More

    ಹೆಚ್ಚಿನ ಅನುದಾನಕ್ಕಾಗಿ ಪ್ರತಿಭಟನೆ; ಕಾಂಗ್ರೆಸ್​ನಿಂದ ಕರ್ನಾಟಕದ ಮಾನ ಹರಾಜು ಎಂದ ಈಶ್ವರಪ್ಪ

    ಶಿವಮೊಗ್ಗ: ಹೆಚ್ಚಿನ ಅನುದಾನಕ್ಕಾಗಿ ಆಗ್ರಹಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ ತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಅವರನ್ನು ಟ್ರಿಪ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಕೆ.ಎಸ್​. ಈಶ್ವರಪ್ಪ, ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ಚಿತ್ರ ಮತ್ತು ಅದರ ಪಕ್ಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೋಟೋ ಹಾಕಿಕೊಂಡು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಹೋಗುತ್ತಿದ್ದಾರೆ. ಕಾಂಗ್ರೆಸ್​ನಿಂದ ಈ ಹೋರಾಟ ಹಮ್ಮಿಕೊಂಡಿದ್ದರೆ ನಮ್ಮ ಅಭ್ಯಂತರ ಇಲ್ಲ. ಆದರೆ, ಇವರು ಸರ್ಕಾರದ ದುಡ್ಡಿನಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೋಗಿ ಬರುವ ಖರ್ಚು, ಊಟ ಹಾಗೂ ತಿಂಡಿಗೆ ಸರ್ಕಾರದ ಹಣವನ್ನೇ ಬಳಕೆ ಮಾಡುತ್ತಾರೆ. ಸರ್ಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಮಾಡುತ್ತಿರುವ ಕುತಂತ್ರ ಇದು ಎಂದು ಕಿಡಿಕಾರಿದ್ದಾರೆ.

    ಅನುದಾನದ ವಿಚಾರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರ ನೀಡಿದ್ದಾರೆ. ಸ್ವತಃ ಡಿ.ಕೆ.ಶಿವಕುಮಾರ್ ತಮ್ಮ ಭೇಟಿ ಮಾಡಿದ್ದನ್ನು ಪ್ರಸ್ತಾಪಿಸಿದ್ದಾರೆ. ಇಷ್ಟಾದ ನಂತರವೂ ಇವರು ದೆಹಲಿಗೆ ಹೋಗುವ ಅಗತ್ಯ ಏನಿದೆ. ಒಂದು ವೇಳೆ ಇವರಿಗೆ ಸಮಾಧಾನ ತಂದಿಲ್ಲವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೇ ದೆಹಲಿಗೆ ಹೋಗಿ ಕೇಳಬೇಕಿತ್ತು.

    ಇದನ್ನೂ ಓದಿ: ನಾಯಿಗಳ ಮೇಲೆ ಬಿಜೆಪಿಗೆ ಯಾಕಿಷ್ಟು ವ್ಯಾಮೋಹ: ರಾಹುಲ್​ ಗಾಂಧಿ

    ಅದನ್ನು ಬಿಟ್ಟು ಇಡೀ ಕಾಂಗ್ರೆಸ್ ಶಾಸಕರನ್ನೇ ಕರೆದುಕೊಂಡು ಹೋಗ್ತಿದ್ದಾರೆ. ಕಾಂಗ್ರೆಸ್ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಸರ್ಕಾರದ ದುಡ್ಡಿನಲ್ಲೇ ದೆಹಲಿ ಟೂರ್ ಮಾಡ್ತಿದ್ದಾರೆ. ಸರ್ಕಾರ ಈಗಾಗಲೇ ಪಾಪರ್ ಆಗಿದೆ. ಆದರೂ, ಸರ್ಕಾರದ ದುಡ್ಡಲ್ಲೇ ಹೋಗ್ತಿದ್ದಾರೆ. ರೈತರ ಹಾಲಿನ ಹಣ 750 ಕೋಟಿ ರೂ. ಕೊಟ್ಟು ಹೋಗಿ, ಅನುದಾನದ ಬಗ್ಗೆ ಅಧಿಕೃತ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

    ಯುಪಿಎ ಅವಧಿ ಮತ್ತು ಎನ್‌ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟೆಷ್ಟು ಅನುದಾನ ಬಂತು ಎಂಬುವುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಅದರ ಬದಲಾಗಿ,ದೆಹಲಿಯಲ್ಲಿ ಪ್ರತಿಭಟನೆಗೆ ಹೋಗುವ ಮೂಲಕ ಕರ್ನಾಟಕದ ಮಾನವನ್ನು ಸಿದ್ದರಾಮಯ್ಯ ಹರಾಜು ಹಾಕುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts