More

    ಆನೆಗಳನ್ನು ಕೂಡಲೇ ಸ್ಥಳಾಂತರಿಸಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನೇದಿನೆ ಆನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಬೇಲೂರು ಕಡೆಯಿಂದ 25ಕ್ಕೂ ಹೆಚ್ಚು ಆನೆಗಳು ಬಂದಿದ್ದು, ಆನೆಗಳಿಂದ ಮನುಷ್ಯರ ಪ್ರಾಣ ಹಾನಿ ಸಂಭವಿಸುವ ಮುನ್ನವೇ ಅವುಗಳನ್ನು ಸ್ಥಳಾಂತರಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ಒತ್ತಾಯಿಸಿದರು.

    ಕಳೆದ ಮೂರು ದಿನಗಳಿಂದ 25ರಿಂದ 30 ಕಾಡಾನೆಗಳ ಹಿಂಡು ಅಂಬಳೆ ಹೋಬಳಿಯ ಕೆ.ಆರ್.ಪೇಟೆ, ಮತ್ತಿಕೆರೆ, ಮಾವಿನಕೆರೆ, ಬಾಣಾವರ, ಗಂಜಲಗೋಡು, ಹಳುವಳ್ಳಿ, ಹಾದಿಹಳ್ಳಿ ಗ್ರಾಮಗಳ ಸುತ್ತಮುತ್ತ ಓಡಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಮಾವಿನಕೆರೆ ಗ್ರಾಮದ ರೈತ ಎಚ್.ಕೆ ಕುಮಾರ್ ಎಂಬುವರ ಕಾಫಿ ತೋಟಕ್ಕೆ ನುಗ್ಗಿರುವ ಆನೆಗಳು ಗಿಡಗಳನ್ನು ಕಿತ್ತುಹಾಕಿ ನಾಶಪಡಿಸಿವೆ. ತಂತಿಬೇಲಿ ಕಂಬಗಳನ್ನು ಧ್ವಂಸಮಾಡಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಳುವಳ್ಳಿ ಗ್ರಾಮದ ಇಂದ್ರೇಶ್, ಮೋಹನ್ ಗೌಡ, ಸಂತೋಷ್ ಎಂಬುವವರ ಭತ್ತದ ಹುಲ್ಲಿನ ಬಣವೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ತಿಂದುಹಾಕಿವೆ. ಒಂದು ವರ್ಷದ ರೈತರ ಶ್ರಮ ಕಾಡಾನೆಗಳ ದಾಳಿಯಿಂದ ಮಣ್ಣುಪಾಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಾಡಾನೆಗಳು ರಾತ್ರಿಹೊತ್ತು ಮನೆಗಳಿಗೂ ನುಗ್ಗುವ ಅಪಾಯವಿದೆ. ಗ್ರಾಮಸ್ಥರು ನಿದ್ದೆಯಿಲ್ಲದೆ ಭಯದಿಂದ ಕಾಲ ಕಳೆಯುವಂತಾಗಿದೆ. ಇಷ್ಟಾದರೂ ಅರಣ್ಯ ಇಲಾಖೆ ಸಿಬ್ಬಂದಿ ಕಾಟಾಚಾರಕ್ಕೆಂಬಂತೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
    ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿವೆ. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸುತ್ತಿಲ್ಲ. ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಸ್ಥಳಾಂತರಿಸದಿದ್ದರೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಕೂಡಲೇ ಆನೆ ಕಾರಿಡಾರ್‌ಗಳನ್ನು ತೆರವುಗೊಳಿಸುವ ಮೂಲಕ ಆನೆಗಳು ಕಾಡಿನಲ್ಲೇ ಓಡಾಡುವಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಜಮೀನಿಗೆ ದಾಳಿ ಮಾಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಚಂದ್ರಶೇಖರ್, ಪ್ರಮುಖರಾದ ನಾರಾಯಣರಾಜ್ ಅರಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts