More

    ಕಡೂರಲ್ಲಿ ಸ್ವಚ್ಛತೆ ಕಾಪಾಡದ ಹೋಟೆಲ್​ಗಳಿಗೆ ಬೀಗ

    ಕಡೂರು: ಸ್ವಚ್ಛತೆ ಕಾಪಾಡದ ಪುರಸಭೆ ವ್ಯಾಪ್ತಿಯ ಎಲ್ಲ ಹೋಟೆಲ್, ಕಾಫಿ-ಟೀ ಸ್ಟಾಲ್ ಮತ್ತು ರಸ್ತೆ ಬದಿಯ ಹೋಟೆಲ್​ಗಳನ್ನು ಮಂಗಳವಾರದಿಂದ ಬಂದ್ ಮಾಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್ ತಿಳಿಸಿದರು.

    ಪುರಸಭೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 700ಕ್ಕೂ ಹೆಚ್ಚಿನ ಸಣ್ಣ, ದೊಡ್ಡ ಪ್ರಮಾಣದ ಹೋಟೆಲ್, ಕಾಫಿ-ಟೀ ಸ್ಟಾಲ್​ಗಳು ಸೇರಿವೆ. ಅನೇಕ ಹೋಟೆಲ್​ಗಳಲ್ಲಿ ಕುಡಿಯುವ ನೀರನ್ನು ತೊಟ್ಟಿಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಅದು ದುರ್ನಾತ ಬೀರುತ್ತಿದ್ದರೂ ಗ್ರಾಹಕರಿಗೆ ಕುಡಿಯಲು ಅದೇ ನೀರನ್ನು ನೀಡುತ್ತಿದ್ದಾರೆ. ಅಡುಗೆ ಮಾಡುವ ಸ್ಥಳದಲ್ಲಿ ಕಸದ ರಾಶಿ ಸಂಗ್ರಹವಾಗಿ ನೊಣ, ಸೊಳ್ಳೆ, ಇರುವೆ, ಜಿರಳೆ, ಇಲಿ ಮತ್ತಿತರ ಸಾಂಕ್ರಾಮಿಕ ರೋಗ ಹರಡುವ ವಾಸಸ್ಥಳವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

    ಬಳಸಿದ ನೀರನ್ನೇ ಅಡುಗೆ ಮಾಡಲು ಬಳಸಲಾಗುತ್ತಿದೆ. ಇದು ಅನೇಕ ರೋಗಗಳಿಗೆ ಎಡೆಮಾಡಿಕೊಟ್ಟಿದೆ. ಕಸ ವಿಲೇವಾರಿಗೆ ವ್ಯವಸ್ಥೆ ಮಾಡಿಕೊಂಡಿಲ್ಲ. ಟೇಬಲ್, ಕುರ್ಚಿಗಳ ಧೂಳು ಹಿಡಿದಿದ್ದರೂ ಸ್ವಚ್ಛಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡುವ ಎಲ್ಲ ಹೋಟೆಲ್​ಗಳನ್ನು ಮಂಗಳವಾರದಿಂದ ಅನಿರ್ದಿಷ್ಟ ಅವಧಿಗೆ ಬಂದ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಹೋಟೆಲ್ ಮಾಲೀಕರು ಗ್ರಾಹರಿಗೆ ಶುದ್ಧ ನೀರು ನೀಡಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿಡಬೇಕು. ಪಾತ್ರೆ, ಲೋಟ, ತಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಗ್ರಾಹಕರಿಗೆ ಬಿಸಿ ನೀರು ನೀಡಬೇಕು. ಉಳಿದ ಆಹಾರವನ್ನು ಮರುಬಳಕೆ ಮಾಡಬಾರದು. ಟೇಬಲ್, ನೆಲವನ್ನು ಫಿನಾಯಿಲ್ ಮೂಲಕ ತೊಳೆಯುತ್ತಿರಬೇಕು. ಉತ್ತಮ ಗಾಳಿ, ಬೆಳಕು ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಹೋಟೆಲ್​ಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಸಾರ್ವಜನಿಕ ಆಸ್ಪತ್ರೆಗೆ ಬಂದು ಹೋಗುವವರಿಗೆ ಇಂದಿರಾ ಕ್ಯಾಂಟೀನ್​ನಲ್ಲಿ ಉತ್ತಮ ಆಹಾರ ನೀಡಲು ಸೂಚಿಸಲಾಗಿದೆ ಎಂದರು.

    ಪುರಸಭೆ ಪಟ್ಟಣದ ಎಲ್ಲ ಹೋಟೆಲ್​ಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿಸಿರುವುದರಿಂದ ಸಾವಿರಾರು ಜನರು ತಿಂಡಿ-ಊಟಕ್ಕೆ ಪರದಾಡಿದರು. ಧರ್ಮಸ್ಥಳಕ್ಕೆ ತೆರಳಲು ಹಾವೇರಿಯಿಂದ ರೈಲಿನಲ್ಲಿ ಬಂದ ಒಂದು ಕುಟುಂಬ ಹೋಟೆಲ್​ಗಳಿಲ್ಲದೆ ಊಟಕ್ಕೆ ಪರದಾಡಿ ನಂತರ ಚಿಕ್ಕಮಗಳೂರಿನಲ್ಲಿ ಹೋಟೆಲ್ ತೆರೆದಿರುವುದನ್ನು ಖಚಿತಪಡಿಸಿಕೊಂಡು ತೆರಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts