More

    ಕುಸಿದ ಇಳುವರಿ ಹೆಚ್ಚಿದ ದರ

    ಕಂಪ್ಲಿ: ಏಲಕ್ಕಿ ಬಾಳೆ ಬೆಳೆದ ರೈತರಿಗೆ ಉತ್ತಮ ದರ ದೊರಕಿದೆ. ಇಳುವರಿ ಕುಸಿತದ ಪರಿಣಾಮ ಎದುರಿಸಿದರೂ ಉತ್ತಮ ದರ ಇದ್ದುದರಿಂದ ಏಲಕ್ಕಿ ಬಾಳೆ ಬೆಳೆದ ರೈತರು ಸದ್ಯ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ.

    ತಾಲೂಕಿನಲ್ಲಿ 500- 600 ಎಕರೆಯಷ್ಟು ಬಾಳೆ ಬೆಳೆದಿದ್ದು, ಬೇಡಿಕೆಯಿರುವ ಏಲಕ್ಕಿ ಬಾಳೆಯನ್ನು ಸುಮಾರು 300 ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗಿದೆ. ರಾಮಸಾಗರದಲ್ಲಿ ಸುಮಾರು 70 ಎಕರೆಯಷ್ಟು ಏಲಕ್ಕಿ ಬಾಳೆ ಬೆಳೆಯಲಾಗಿದೆ.

    ಆಲಿಕಲ್ಲು ಮಳೆ ಮತ್ತು ಹೆಚ್ಚಿನ ಪ್ರಮಾಣದ ಮಳೆಗೆ ರಾಮಸಾಗರ ಭಾಗದಲ್ಲಿ ಏಲಕ್ಕಿ ಬಾಳೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡು ಇಳುವರಿ ಕುಂಟಿತವಾಗಿದೆ. ರೋಗಕ್ಕೀಡಾಗಿದ್ದರಿಂದ 9 ಕೆಜಿ ತೂಗಬೇಕಿದ್ದ ಏಲಕ್ಕಿ ಬಾಳೆಗೊನೆ ಕೇವಲ 4 ಕೆಜಿಯಷ್ಟು ತೂಗುತ್ತಿವೆ. ಎಕರೆಗೆ 8 ಟನ್ ಇಳುವರಿ ಬದಲಿಗೆ 4 ಟನ್ ಇಳುವರಿ ಬಂದಿದೆ.
    ಉತ್ತಮ ಮಾರುಕಟ್ಟೆ ದರದಿಂದಾಗಿ ಬಾಳೆ ಬೆಳೆದ ರೈತ ಕೊಂಚ ಉಸಿರಾಡುವಂತಾಗಿದೆ. ಸದ್ಯ ಏಲಕ್ಕಿ ಬಾಳೆ ಟನ್ನಿಗೆ 43,000 ರೂಪಾಯಿಗಳಷ್ಟು ದರ ಇದ್ದು, ಕೊಯ್ಲು ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ.

    ಅತಿಹೆಚ್ಚು ಮಳೆ, ತೇವಾಂಶ ಹೆಚ್ಚಾದಾಗ ಬಸಿಗಾಲುವೆ (ಕೇಡುಗಾಲುವೆ) ತೆಗೆದು ನೀರಿನ ಅಂಶವನ್ನು ಕಡಿಮೆ ಮಾಡಬಹುದು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನಡಿ ಹೊಸ ಪ್ರದೇಶ ವಿಸ್ತರಣೆ (ಹೊಸದಾಗಿ ಬಾಳೆ ಬೆಳೆಯುವ)ಗೆ ಟಿಸ್ಯು (ಅಂಗಾಂಶ ಕೃಷಿ ಬಾಳೆ) ಜಿ9 ತಳಿ ಬಾಳೆಗೆ ಹೆಕ್ಟೇರ್‌ಗೆ 30,300 ರೂ., ಎರಡನೇ ಕಂತು 10,600 ರೂ. ದೊರೆಯಲಿದೆ. ಜಾಬ್ ಕಾರ್ಡ್ ಹೊಂದಿದವರು ಎಕರೆಗೆ ಕೂಲಿ ಮತ್ತು ಸಾಮಗ್ರಿ ವೆಚ್ಚವಾಗಿ 80 ಸಾವಿರ ರೂ. ಸೌಲಭ್ಯ ಪಡೆದುಕೊಳ್ಳಬಹುದು. ಕಂದು ಬಾಳೆ ಹೆಕ್ಟೇರ್‌ಗೆ ಮೊದಲ ವರ್ಷಕ್ಕೆ 19,500ರೂ, ಎರಡನೇ ವರ್ಷಕ್ಕೆ 6,500 ರೂ. ಪ್ರೋತ್ಸಾಹಧನ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಹೊಸಪೇಟೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್.

    ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲು ಕನಿಷ್ಠ 1ಎಕರೆಯಿಂದ ಗರಿಷ್ಠ 12.5 ಎಕರೆ ಪ್ರದೇಶಕ್ಕೆ ಪರಿಶಿಷ್ಟರಿಗೆ ಶೇ.90, ಸಾಮಾನ್ಯರಿಗೆ ಶೇ.75 ಸಹಾಯಧನ ಲಭ್ಯವಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ 16 ಪೋಷಕಾಂಶಯುಳ್ಳ ಬಾಳೆ ಸ್ಪೆಷಲ್ ಸಾವಯವ ಔಷಧಿ ತಯಾರಿಸಿದ್ದು ಇದರ ಬಳಕೆಯಿಂದ ಶೇ.25 ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಬಾಳೆ ಸ್ಪೇಷಲ್ ಅನ್ನು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.
    ಜೆ.ಶಂಕರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಹೊಸಪೇಟೆ

    ಏಲಕ್ಕಿ ಬಾಳೆ ಬೆಳೆಗೆ ಎಕರೆಗೆ 1.20 ಲಕ್ಷ ರೂ.ಗಳಷ್ಟು ವೆಚ್ಚ ಮಾಡಿದೆ. ಇಳುವರಿ ಕಡಿಮೆ ಆದಾಗ ದರ ಹೆಚ್ಚಾಗಿದೆ. ಬಾಳೆಗೆ ಬರುವ ರೋಗಗಳಿಗೆ ವಿಜ್ಞಾನಿಗಳು ಸಕಾಲಿಕ ಪರಿಹಾರ ನೀಡುವಂತಾಗಬೇಕು. ರೋಗಕ್ಕೀಡಾದ ಬಾಳೆಗೆ ವಿಮೆ ಪರಿಹಾರ ನೀಡಬೇಕು. ಬಾಳೆ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು.
    ಬಿ.ಗಂಗಾಧರ, ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ, ರಾಮಸಾಗರ

    ಹನಿ ನೀರಾವರಿ ಪದ್ಧತಿಯಿಂದ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯ. ಸದ್ಯ ಏಲಕ್ಕಿ ಬಾಳೆ ಎಕೆರೆಗೆ 12 ಟನ್ ಬದಲಿಗೆ 9 ಟನ್‌ನಷ್ಟು ಇಳುವರಿ ಬಂದಿದೆ. ಸಾವಯವ ಗೊಬ್ಬರ ಬಳಕೆ ಮಾಡಬೇಕಿದೆ. ವೈಜ್ಞಾನಿಕ ನೀರಾವರಿ ಪದ್ಧತಿಯಿಂದ ಮಾತ್ರ ಗುಣಮಟ್ಟದ ಬಾಳೆ ಇಳುವರಿ ಪಡೆದುಕೊಳ್ಳಬಹುದು. ಪ್ರತಿ ಬಾಳೆಗೊನೆಗೆ 120 ರೂ.ಗಳಷ್ಟು ನಿರ್ವಹಣೆ ವೆಚ್ಚವಾಗುತ್ತಿದ್ದು, ಚೆನ್ನಾಗಿ ಬೆಳೆದ ಗೊನೆ 400 ರೂ.ಗಳಷ್ಟು ಬಾಳುತ್ತದೆ. ಬಾಳೆ ರೈತರಿಗೆ ಉಚಿತ ಸಸಿ ಕೊಡಬೇಕು.
    ಗೆಜ್ಜೆಳ್ಳಿ ಬಾಷಾ, ಬಾಳೆ ಬೆಳೆಗಾರ, ಕಂಪ್ಲಿ ಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts