More

    ಹಿಜಾಬ್ ವಿವಾದ ತಿರುವು ನೀಡುವುದೇ ಸಮಾನತೆ ವಾದ?

    ನವದೆಹಲಿ: ಹಿಜಾಬ್ ನಿಷೇಧಿಸಿದ ರಾಜ್ಯ ಸರ್ಕಾರದ ಆದೇಶ ಹಾಗೂ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಬಗ್ಗೆ 10 ದಿನಗಳ ಸುದೀರ್ಘ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಮೂರ್ತಿ ಹೇಮಂತ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ದ್ವಿಸದಸ್ಯ ಪೀಠ ತೀರ್ಪನ್ನು ಕಾದಿರಿಸಿದೆ. ನ್ಯಾ.ಹೇಮಂತ ಗುಪ್ತಾ ಅಕ್ಟೋಬರ್ 16ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅ.16 ಅಥವಾ ಅದಕ್ಕೂ ಮುನ್ನ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

    ಅರ್ಜಿದಾರರ ಪರ ಹಲವು ವಕೀಲರು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ವಾದಿಸಿದ್ದರೆ, ರಾಜ್ಯ ಸರ್ಕಾರದ ಪರ ವಾದಿಸಿದ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ‘ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಕಳುಹಿಸುವ ಅಗತ್ಯವೇ ಇಲ್ಲ. ಏಕೆಂದರೆ ಇದು ಕೇವಲ ಶಾಲೆಯ ಶಿಸ್ತಿಗೆ ಸಂಬಂಧಿಸಿದ ಸರಳ ಪ್ರಕರಣ. ಸಾಂವಿಧಾನಿಕ ಪೀಠಕ್ಕೆ ಹೋಗುವ ಅರ್ಹತೆಯೂ ಈ ಪ್ರಕರಣಕ್ಕಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

    ನಟರಾಜ್ ತಮ್ಮ ವಾದ ಮಂಡನೆಯಲ್ಲಿ ಸಮಾನತೆಯ ಉದ್ದೇಶ ಸಾರುವ ಸಂವಿಧಾನದ ಆರ್ಟಿಕಲ್ 14 ಅನ್ನು ಪ್ರಮುಖವಾಗಿ ಉಲ್ಲೇಖಿಸಿದ್ದು, ‘ಜಾತ್ಯತೀತ ಸಿದ್ಧಾಂತದ ಮೂಲತತ್ವವೂ ಸಮಾನತೆಯಾಗಿದ್ದು, ಧಾರ್ವಿುಕತೆಯು ಸಮಾನತೆಗಿಂತ ಕೆಳಹಂತದಲ್ಲಿದೆ. ಶಾಲೆಯಲ್ಲಿ ಸಮಾನತೆ ಸಾರುವ ಉದ್ದೇಶದಿಂದಲೇ ಸಮವಸ್ತ್ರಕ್ಕೆ ಮಹತ್ವ ನೀಡಲಾಯಿತು ಮತ್ತು ಧಾರ್ವಿುಕ ಗುರುತನ್ನು ಶಾಲೆ ಆವರಣದಿಂದ ಹೊರಗಿಡುವಂತೆ ಸೂಚಿಸಲಾಯಿತು’ ಎಂದು ಗಮನ ಸೆಳೆದಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಪರಸ್ಪರ ಸಮಾನರಾಗಿರಬೇಕೆಂದರೆ ತೊಡುಗೆಗಳು ಏಕತೆ, ಸಮಾನತೆ ಬಿಂಬಿಸುವಂತಿರಬೇಕು. ಹಿಜಾಬ್ ಧರಿಸುವುದು ಧಾರ್ವಿುಕತೆಯನ್ನು ಮುಂದೆ ತರುತ್ತದೆ. ಆದರೆ, ಸಂವಿಧಾನದಲ್ಲಿ ಧಾರ್ವಿುಕ ಹಕ್ಕಿಗಿಂತ ಸಮಾನತೆಯ ಹಕ್ಕೇ ಮೇಲುಗೈ ಸಾಧಿಸಿದೆ ಎಂದು ವಿವರಿಸಿದ್ದಾರೆ. ಹೀಗಾಗಿ, ಆರ್ಟಿಕಲ್ 14ರ ಕುರಿತ ಚರ್ಚೆ ಹಿಜಾಬ್ ಪ್ರಕರಣಕ್ಕೆ ಹೊಸ ತಿರುವು ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಮೇಲಾಗಿ, ವಿಚಾರಣೆ ಸಂದರ್ಭ ನ್ಯಾ.ಸುಧಾಂಶು ಧುಲಿಯಾ ಕೂಡ ಸಮಾನತೆಯ ಮಹತ್ವ ಪರಿಗಣಿಸಬೇಕಾಗುತ್ತದೆ ಎಂದೂ ಅಭಿಪ್ರಾಯ ಹೊರಹಾಕಿರುವುದು ಉಲ್ಲೇಖಾರ್ಹ. ಇದೇ ವೇಳೆ, ಖಾಸಗಿ ಹಕ್ಕಿನ ಪ್ರತಿಪಾದನೆ ಮಾಡಿರುವ ಹಿರಿಯ ವಕೀಲ ಸಲ್ಮಾನ್ ಖುರ್ಷೀದ್, ವ್ಯಕ್ತಿ ತನ್ನ ನಡವಳಿಕೆಯ ಖಾಸಗಿ ಹಕ್ಕನ್ನು ಬಳಸ ಬಯಸಿದಾಗ, ಉಡುಪು ಅಥವಾ ತೊಡುಗೆಯ ಹಕ್ಕು ಸಂವಿಧಾನದ ಆರ್ಟಿಕಲ್ 25ರಿಂದಲೇ (ಧಾರ್ವಿುಕ ಹಕ್ಕು) ಬರಬೇಕೆಂದಿಲ್ಲ. ಹಿಜಾಬ್​ಧಾರಣೆ ಖಾಸಗಿ ಹಕ್ಕಿನಡಿಯಲ್ಲೂ ಬರುತ್ತದೆ ಎಂದಿದ್ದಾರೆ.

    ಹಿಜಾಬ್​ಧಾರಣೆ ಇಸ್ಲಾಂನ ಅತ್ಯಗತ್ಯ ಧಾರ್ವಿುಕ ಆಚರಣೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ, ಅದು ಕೆಲವರಿಗೆ ಅಗತ್ಯ ಧಾರ್ವಿುಕ ಆಚರಣೆ, ಮತ್ತೆ ಕೆಲವರಿಗೆ ಅಲ್ಲ. ಹೀಗಾಗಿಯೇ, ಅಗತ್ಯ ಧಾರ್ವಿುಕ ಆಚರಣೆ ಹೌದೇ ಅಲ್ಲವೇ ಎಂಬ ಪರಿಶೀಲನೆಯ ವಾದವನ್ನು ಬದಿಗಿಡಲಾಯಿತು ಎಂದರು. ಇದಕ್ಕೆ ನ್ಯಾ. ಧುಲಿಯಾ, ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ವಿುಕ ಆಚರಣೆ ಎಂದು ಅರ್ಜಿದಾರರ ಪ್ರಮುಖ ವಾದವೇ ಆಗಿದೆಯಲ್ಲ. ಅವರು ಮಾಡಿರುವ ಮನವಿಗಳನ್ನು ನೀವು ನೋಡಿ ಎಂದು ಉತ್ತರಿಸಿದರು.

    ಪಿಎಫ್​ಐ ಪ್ರಸ್ತಾಪಕ್ಕೆ ವಿರೋಧ: ಹಿಜಾಬ್ ವಿವಾದದ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿತ್ತು ಎಂಬ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆರೋಪಕ್ಕೆ ಆಕ್ರೋಶ ಹೊರಹಾಕಿದ ವಕೀಲ ದುಷ್ಯಂತ್ ದವೆ, ಈ ಪ್ರಕರಣದಲ್ಲಿ ಪಿಎಫ್​ಐ ಪಾತ್ರದ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಮತ್ತು ವಿನಾಕಾರಣ ಪಿಎಫ್​ಐ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ. ರಾಜ್ಯ ಸರ್ಕಾರದ ಆದೇಶದಲ್ಲೂ ಪಿಎಫ್​ಐ ಬಗ್ಗೆ ಉಲ್ಲೇಖವಿಲ್ಲ. ಬದಲಿಗೆ ‘ಧಾರ್ವಿುಕ ಗುರುತು’ ಸಮಾನತೆ ಮತ್ತು ಏಕತೆಗೆ ಅಡಚಣೆ ಉಂಟು ಮಾಡುತ್ತದೆ ಎಂದಷ್ಟೇ ಹೇಳಿದೆ ಎಂದರು. ಇದಕ್ಕೆ ದನಿಗೂಡಿಸಿದ ವಕೀಲ ಹುಜೇಫಾ ಅಹ್ಮದಿ, ಹೈಕೋರ್ಟ್​ನಲ್ಲೂ ಪಿಎಫ್​ಐ ಬಗ್ಗೆ ಚರ್ಚೆಯಾಗಿರಲಿಲ್ಲ. ರಾಜ್ಯ ಸರ್ಕಾರ ಅಧಿಕೃತವಾಗಿ ಸಲ್ಲಿಕೆಯಾಗದ ದಾಖಲೆಗಳ ಮೇಲೆ ಅವಲಂಬಿಸಿ ವಾದಿಸಲು ಸಾಧ್ಯವಿಲ್ಲ. ಕೇವಲ ಪೂರ್ವಗ್ರಹ ಸೃಷ್ಟಿಸಲು ಪಿಎಫ್​ಐ ಮೇಲಿನ ಆರೋಪ ಮುಂದಿಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts