More

    ಖುಷಿ ತಂದ ಕಲ್ಲಂಗಡಿ ಕೃಷಿ

    ಲಕ್ಷ್ಮೇಶ್ವರ: ಪಟ್ಟಣದ ರೈತ ಗಂಗಾಧರ ಶಿರಗಣ್ಣವರ ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಆಧುನಿಕ ಕೃಷಿ ಪದ್ಧತಿಯಡಿ ಕಲ್ಲಂಗಡಿ ಬೆಳೆದು ಖುಷಿ ಕಂಡುಕೊಂಡಿದ್ದಾರೆ.

    ಸಣ್ಣದಾದ ಸ್ವೀಟ್-ಖಾರಾ-ಮಂಡಕ್ಕಿ ವ್ಯಾಪಾರದೊಂದಿಗೆ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ರೈತ ಆರಕ್ಕೇರದೆ ಮೂರಕ್ಕಿಳಿಯದ ಪರಿಸ್ಥಿತಿಯಿಂದ ಹೊಸ ಬೆಳೆ ಬೆಳೆಯಬೇಕು ಎಂದು ನಿರ್ಧರಿಸಿದರು. ತಮ್ಮ 3 ಎಕರೆ ಜಮೀನಿನಲ್ಲಿ ಗಂಗಾಧರ ಅವರು ತೋಟಗಾರಿಕೆ ಅಧಿಕಾರಿಗಳ ಸಲಹೆ-ಸಹಾಯದಿಂದ ಪ್ಲಾಸ್ಟಿಕ್ ಮಲ್ಚಿಂಗ್ ಪದ್ಧತಿ ಅಳವಡಿಸಿಕೊಂಡು ಅದರಲ್ಲಿ ಮೆಲೋಡಿ ತಳಿಯ ಕಲ್ಲಂಗಡಿ ಬೆಳೆದಿದ್ದಾರೆ. ಘಟಪ್ರಭಾದಿಂದ ಪ್ರತಿ ಸಸಿಗೆ 2.30 ರೂಪಾಯಿಯಂತೆ ಖರೀದಿಸಿ 5 ಅಡಿ ಅಂತರದಲ್ಲಿ ನಾಟಿ ಮಾಡಿದ್ದರು. ಇದಕ್ಕಾಗಿ ಆಳು, ಸಾವಯುವ ಗೊಬ್ಬರ, ರಾಸಾಯನಿಕ ಸಿಂಪಡಣೆ, ನಿರ್ವಹಣೆ ವೆಚ್ಚ ಸೇರಿ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಕೇವಲ 65 ದಿನಗಳಲ್ಲಿ ಸಸಿಗಳು ಬೆಳೆದು 3ರಿಂದ 8 ಕೆಜಿ ಗಾತ್ರದ ಹಣ್ಣುಗಳಾಗುತ್ತಿವೆ. ನಡುವೆ ಮಿಶ್ರ ಬೆಳೆಯಾಗಿ ಹಸಿಮೆಣಸಿನಕಾಯಿ ಬೆಳೆದಿದ್ದು, ಸದ್ಯ ಪ್ರತಿ ಕ್ವಿಂಟಾಲ್​ಗೆ 4 ಸಾವಿರ ರೂ. ದರವಿದೆ.

    ಕೈ ಹಿಡಿದ ಕಲ್ಲಂಗಡಿ

    ಸದ್ಯ ಬೇಸಿಗೆ ಬಿಸಿಲು ಪ್ರಾರಂಭವಾಗಿದ್ದು, ಟನ್​ಗೆ 8 ಸಾವಿರ ರೂ. ದರದಂತೆ ಲಕ್ಷ್ಮೇಶ್ವರ ಮತ್ತು ಗದಗ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಲಕ್ಷ್ಮೇಶ್ವರ ಮಾರ್ಕೆಟ್​ನ ತಮ್ಮ ಅಂಗಡಿಯಲ್ಲಿ ಪ್ರತಿ ಕೆಜಿಗೆ 20 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಫಸಲು ಪ್ರಾರಂಭವಾಗಿ ಹೆಚ್ಚೆಂದರೆ 1 ತಿಂಗಳ ಕಾಲ ಫಲ ಕೊಡುವ ಬೆಳೆ ಇದಾಗಿದೆ. 2 ದಿನಕೊಮ್ಮೆ ಹಣ್ಣು ಹರಿದು ಮಾರಾಟ ಮಾಡಲಾಗುತ್ತದೆ. 3 ಎಕರೆಯಲ್ಲಿ 100 ಟನ್ ಇಳುವರಿ, 6-7 ಲಕ್ಷ ರೂ. ಆದಾಯ ಅಂದಾಜಿಸಲಾಗಿದೆ. ಸದ್ಯ 25 ಟನ್ ಮಾರಾಟ ಮಾಡಲಾಗಿದೆ.

    ನಮ್ಮ ಭೂಮಿಯಲ್ಲಿ ಕಲ್ಲಂಗಡಿ ಬೆಳೆ ಬರುವುದು ಕಷ್ಟ ಎನ್ನಲಾಗುತ್ತಿತ್ತು. ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಸಾಕಷ್ಟು ಶ್ರಮ ಮತ್ತು ಖರ್ಚಿನೊಂದಿಗೆ ಕಲ್ಲಂಗಡಿ ಬೆಳೆದಿದ್ದೇನೆ. ಇದೀಗ ಉತ್ತಮ ಫಸಲು ಕೈಗೆ ಬಂದಿದು, ಮಾರುಕಟ್ಟೆಯಲ್ಲಿ ಉತ್ತಮ ದರವೂ ಸಿಗುತ್ತಿದೆ. ಕಷ್ಟ ಪಟ್ಟಿದ್ದಕ್ಕೂ ಒಳ್ಳೆ ಫಸಲು. ಸ್ಥಳೀಯವಾಗಿಯೇ ಉತ್ತಮ ದರ ಸಿಕ್ಕಿರುವುದು ಕಷ್ಟ ಪರಿಹಾರಕ್ಕೆ ಸಹಾಯವಾದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ತಳಿ ಬೆಳೆ ಬೆಳೆಯಲು ಹುಮ್ಮಸ್ಸು ಬಂದಿದೆ.

    | ಗಂಗಾಧರ ಶಿರಗಣ್ಣವರ ಕಲ್ಲಂಗಡಿ ಬೆಳೆಗಾರ

    ನೀರಾವರಿ ಅನುಕೂಲ ಇರುವ ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಹೊಸ ತಳಿಯ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಬೇಕು. ಇಲಾಖೆಯಿಂದ ರೈತರಿಗೆ ಸಹಾಯ-ಸಹಕಾರ-ಸಲಹೆ ನೀಡಲಾಗುವುದು. ಹಣ್ಣಿನ ಬೆಳೆ ಬೆಳೆಯುವವರಿಗೆ ತೋಟಗಾರಿಕೆ ಇಲಾಖೆಯಿಂದ ಶಿಥಿಲೀಕರಣ ಘಟಕಗಳ ಸ್ಥಾಪನೆಗೆ ಅಕಾಶವಿದೆ. ಬೆಳೆ ಬಂದಾಗ ಮಾರುಕಟ್ಟೆಗಳ ಬಗ್ಗೆ ಮಾಹಿತಿ ಪಡೆದು ಮಾರಾಟ ಮಾಡಬೇಕು.

    | ಸುರೇಶ ಕುಂಬಾರತೋಟಗಾರಿಕೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts