More

    ಪ್ರಕೃತಿ ಮಡಿಲಲ್ಲಿ ಸಪ್ತಪದಿ, ಪಶ್ಚಿಮಘಟ್ಟದ ವನಸಿರಿಯೇ ಚಪ್ಪರ

    ಬೆಳ್ತಂಗಡಿ: ಒಂದೆಡೆ ಶಾಂತವಾಗಿ ಹರಿಯುವ ಕಪಿಲಾ ನದಿ, ಪಕ್ಕದಲ್ಲೇ ವಿಶಾಲವಾಗಿ ಹರಡಿರುವ ಪಶ್ಚಿಮಘಟ್ಟದ ಶಿಬಾಜೆ ಅರಣ್ಯವಲಯ, ನದಿ ತಟದಲ್ಲೇ ವಿಶಾಲವಾಗಿ ಹರಡಿರುವ ಬರ್ಗುಲ ಎಂಬ ಪ್ರದೇಶ. ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ನವಜೀವನಕ್ಕೆ ಸಪ್ತಪದಿ ತುಳಿದ ದಂಪತಿ, ನೂರಾರು ಪರಿಸರ ಪ್ರೇಮಿ ಬಂಧುಗಳು..

    ಇದು ಭಾನುವಾರ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಗೋಪಿಕಾ ಹಾಗೂ ಕುಂದಾಪುರದ ದಿನೇಶ್ ಪ್ರಕೃತಿಯ ಮಡಿಲ್ಲಲೇ ಸಪ್ತಪದಿ ತುಳಿದು ನವಜೀವನಕ್ಕೆ ಕಾಲಿರಿಸಿದ ಅಪರೂಪದ ಸನ್ನಿವೇಶ…
    ಶಿಶಿಲ ಸಮೀಪದ ಬರ್ಗುಲದಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಚಪ್ಪರವಿರಲಿಲ್ಲ, ಆಡಂಬರದ ವ್ಯವಸ್ಥೆಗಳಿಲ್ಲ. ಕೇವಲ ಪ್ರಕೃತಿಯ ಸೌಂದರ್ಯದಲ್ಲೇ ವಿಶಾಲವಾದ ಹುಲ್ಲುಹಾಸಿನ ನದಿ ಕಿನಾರೆಯಲ್ಲಿ ತೆಂಗಿನ ಗರಿ, ಬಾಳೆ, ತೆಂಗು ಮೊದಲಾದವುಗಳಿಂದ ಕಲಾವಿದರು ನಿರ್ಮಿಸಿದ ಪ್ರಾಂಗಣದಲ್ಲೇ ಈ ಶುಭವಿವಾಹ ನಡೆದಿದೆ.

    ಸಪ್ತಪದಿ ತುಳಿದ ದಂಪತಿ: ಮಡಂತ್ಯಾರಿನ ಗೋಪಿಕಾ ಮಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕಿ ಹಾಗೂ ಕುಂದಾಪುರದ ದಿನೇಶ್ ಮಂಗಳೂರಿನ ಸರ್ಕಾರಿ ಇಲಾಖೆಯೊಂದರ ಉದ್ಯೋಗಿ. ಇವರಿಬ್ಬರು ತಮ್ಮ ಬಂಧುಗಳೊಂದಿಗೆ  ಶೃಂಗಾರಗೊಂಡ ಬರ್ಗುಳ ಅರಣ್ಯ ಪ್ರದೇಶದ ಕಪಿಲಾನದಿ ತಟದಲ್ಲಿರುವ ರಾಷ್ಟ್ರ ಪ್ರಶಸ್ತಿ ವಿಜೆತ ಕಲಾವಿದ ಶಿವರಾಮ ಶಿಶಿಲ ಎಂಬುವರ ತೋಟ ತಟದಲ್ಲಿ ವಿವಾಹವಾದರು.

    ರಾರಾಜಿಸಿದ ತುಳುನಾಡ ವೈಭವ: ಜಿಲ್ಲೆಯ ಖ್ಯಾತ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಸಚಿನ್ ಬಿಢೆ, ಶಶಿಧರ್ ಶೆಟ್ಟಿ ನೇತೃತ್ವದ ತಂಡ ಮದುವೆ ನಡೆಯುವ ಸ್ಥಳವನ್ನು ಸಜ್ಜುಗೊಳಿಸಿದ್ದರು. ತೆಂಗಿನ ಗರಿಗಳ ಕಮಾನು, ತುಳುನಾಡ ಜಾನಪದ ಕಲಾಪ್ರಕಾರಗಳು, ಆಟಿ ಕಲೆಂಜನ ಕೊಡೆ, ತೆಂಗಿನ ಗರಿಗಳಿಂದ ಮಾಡಿರುವ ವಿವಿಧ ಕಲಾಕೃತಿ ನೋಡುಗರನ್ನು ಆಕರ್ಷಿಸಿತು. ಈ ಶುಭಕಾರ್ಯ ಚಪ್ಪರ, ಗೋಡೆ ರಹಿತ ಕಾರ್ಯಕ್ರಮವಾಗಿದ್ದು, ಪಶ್ಚಿಮಘಟ್ಟದ ತಪ್ಪಲಿನ ವನಸಿರಿಯೇ ಚಪ್ಪರವಾಗಿ ರೂಪುಗೊಂಡಿತ್ತು.

    ಸಂಪತ್ತು, ಪರಿಸರ, ಆಹಾರ ಪೋಲು ಮಾಡುವ ಬದಲು ಪ್ರಕೃತಿಯ ಮಧ್ಯೆ ಪಾರಂಪರಿಕವಾಗಿ ಶುಭಕಾರ್ಯ ನಡೆಸುವುದು ಮುಂದಿನ ಅನಿವಾರ್ಯತೆ. ಈ ನಿಟ್ಟಿನಲ್ಲಿ ವನಸಿರಿಯೇ ಚಪ್ಪರ, ಮಧುವಣಗಿತ್ತಿಯಂತೆ ಶೃಂಗಾರಗೊಂಡ ಬರ್ಗುಳ ಪ್ರದೇಶದಲ್ಲಿ ವಿಶಿಷ್ಟ ರೀತಿಯಲ್ಲಿ ಗೋಪಿಕಾ-ದಿನೇಶ್ ದಂಪತಿ ನವಜೀವನಕ್ಕೆ ಕಾಲಿರಿಸಿದ್ದು ಸಂತಸ ತಂದಿದೆ.
    -ಶಿವರಾಮ ಶಿಶಿಲ
    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts