ಸರಾಗವಾಗಿ ಕೊಂಡೊಯ್ಯಲು ಸಾಧ್ಯವೇ ಇಲ್ಲ. ಈ ಹಿಂದೆ ಬಾಲದೇವರಹಟ್ಟಿಯಿಂದ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಗುತ್ತಿಗೆದಾರ ಅರೆಬರೆ ಕೆಲಸ ಮಾಡಿ ಹೋಗಿದ್ದಾನೆ. ಹಾಗಾಗಿ ಇಂದಿಗೂ ಈ ರಸ್ತೆ ಬಳಕೆ ಯೋಗ್ಯವಾಗಿಲ್ಲ. ಈ ಭಾಗದ ರಾಜಕೀಯ ಮುಖಂಡರು ಈಗ, ಆಗ ಎಂಬು ಭರವಸೆ ನೀಡಿದರೂ, ರಸ್ತೆ ದುರಸ್ತಿಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.
    ಲಕ್ಕಾನಾಯ್ಕ, ಬರಕನಹಾಲ್ ತಾಂಡಾ ನಿವಾಸಿ

    ತಾಂಡಾಗಳ ರಸ್ತೆಗಳು ದುಸ್ಥಿತಿಗೆ ಏನು ಕಾರಣ ಎಂಬುದು ತಿಳಿಯುತ್ತಿಲ್ಲ. ಲೋಕೋಪಯೋಗಿ ಇಲಾಖೆ, ಹೇಮಾವತಿ ಯೋಜನೆಯಿಂದ ಆದರೂ ರಸ್ತೆ ದುರಸ್ತಿಗೊಳಿಸಲು ಅವಕಾಶವಿದೆ. ಈಗ ಯಾವುದಾದರೂ ಅನುದಾನ ಬಂದರೆ, ಆದ್ಯತೆಯ ಮೇರೆಗೆ ನಮ್ಮ ಇಲಾಖೆಯಿಂದ ರಸ್ತೆಯನ್ನು ದುರಸ್ತಿಗೊಳಿಸಲಾಗುವುದು.
    ಸೋಮಶೇಖರ್, ಜಿಪಂ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts