More

    ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ


    ಕೊಡಗು: ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳು ಬೆಳಗಲು ಶಾಲೆಗಳಲ್ಲಿ ಸೂಕ್ತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದರು.


    ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ 17ರ ವಯೋಮಾನದ ಬಾಲಕಿಯರ 67ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿ, ಹಾಕಿಗೆ ಕೊಡಗು ಪ್ರಸಿದ್ಧಿ ಆಗಿದೆ. ಮೊದಲ ಬಾರಿಗೆ ಕೊಡಗಿನಲ್ಲಿ ಹಾಕಿ ರಾಷ್ಟ್ರೀಯ ಹಾಕಿ ಕ್ರೀಡಾಕೂಟ ನಡೆಯತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯ ಎಂದರು.


    ಕೆಪಿಎಸ್ ಶಾಲೆಗಳಲ್ಲಿ ಎಲ್‌ಜೆಜಿ, ಯುಕೆಜಿ ಕೂಡ ಶುರು ಮಾಡಲಾಗುವುದು. ಸಂಗೀತ, ಕಲಾ ಶಿಕ್ಷಣವನ್ನೂ ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಒಬ್ಬ ಶಾಸಕರಿಗೆ 5 ಕೆಪಿಎಸ್ ಶಾಲೆಗಳ ಜವಾಬ್ದಾರಿ ನೀಡಲಾಗುವುದು. 58 ಸಾವಿರ ಶಾಲೆಗಳು, 1.20 ಕೋಟಿ ಮಕ್ಕಳು ಇರುವ ಇಲಾಖೆಯ ಜವಾಬ್ದಾರಿ ನನ್ನ ಮೇಲೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಈ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು.


    ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ಕೆ.ರಾಮರಾಜನ್, ಡಿಡಿಪಿಐ ಎಂ.ಚಂದ್ರಕಾಂತ್, ಆಯುಕ್ತರ ಕಚೇರಿ ಜಂಟಿ ನಿರ್ದೇಶಕ ಎಸ್.ಎನ್.ರಮೇಶ್, ಶಾಲಾ ಶಿಕ್ಷಣ ಇಲಾಖೆ ವಿಭಾಗೀಯ ಕಾರ್ಯದರ್ಶಿ ಪಾಂಡುರಂಗ ಮತ್ತಿತರರು ಇದ್ದರು.
    ಸಾಧಕರಿಗೆ ಸನ್ಮಾನ : ಒಲಿಂಪಿಯನ್ ಎಂ.ಪಿ.ಗಣೇಶ್, ಕರ್ನಲ್ ಬಿ.ಕೆ.ಸುಬ್ರಹ್ಮಣಿ, ಹಾಕಿ ಆಟಗಾರ್ತಿ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಮುಕ್ಕಾಟೀರ ನಿಲನ್, ಅಂತಾರಾಷ್ಟ್ರೀಯ ಹಾಕಿಪಟು ಚೆಯ್ಯಂಡ ಭಾಗ್ಯಾಶ್ರೀ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಲಯನ್ಸ್ ಶಾಲಾ ಮಕ್ಕಳಿಂದ ಪ್ರದರ್ಶನಗೊಂಡ ಉಮ್ಮತಾಟ್ ಗಮನ ಸೆಳೆಯಿತು.

    ಜ.3ಕ್ಕೆ ಕೂಡಿಗೆ ಕ್ರೀಡಾಶಾಲೆಯಲ್ಲಿ ಆರಂಭವಾದ ಹಾಕಿ ಪಂದ್ಯಾವಳಿ 5 ದಿನಗಳ ಕಾಲ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ಕೂಡಿಗೆ ಟರ್ಫ್ ಮೈದಾನದಲ್ಲಿ ಆಯೋಜನೆಗೊಂಡಿದ್ದವು. ದೇಶದ ವಿವಿಧ ರಾಜ್ಯಗಳು, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿ 27 ತಂಡಗಳು ಪಾಲ್ಗೊಂಡಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts