More

    ರೈತರಿಗಿಂತ ಉದ್ದಿಮೆದಾರರ ಮೇಲೆ ಪ್ರೀತಿ ಹೆಚ್ಚು..!

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನ್ನದಾತರಿಗಿಂತ ಉದ್ದಿಮೆದಾರರ ಮೇಲೆಯೇ ಹೆಚ್ಚು ಪ್ರೀತಿ. ಅವರಿಗೆ ರೈತರ ಸಂಕಷ್ಟಗಳು ಕಾಣಿಸುತ್ತಿಲ್ಲ. ಬರದಿಂದ ತತ್ತರಿಸಿರುವ ರೈತರ ನೆರವಿಗೆ ಧಾವಿಸಬೇಕು ಎಂಬ ಮಾನವೀಯತೆಯೂ ಅವರಲ್ಲಿಲ್ಲ ಎಂದು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ವಾಗ್ದಾಳಿ ಮಾಡಿದರು.

    ಸೋಮವಾರ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಪಕ್ಷದ ಮತಗಟ್ಟೆ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಹೋರಾಟ ಮಾಡಿದರೆ ಸ್ಪಂದಿಸುವ ಬದಲಿಗೆ ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡಿದರು. ಒಲಿಂಪಿಕ್‌ನಲ್ಲಿ ದೇಶದ ಗೌರವ ಎತ್ತಿ ಹಿಡಿದ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿ ಹೋರಾಟ ಮಾಡಿದರೆ ತುಟಿ ಬಿಚ್ಚಲಿಲ್ಲ. ಮಣಿಪುರ ಹಿಂಸಾಚಾರವನ್ನು ಖಂಡಿಸಲಿಲ್ಲ ಎಂದು ಟೀಕಿಸಿದರು.

    ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದರು. ರಾಜ್ಯ ಆರ್ಥಿಕ ದಿವಾಳಿಯಾಗಲಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಫಲಾನುಭವಿಗಳು ಯಾವುದೇ ಲಂಚ ಇಲ್ಲದೆ ಸರ್ಕಾರದ ಎಲ್ಲ ಗ್ಯಾರಂಟಿ ಸವಲತ್ತುಗಳನ್ನು ಪಡೆಯುವಂತೆ ಮಾಡಲಾಗಿದೆ . ಕೇಂದ್ರ ಸರ್ಕಾರ ನೆರವು ನೀಡದಿದ್ದರೂ ರಾಜ್ಯ ಸರ್ಕಾರ ಬರಪರಿಹಾರ ನೆರವು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

    20 ವರ್ಷ ಸಂಸತ್ತಿನಲ್ಲಿ ಇದ್ದು ಬಿಜೆಪಿಯ ಪಿ.ಸಿ. ಗದ್ದಿಗೌಡರ ಮಾಡಿದ್ದೇನು ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಒಮ್ಮೆಯೂ ಸಂಸತ್ತಿನಲ್ಲಿ ತುಟ್ಟಿ ಬಿಚ್ಚಲಿಲ್ಲ. ಸಂಯುಕ್ತ ಪಾಟೀಲ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿ. ಬಾಗಲಕೋಟೆ ಕುಡಚಿ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಹೊಣೆ ನನಗಿರಲಿ. ಈ ಕೆಲಸ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸದುಗೌಡ ಪಾಟೀಲ, ಲಕ್ಷ್ಮಣ ಮಾಳಗಿ, ಹೊಳಬಸು ದಂಡಿನ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಪಾಟೀಲ ಮತ್ತಿತರರು ಇದ್ದರು.

    ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಹಲವಾರು ಸವಾಲುಗಳಿವೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾವನ್ನು ತರಬೇಕಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ.
    ಸಂಯುಕ್ತ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts