More

    ಲಾಕ್‌ಡೌನ್‌ನಿಂದ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ನಷ್ಟ

    ಮೈಸೂರು: ಲಾಕ್‌ಡೌನ್‌ನಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ತಿಂಗಳಿಗೆ 10 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಇನ್ನೂ ಶೇ.20ರಷ್ಟು ಕೈಗಾರಿಕೆಗಳು ತೆರೆದಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ತಿಳಿಸಿದರು.

    ರಾಜ್ಯದ 6.50 ಲಕ್ಷ ಸಣ್ಣ ಕೈಗಾರಿಕೆಗಳಲ್ಲಿರುವ 2.50 ಕೋಟಿ ಉದ್ಯೋಗದಲ್ಲಿ ಶೇ.20ರಷ್ಟು ಉದ್ಯೋಗಗಳು ನಷ್ಟವಾಗಿವೆ. ಈ ಕ್ಷೇತ್ರ ಸಾಕಷ್ಟು ತೊಂದರೆಗೆ ಸಿಲುಕಿದ್ದು, ಕೇಂದ್ರ, ರಾಜ್ಯ ಸರ್ಕಾರ ನೆರವಿನ ಹೊರತಾಗಿಯೂ ಅನುಕೂಲಕರ ವಾತಾವರಣ ನಿರ್ಮಾಣವಾಗಿಲ್ಲ. ಲಾಕ್‌ಡೌನ್ ಘೋಷಣೆ ಬಳಿಕ ಅನ್ಯರಾಜ್ಯ ತಾಂತ್ರಿಕವಾಗಿ ನುರಿತ ಕಾರ್ಮಿಕರು ತಮ್ಮೂರಿಗೆ ಹೋಗಿದ್ದು, ಇದು ಕೂಡ ಬಲವಾದ ಪೆಟ್ಟು ಕೊಟ್ಟಿದೆ. ವಲಸೆ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಬರಲು ಶ್ರಮಿಕ ರೈಲು ಸೌಲಭ್ಯ ಕಲ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಲಾಕ್‌ಡೌನ್ ಸಡಿಲಗೊಂಡಿದ್ದರೂ ಕೈಗಾರಿಕೆಗಳು ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಲಿದೆ. ತೀವ್ರ ನಿಧಾನಗತಿಯು ಎಸ್‌ಎಂಇಗಳಲ್ಲಿ ಉದ್ಯಮದ ಎಲ್ಲ ವಿಭಾಗಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಆಟೋಮೊಬೈಲ್‌ನಂಥ ಉದ್ಯಮಗಳು ತೀವ್ರ ಆರ್ಥಿಕ ಹಿಂಜರಿತ ಕಂಡಿವೆ. ಇಂಥ ಕೆಲ ಉದ್ಯಮಗಳು ಚೇತರಿಸಿಕೊಳ್ಳುವುದು ತುಂಬ ಕಷ್ಟಕರ. ಸರ್ಕಾರದ ನೆರವಿನ ಘೋಷಣೆ ಬಳಿಕವೂ ಕೈಗಾರಿಕೆಗಳ ಭವಿಷ್ಯವು ನಿರಾಶಾದಾಯಕವಾಗಿದೆ. ಶೇ.20ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪುನರುಜ್ಜೀವನಗೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ಸಿಲುಕಿವೆ ಎಂದು ಬೇಸರ ವ್ಯಕ್ತಪಡಿಸಿದರು.

    ಉದ್ಯಮಗಳು ಆರ್ಥಿಕ ಪ್ರಗತಿಯತ್ತ ಮುಖ ಮಾಡಲು ಕೈಗಾರಿಕೆಗಳ ಸಾಲ ಮೇಲಿನ ಬಡ್ಡಿ ದರವನ್ನು ಶೇ.12ರಿಂದ 6ಕ್ಕೆ ಇಳಿಕೆ ಮಾಡಬೇಕು. ಶೇ.18 ಮತ್ತು ಶೇ. 28ರಷ್ಟು ಜಿಎಸ್‌ಟಿ ಪಾವತಿ ದೊಡ್ಡ ಹೊರೆಯಾಗಿದ್ದು, ಅದನ್ನು ಶೇ.12ಕ್ಕೆ ಇಳಿಸಬೇಕು. ಮೂಲಸೌಕರ್ಯ ಒದಗಿಸುವುದರಿಂದ ಉದ್ಯೋಗವನ್ನು ಸೃಷ್ಟಿಸಲು ಮತ್ತು ಎಸ್‌ಎಂಇ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಬೇಕು. ಲೋಕೋಪಯೋಗಿ, ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡುತ್ತಿರುವ ಮೊತ್ತವನ್ನು ಹೆಚ್ಚಿಸಬೇಕು. ಆರೋಗ್ಯ ಮೂಲಸೌಕರ್ಯ ಮತ್ತು ನಗರ ವಸತಿ, ಕೊಳೆಗೇರಿ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುವುದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯೊಂದಿಗೆ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಸರ್ಕಾರವನ್ನು ಆಗ್ರಹಿಸಿದರು.

    ಕರೊನಾದಿಂದ ತೊಂದರೆಗೊಳಗಾಗಿರುವ ರಫ್ತು ಆಧಾರಿತ ಘಟಕಗಳು ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎನ್‌ಪಿಎ ಮಾನದಂಡವನ್ನು ಸಡಿಲಗೊಳಿಸಬೇಕು. ತುರ್ತು ಕ್ರೆಡಿಟ್ ಲಿಂಕ್ ಗ್ಯಾರಂಟಿ ಯೋಜನೆಯಡಿ ಉದ್ಯಮಗಳಿಗೆ ಸಾಲವನ್ನು ವಿಸ್ತರಿಸುವಲ್ಲಿ ಸರ್ಕಾರವು ಸಹಕಾರಿ ಬ್ಯಾಂಕಿಂಗ್ ಸಂಸ್ಥೆಗಳನ್ನು ಸಹ ಸೇರಿಸಬೇಕು. ಇದರಿಂದ ಗ್ರಾಮೀಣ ಕೈಗಾರಿಕೆಗಳಿಗೆ ಸಹಾಯವಾಗುವುದಲ್ಲದೆ ವಿತರಣಾ ಜಾಲ ವಿಸ್ತಾರವಾಗಲಿದೆ. ಉದ್ಯಮಗಳ ಬಾಡಿಗೆೆ ಮತ್ತು ಯುಟಿಲಿಟಿ ಬಿಲ್‌ಗಳನ್ನು ಒಂದು ಅವಧಿಗೆ ನೇರ ನಗದು ಮೂಲಕ ಪಾವತಿಸುವುದನ್ನು ಪರಿಗಣಿಸಬೇಕು. ಸಾಲ ಮರುಪಾವತಿಯ ಮೇಲಿನ ಮೊರಟೋರಿಯಂ ಅವಧಿಯನ್ನು ಹಣಕಾಸಿನ ವರ್ಷಾಂತ್ಯದವರೆಗೆ ವಿಸ್ತರಿಸಬೇಕಾಗಿದೆ. ಬ್ಯಾಂಕ್‌ಗಳ ಸಾಲ ಮರುಪಾವತಿಯನ್ನು ಹೆಚ್ಚಿನ ಅವಧಿಯೊಂದಿಗೆ ಮತ್ತಷ್ಟು ಸಡಿಲಗೊಳಿಸಬೇಕಾಗಿದೆ ಎಂದು ಆಗ್ರಹಿಸಿದರು.

    ಸರ್ಕಾರ ದೌರ್ಬಲ್ಯವೇ ಕಾರಣ: ಸುಲಲಿತ ಉದ್ದಿಮೆ ವಹಿವಾಟಿನ ವಾರ್ಷಿಕ ಶ್ರೇಯಾಂಕದಲ್ಲಿ ಕರ್ನಾಟಕವು 8ರಿಂದ 17ನೇ ಸ್ಥಾನಕ್ಕೆ ಕುಸಿಯಲು ರಾಜ್ಯ ಸರ್ಕಾರದ ದೌರ್ಬಲ್ಯವೇ ಕಾರಣ ಎಂದು ಕೆ.ಬಿ.ಅರಸಪ್ಪ ಆರೋಪಿಸಿದರು.

    ಉದ್ದಿಮೆ ಸ್ಥಾಪನೆಗೆ ಅನೇಕ ಪರವಾನಗಿ ಪಡೆದುಕೊಳ್ಳುವುದರಲ್ಲೇ ಸಾಕಾಗಿ ಹೋಗುತ್ತದೆ. ಇದರಿಂದ ರೋಸಿ ಹೋದ ಹೂಡಿಕೆದಾರರು, ಕೈಗಾರಿಕೆ ಸ್ಥಾಪನೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದರು.

    ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯ ಸಭೆಯನ್ನು ಜಿಲ್ಲಾಧಿಕಾರಿಗಳು ವರ್ಷವಾದರೂ ನಡೆಸುತ್ತಿಲ್ಲ. ಇದರಿಂದ ಕೈಗಾರಿಕೆಗಳ ಸ್ಥಾಪನೆ ನನೆಗುದಿಗೆ ಬಿದ್ದಿವೆ. ಈ ಸಭೆಯಲ್ಲಿ ದಾಖಲೆ ಪರಿಶೀಲಿಸಿ ಪರವಾನಗಿ ನೀಡಿದರೆ ವಿವಿಧ ಕಚೇರಿಗಳಿಗೆ ಅಲೆಯುವುದು, ಬೇರೆ ಬೇರೆ ಊರುಗಳಿಗೆ ಸುತ್ತುವುದು ತಪ್ಪಲಿದೆ. ಹೀಗಾಗಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಏಕಗವಾಕ್ಷಿ ಸಮಿತಿಯ ಸಭೆಯನ್ನು ಪ್ರತಿ ತಿಂಗಳು ಕರೆಯಬೇಕು ಎಂದು ಆಗ್ರಹಿಸಿದರು.

    ಮೈಸೂರಿನಲ್ಲೂ ಕೈಗಾರಿಕೆಗಳ ಸಂಕಷ್ಟ: ಲಾಕ್‌ಡೌನ್‌ನಿಂದಾಗಿ ಮೈಸೂರಿನಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳೂ ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ 39,795 ಸಣ್ಣ ಕೈಗಾರಿಕೆಗಳು ಹಾಗೂ 53 ಮಧ್ಯಮ, 45 ಬೃಹತ್ ಮತ್ತು 5 ಮೆಗಾ ಉದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, 2.61 ಲಕ್ಷ ಉದ್ಯೋಗಾವಕಾಶ ಒದಗಿಸಿದೆ. ಅದರಲ್ಲಿ ಎಂಎಸ್‌ಎಂಇಗಳು ಸುಮಾರು 2.33 ಲಕ್ಷ ಉದ್ಯೋಗಾವಕಾಶ ಕಲ್ಪಿಸಿವೆ. ಇಲ್ಲಿಯ ಕೈಗಾರಿಕೆಗಳು ಸಹ ತೀವ್ರ ದುಷ್ಪರಿಣಾಮಕ್ಕೆ ಒಳಗಾಗಿದೆ. ಕೈಗಾರಿಕಾ ವಸಾಹತುಗಳಲ್ಲಿನ ಮೂಲ ಸೌಕರ್ಯಗಳ ಕೊರತೆ, ಸ್ಥಳೀಯ ಸಂಸ್ಥೆಗಳು ಉದ್ದಿಮೆಗಳಿಗೆ ವಿಧಿಸುವ ಆಸ್ತಿ ತೆರಿಗೆ ಹೊರೆಯೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts