More

    ‘ಸ್ಪರ್ಧಾ ಚೇತನ’ಕ್ಕೆ ಹೊಸ ರೂಪ

    – ಪ್ರಕಾಶ್ ಮಂಜೇಶ್ವರ ಮಂಗಳೂರು
    ಅಂಗವಿಕಲರು ಆರ್ಥಿಕವಾಗಿ ಸಶಕ್ತರಾಗಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಅವಕಾಶವಿರುವ ರಾಜ್ಯ ಸರ್ಕಾರದ ಸ್ಪರ್ಧಾ ಚೇತನ ಯೋಜನೆ ಸೌಲಭ್ಯ ಪಡೆಯಲು ರಾಜ್ಯದ ಬಹುತೇಕ ಜಿಲ್ಲೆಗಳಿಂದ ಅರ್ಜಿಗಳೇ ಇಲ್ಲ. ಕೆಲವು ಜಿಲ್ಲೆಗಳಿಂದ ಬಂದಿರುವ ಅರ್ಜಿಗಳ ಸಂಖ್ಯೆ ನಗಣ್ಯ. ಪರಿಣಾಮ ಯೋಜನೆಗೆ ಹೊಸ ಸ್ವರೂಪ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿಯ ತನಕ ಫಲಾನುಭವಿಗಳೇ ಇಲ್ಲ. ಉಡುಪಿ ಜಿಲ್ಲೆಯಿಂದ 2017- 18ನೇ ಸಾಲಿನಲ್ಲಿ ಮಾತ್ರ ಇಬ್ಬರು ಫಲಾನುಭವಿಗಳಿದ್ದರು. ರಾಜ್ಯದ ಇತರ ಜಿಲ್ಲೆಗಳ ಪರಿಸ್ಥಿತಿಯೂ ಇದೇ ಆಗಿದೆ. ಅರ್ಜಿಗಳೇ ಬರುತ್ತಿಲ್ಲ ಎನ್ನುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರತಿಕ್ರಿಯೆ ಎನ್ನುತ್ತಾರೆ ಇಲಾಖೆಯ ಮುಖ್ಯಸ್ಥರು.

    ವಿಶೇಷ ಚೇತನರ ಅಧಿನಿಯಮ 1995 ಹಾಗೂ ರಾಜ್ಯ ವಿಶೇಷ ಚೇತನರ ನೀತಿ 1996ರಂತೆ ಅಂಗವಿಕಲರಿಗೆ ಸಮಾನ ಅವಕಾಶ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ನಿರೀಕ್ಷಿತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಯೋಜನೆಯನ್ನು ಜನಾಕರ್ಷಣೆಯ ಮಾದರಿಗೆ ಬದಲಾಯಿಸಲು ಚಿಂತಿಸಲಾಗಿದೆ. ವೈಫಲ್ಯಕ್ಕೆ ಕಾರಣವಾಗಿರುವ ಅಂಶಗಳನ್ನು ಗಮನಿಸಿ, ಅಂಗವಿಕಲರನ್ನು ತಲುಪಲು ಏನೇನು ಬೇಕೋ ಆ ಅಂಶಗಳನ್ನು ಸೇರ್ಪಡೆಗೊಳಿಸಲು ಇಲಾಖೆ ಮುಂದಾಗಿದೆ.

    ಅವಕಾಶ ಅಗಾಧ: ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯು ಅಂಗವೈಕಲ್ಯತೆ ಹೊಂದಿರುವವರು ಎಷ್ಟು ಹುದ್ದೆಗಳನ್ನು ನಿಭಾಯಿಸಬಲ್ಲರು ಎಂಬ ಕುರಿತು ಮಾಹಿತಿ ಸಂಗ್ರಹಿಸಿದೆ. ಅದರ ಪ್ರಕಾರ, ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ 3566 ಹುದ್ದೆಗಳನ್ನು ಅಂಗವಿಕಲರ ಹಕ್ಕುಗಳ ಕಾಯ್ದೆ- 2016ರ ಅಡಿಯಲ್ಲಿ ಮಾನದಂಡದ ವಿಕಲಾಂಗತೆ ಹೊಂದಿರುವ ವ್ಯಕ್ತಿಗಳಿಗೆ (ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ) ಸೂಕ್ತ.

    2001ರ ಜನಗಣತಿ ಸಂದರ್ಭ ರಾಜ್ಯದಲ್ಲಿ ಇದ್ದ ಅಂಗವಿಕಲರು 9,40,643. ಇದರಲ್ಲಿ 4,73,844 (ಶೇ.51.40) ಮಂದಿ ವಿದ್ಯಾವಂತರು. ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿನವರು. ಸೌಲಭ್ಯ ಹಾಗೂ ಮಾಹಿತಿ ಕೊರತೆಯಿಂದ ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿ ಹಿನ್ನೆಡೆಯಾಗಿದೆ.

    ಏನಿದು ಯೋಜನೆ?: ವಿದ್ಯಾವಂತ ನಿರುದ್ಯೋಗಿ ಅಂಗವಿಕಲರು ಐಎಎಸ್/ ಕೆಎಎಸ್, ಯುಪಿಎಸ್‌ಸಿ/ಕೆಪಿಎಸ್‌ಸಿಯ ಗ್ರೂಪ್- ಎ, ಗ್ರೂಪ್- ಬಿ, ಬ್ಯಾಂಕ್/ ಜೀವ ವಿಮಾ ನಿಗಮ/ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಇತರ ಸಂಸ್ಥೆಗಳು ನಡೆಸುವ ಅಧಿಕಾರಿ/ ಪ್ರಥಮ ದರ್ಜೆ/ ದ್ವಿತೀಯ ದರ್ಜೆ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯಧನ ನೀಡಲೆಂದು ಸ್ಪರ್ಧಾ ಚೇತನ ಯೋಜನೆ ಜಾರಿಗೆ ತರಲಾಗಿದೆ. ಸಮರ್ಪಕ ತರಬೇತಿ ಇಲ್ಲದ ಕಾರಣ ಮೀಸಲಾದ ಹುದ್ದೆಗಳಲ್ಲಿ ಅರ್ಜಿಗಳೇ ಸಲ್ಲಿಕೆಯಾಗುತ್ತಿರಲಿಲ್ಲ. ಈ ಕೊರತೆ ತುಂಬುವುದು ಯೋಜನೆ ಉದ್ದೇಶವಾಗಿತ್ತು. 2016-17ನೇ ಆಯವ್ಯಯದಲ್ಲಿ 1 ಕೋಟಿ ರೂ. ಮೀಸಲಿಟ್ಟು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಯೋಜನೆ ಘೋಷಿಸಿದ್ದರು.

    ‘ಸ್ಪರ್ಧಾ ಚೇತನ’ಕ್ಕೆ ಅರ್ಜಿಗಳೇ ಬರುತ್ತಿಲ್ಲ ಎನ್ನುವುದನ್ನು ಇತ್ತೀಚೆಗೆ ಜರುಗಿದ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿದುಕೊಂಡಿದ್ದೇನೆ. ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುವಂತೆ ಯೋಜನೆಯ ಸ್ವರೂಪದಲ್ಲಿ ಬದಲಾವಣೆ ತರುವ ಕುರಿತು ಚಿಂತನೆ ನಡೆಸಲಾಗುತ್ತಿದೆ.
    – ಮುನಿರಾಜು, ನಿರ್ದೇಶಕರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು

    ಇಂತಹ ಯೋಜನೆಗಳ ಕುರಿತು ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ಪ್ರಚಾರ ನಡೆಸಬೇಕು. ಪಿಯುಸಿ ಮತ್ತು ಅದಕ್ಕಿಂತ ಮೇಲ್ಮಟ್ಟದ ವಿದ್ಯಾರ್ಹತೆ ಹೊಂದಿರುವ ಎಲ್ಲ ಅಂಗವಿಕಲರು ಈ ಸ್ಪರ್ಧಾ ಚೇತನ ಸೌಲಭ್ಯ ಪಡೆಯಬಹುದು. ಯೋಜನೆ ಸೌಲಭ್ಯ ಸಮಾಜದ ಕಟ್ಟ ಕಡೆಯ ತನಕ ತಲುಪಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ.
    – ಎಸ್.ಎಲ್.ರಾಥೋಡ್, ಮುಖಂಡರು, ಕರ್ನಾಟಕ ಸರ್ಕಾರಿ/ ಅರೆ ಸರ್ಕಾರಿ ನೌಕರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts