More

    ಶಿಕ್ಷಕರಿಗೆ ತರಬೇತಿ: ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳೊಂದಿಗೆ ಅಮೆರಿಕ ಒಪ್ಪಂದ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ನೂರಾರು ಇಂಗ್ಲಿಷ್ ಭಾಷಾ ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರರಿಗಾಗಿ ಟಿಇಎಸ್‍ಒಎಲ್ ಇಂಟರ್​​ನ್ಯಾಷನಲ್​ ಸಹಯೋಗದಲ್ಲಿ ಟಿಇಎಸ್‍ಒಎಲ್ ಕೇಂದ್ರ ಪ್ರಮಾಣಪತ್ರ ಕಾರ್ಯಕ್ರಮ (TCCP) ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿತ್ತು.

    ಫೆ. 9ರಂದು ನಡೆದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಇಂಗ್ಲಿಷ್ ಭಾಷಾ ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರರು ಭಾಗವಹಿಸಿದ್ದರು. ‘ಟಿಇಎಸ್‍ಒಎಲ್ ಇಂಟರ್​ನ್ಯಾಷನಲ್​’ ಇಂಗ್ಲಿಷ್ ಬೋಧನೆಯಲ್ಲಿ ತರಬೇತಿ ನೀಡುತ್ತಿರುವ ಮಂಚೂಣಿ ಸಂಸ್ಥೆಯಾಗಿದ್ದು, ಕರ್ನಾಟಕ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಸರ್ಕಾರಿ ಶಿಕ್ಷಕರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

    ಟಿಇಎಸ್‍ಒಎಲ್ ಕೇಂದ್ರ ಪ್ರಮಾಣಪತ್ರ ಕಾರ್ಯಕ್ರಮವು ಇಂಗ್ಲಿಷ್ ಭಾಷಾ ಶಿಕ್ಷಕರಿಗೆ 140 ಗಂಟೆಗಳ ಆಳವಾದ ತರಬೇತಿ ನೀಡುವ ಕಾರ್ಯಕ್ರಮವಾಗಿದೆ. ಇದರಲ್ಲಿ ಭಾಗವಹಿಸುವವರು ಅತ್ಯಾಧುನಿಕ ಹಾಗೂ ಸಂಶೋಧನಾ ಆಧರಿತ ಬೋಧನಾ ತಂತ್ರಗಳನ್ನು ಕಲಿಯುತ್ತಾರೆ. ಅಲ್ಲದೇ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರೂಪಿಸಲಾದ ಇಂಗ್ಲಿಷ್ ಪ್ರಾವೀಣ್ಯತೆ ಮತ್ತು 21ನೇ ಶತಮಾನದಲ್ಲಿ ಅವಶ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಲು ಅನುಕೂಲವಾಗುವಂತೆ ತಮ್ಮ ಸಹ ಶಿಕ್ಷಕರಿಗೆ ವಿದ್ಯಾರ್ಥಿ ಕೇಂದ್ರಿತ ಹಾಗೂ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸುವ ಬೋಧನಾ ವಿಧಾನ ಅಳವಡಿಸಿಕೊಳ್ಳುವಲ್ಲಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನೈಪುಣ್ಯ ಸಾಧಿಸುತ್ತಾರೆ.

    ಈ ತರಬೇತಿಗಳ ಮೂಲಕ ಅಮೆರಿಕ ರಾಯಭಾರ ಕಚೇರಿಯು, `ಕೆ-12 ಶಿಕ್ಷಕರ ಸಮೂಹ’ ವೃತ್ತಿನೈಪುಣ್ಯ ಸಾಧಿಸುವಲ್ಲಿ ತನ್ಮೂಲಕ ಈ ಶಿಕ್ಷಕರು ತಮ್ಮ ರಾಜ್ಯಗಳ ಇತರ ಶಿಕ್ಷಕರ ವೃತ್ತಿನೈಪುಣ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಬೆಂಬಲ ನೀಡುತ್ತಿದೆ. ದೆಹಲಿಯಲ್ಲಿ ಈ ಮಾದರಿ ಯಶಸ್ವಿಯಾಗಿದ್ದು, ದೆಹಲಿ ಸರ್ಕಾರ ಈಗ 200ಕ್ಕೂ ಹೆಚ್ಚು ನಿಪುಣ ಮಾರ್ಗದರ್ಶಿ ಶಿಕ್ಷಕರನ್ನು ಹೊಂದಿದೆ. ಈ ಶಿಕ್ಷಕರು 10,000 ಇಂಗ್ಲಿಷ್ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದು, 2.2 ದಶಲಕ್ಷ ದೆಹಲಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಾಮರ್ಥ್ಯ ಹೆಚ್ಚಿಸಲು ಇದು ನೆರವಾಗಿದೆ.

    ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕ ಮಿಷನ್‍ನ ಮಿನಿಸ್ಟರ್ ಕೌನ್ಸೆಲರ್ ಫಾರ್ ಪಬ್ಲಿಕ್ ಅಫೇರ್ಸ್, ಗ್ಲೋರಿಯಾ ಬರ್ಬೆನಾ ಹಾಗೂ ಟಿಇಎಸ್‍ಒಎಲ್ ಇಂಟರ್​ನ್ಯಾಷನಲ್ ಅಧ್ಯಕ್ಷ ಗೇಬ್ರಿಯಲ್ ಕ್ಲೆಕೊವಾ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ‘ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು, ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಲು ಹಾಗೂ ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಇಂಗ್ಲಿಷ್ ಪ್ರಮುಖ ಸಾಧನವಾಗಿದೆ ಎಂದು ನಾವು ನಂಬುತ್ತೇವೆ. ಶಿಕ್ಷಕರಾಗಿ ನೀವು ಇದರಲ್ಲಿ ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ’ ಎಂದು ಬರ್ಬೆನಾ ಹೇಳಿದರು.

    ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಇಂಗ್ಲಿಷ್ ಭಾಷಾ ಶಿಕ್ಷಕರ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಚೆನ್ನೈನ ಅಮೆರಿಕ ಕಾನ್ಸುಲ್ ಕಚೇರಿ ಜೊತೆ ಕೈಜೋಡಿಸಲು ಕರ್ನಾಟಕದ ಶಿಕ್ಷಣ ಇಲಾಖೆಗೆ ಸಂತಸವೆನಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಶಿಫಾರಸಿನ ಅನ್ವಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಅವಕಾಶ ಒದಗಿಸಲು ರಾಜ್ಯವು ಯೋಜಿಸುತ್ತಿದೆ ಹಾಗೂ ಶಾಲಾ ಶಿಕ್ಷಣದ ಮಟ್ಟವನ್ನು ಹೆಚ್ಚಿಸಲು ಮುಂದೆಯೂ ಇಂತಹ ಜಂಟಿ ಯೋಜನೆಯಲ್ಲಿ ಭಾಗಿಯಾಗಲು ಸಿದ್ಧವಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

    ಅಮೆರಿಕ ಸರ್ಕಾರವು, ವಿಶ್ವದಾದ್ಯಂತ ಅಮೆರಿಕ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಚೇರಿಗಳಲ್ಲಿ ಇರುವ ಪ್ರಾದೇಶಿಕ ಇಂಗ್ಲಿಷ್ ಭಾಷಾ ಕಚೇರಿಗಳ ಮೂಲಕ ಇಂಗ್ಲಿಷ್ ಶಿಕ್ಷಕರ ಶಿಕ್ಷಣ, ಭಾಷಾ ಪ್ರಾವೀಣ್ಯತೆ ಮತ್ತು ವೃತ್ತಿ ನೈಪುಣ್ಯ ಹೆಚ್ಚಿಸುವ ಕಾರ್ಯಕ್ರಮಗಳಿಗಾಗಿ ಹಣಕಾಸು ನೆರವು ನೀಡಲಿದೆ. ಅಮೆರಿಕ ರಾಯಭಾರ ಕಚೇರಿಗಳ ಇಂಗ್ಲಿಷ್ ಭಾಷಾ ಕಚೇರಿ ಮತ್ತು ಅದರ ಕಾರ್ಯಕ್ರಮಗಳ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು https://in.usembassy.gov/education-culture/study-usa/regional-english-language-office-relo/ ಭೇಟಿನೀಡಿ ಅಥವಾ [email protected] ಬರೆಯಿರಿ.

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts