More

    ಐಪಿಎಲ್ ಮತ್ತೆ ಶುರುವಾದಾಗ ಇಂಗ್ಲೆಂಡ್ ಕ್ರಿಕೆಟಿಗರು ಆಡುವುದು ಅನುಮಾನ

    ಲಂಡನ್: ಕರೊನಾ ಹಾವಳಿಯಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ 14ನೇ ಆವೃತ್ತಿಯನ್ನು ಹಾಲಿ ವರ್ಷಾಂತ್ಯದೊಳಗೆ ಮರುನಿಗದಿಗೊಳಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಆದರೆ ಐಪಿಎಲ್ ಟೂರ್ನಿ ಪುನರಾರಂಭಗೊಂಡಾಗ ಅದರಲ್ಲಿ ಇಂಗ್ಲೆಂಡ್ ಆಟಗಾರರು ಆಡುವುದು ಅನುಮಾನವೆನಿಸಿದೆ. ಯಾಕೆಂದರೆ ಇಂಗ್ಲೆಂಡ್ ಈ ವರ್ಷ ಜೂನ್ ನಂತರದಲ್ಲಿ ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಹೊಂದಿದೆ.

    ಐಪಿಎಲ್ ಆಡುವ ಸಲುವಾಗಿ ಇಂಗ್ಲೆಂಡ್ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕ್ರಿಕೆಟ್ ನಿರ್ದೇಶಕ ಆಶ್ಲೆ ಜೈಲ್ಸ್ ಸೂಚಿಸಿದ್ದಾರೆ. ಇದು ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್‌ಗೆ ಮರಳಲು ಅಡ್ಡಿಯಾಗಿ ಪರಿಣಮಿಸಿದೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್ 15ರ ನಂತರ ಅಕ್ಟೋಬರ್ 14ಕ್ಕೆ ಮುನ್ನ ಅಥವಾ ನವೆಂಬರ್ 15ರಂದು ಟಿ20 ವಿಶ್ವಕಪ್ ಮುಗಿದ ಬಳಿಕ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ ಇವೆರಡೂ ಸಮಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಿಗದಿಯಾಗಿದೆ.

    ಇದನ್ನೂ ಓದಿ: ವಿಶ್ವನಾಥನ್ ಆನಂದ್ ಜತೆ ಚೆಸ್ ಆಡಿ, ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವಾಗಿ!

    ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ತಂಡದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪ್ರವಾಸ ನಿಗದಿಯಾಗಿದ್ದರೆ, ಟಿ20 ವಿಶ್ವಕಪ್ ಬಳಿಕ ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಈ ಮುನ್ನ ಮೇ 30ರವರೆಗೆ ಐಪಿಎಲ್‌ನಲ್ಲಿ ಆಡುವ ಸಲುವಾಗಿ ಇಂಗ್ಲೆಂಡ್ ಆಟಗಾರರಿಗೆ ತವರಿನಲ್ಲಿ ಜೂನ್ 2ರಿಂದ ನಡೆಯುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಳ್ಳಲು ಇಸಿಬಿ ಅವಕಾಶ ನೀಡಿತ್ತು. ಕಿವೀಸ್ ವಿರುದ್ಧದ ಸರಣಿ ಜನವರಿಯಲ್ಲಿ ನಿಗದಿಯಾಗಿತ್ತು. ಆ ವೇಳೆಗೆ ಆಟಗಾರರು ಐಪಿಎಲ್ ಗುತ್ತಿಗೆಗೆ ಸಹಿ ಹಾಕಿದ್ದರು. ಹೀಗಾಗಿ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಲಾಗಿತ್ತು ಎಂದು ಆಶ್ಲೆ ಜೈಲ್ಸ್ ತಿಳಿಸಿದ್ದಾರೆ.

    ಮುಂಬೈ, ಆರ್‌ಸಿಬಿಗೆ ಚಿಂತೆ ಇಲ್ಲ!
    ಐಪಿಎಲ್ ಟೂರ್ನಿಯ 6 ತಂಡಗಳಲ್ಲಿ ಒಟ್ಟು 14 ಇಂಗ್ಲೆಂಡ್ ಆಟಗಾರರಿದ್ದಾರೆ. ಈ ಪೈಕಿ ಜೋಫ್ರಾ ಆರ್ಚರ್ ಗಾಯದಿಂದಾಗಿ ಪಾಲ್ಗೊಂಡಿರಲಿಲ್ಲ. ಬೆನ್ ಸ್ಟೋಕ್ಸ್ ಟೂರ್ನಿಯ ವೇಳೆ ಗಾಯಗೊಂಡು ತವರಿಗೆ ಮರಳಿದ್ದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಬಯೋಬಬಲ್ ಒತ್ತಡದಿಂದ ನಿರ್ಗಮಿಸಿದ್ದರು. ಇನ್ನುಳಿದ 11 ಆಟಗಾರರ ಪೈಕಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳಲ್ಲಿ ಯಾವುದೇ ಇಂಗ್ಲೆಂಡ್ ಆಟಗಾರರಿಲ್ಲ. ಇಂಗ್ಲೆಂಡ್ ಆಟಗಾರರ ಗೈರಿನಿಂದ ಪ್ರಮುಖವಾಗಿ ಸಿಎಸ್‌ಕೆ, ಪಂಜಾಬ್, ರಾಜಸ್ಥಾನ ತಂಡಗಳಿಗೆ ತೊಂದರೆಯಾಗಲಿದೆ. ಕೆಕೆಆರ್ ತಂಡವಂತೂ ಹೊಸ ನಾಯಕನನ್ನೇ ನೇಮಿಸಬೇಕಾಗುತ್ತದೆ.

    *ಐಪಿಎಲ್ ತಂಡಗಳಲ್ಲಿರುವ ಇಂಗ್ಲೆಂಡ್ ಆಟಗಾರರು:
    ಸಿಎಸ್‌ಕೆ: ಮೊಯಿನ್ ಅಲಿ, ಸ್ಯಾಮ್ ಕರ‌್ರನ್.
    ಡೆಲ್ಲಿ: ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಟಾಮ್ ಕರ‌್ರನ್.
    ಕೆಕೆಆರ್: ಇವೊಯಿನ್ ಮಾರ್ಗನ್.
    ಪಂಜಾಬ್: ಕ್ರಿಸ್ ಜೋರ್ಡನ್, ಡೇವಿಡ್ ಮಲಾನ್.
    ರಾಜಸ್ಥಾನ: ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಲಿಯಾಮ್ ಲಿವಿಂಗ್‌ಸ್ಟೋನ್.
    ಸನ್‌ರೈಸರ್ಸ್‌: ಜಾನಿ ಬೇರ್‌ಸ್ಟೋ, ಜೇಸನ್ ರಾಯ್.

    ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ದಂಪತಿಯ ರೋಮ್ಯಾಂಟಿಕ್ ಚಿತ್ರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts