More

    ಶಾಲಾ ಹಂತದಲ್ಲಿಯೇ ಮಕ್ಕಳು ಗಿಡ ಬೆಳೆಸಲು ಪ್ರೋತ್ಸಾಹಿಸಿ

    ಹನೂರು : ಅರಣ್ಯ ಹಾಗೂ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಸಸಿಗಳನ್ನು ಬೆಳೆಸಲು ಮುಂದಾಗಬೇಕಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಮೀಪದ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ 69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಅರಣ್ಯ ಜೀವ ಸಂಕುಲದ ಸಂಪತ್ತು. ಹಾಗಾಗಿ ಅರಣ್ಯವನ್ನು ನಾವು ಸಂರಕ್ಷಿಸಿದರೆ, ಅರಣ್ಯ ನಮ್ಮನ್ನು ರಕ್ಷಿಸುತ್ತದೆ ಎಂದರು.

    ಕೆಲವರು ಸ್ವಹಿತಕ್ಕಾಗಿ ಅರಣ್ಯವನ್ನು ನಾಶಪಡಿಸುತ್ತಿರುವುದರಿಂದ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಲಿದೆ. ಆದರೆ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯ ಹಾಗೂ ವನ್ಯಸಂಪತ್ತಿನ ರಕ್ಷಣೆಗೆ ಜತೆಗೆ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯಬೇಕಿದೆ. ಇದರಿಂದ ಆರೋಗ್ಯವಂತ ಸಮಾಜವನ್ನು ಕಾಣಲು ಸಾಧ್ಯ. ಹಾಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವುದರ ಮೂಲಕ ಜನರಲ್ಲಿ ಅರಣ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

    ತಾಲೂಕಿನಲ್ಲಿ ಅರಣ್ಯದಂಚಿಗೆ ಹೊಂದಿಕೊಂಡಂತೆ ಹೆಚ್ಚು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಕಾಡಂಚಿನಲ್ಲಿ ಪ್ರಾಣಿಗಳು ಜಮೀನಿಗೆ ಲಗ್ಗೆ ಇಡದಂತೆ ಅಗತ್ಯ ಕ್ರಮವಹಿಸುವುದರ ಮೂಲಕ ಮಾನವ – ಪ್ರಾಣಿ ಸಂಘರ್ಷ ತಡೆಗಟ್ಟಬೇಕು. ಜತೆಗೆ ಅರಣ್ಯ ಸಂರಕ್ಷಣೆಗೆ ಕಾಡಂಚಿನ ಜನರ ಸಹಕಾರ ಪಡೆಯಬೇಕು ಎಂದರು.

    ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ದೀಪಾ ಜೆ.ಕಂಟ್ರಾಕ್ಟರ್ ಮಾತನಾಡಿ, ವನ್ಯಜೀವಿ ಸಂರಕ್ಷಣೆ ಇಲಾಖೆಯಿಂದ ಮಾತ್ರವಷ್ಟೇ ಸಾಧ್ಯವಿಲ್ಲ. ಅದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಅವಶ್ಯಕ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷ ಪಾರ್ಟ್‌ನರ್‌ಶಿಫ್ ಆಫ್ ವೈಲ್ಡ್‌ಲೈಫ್ ಧ್ಯೇಯ ವಾಕ್ಯದೊಂದಿಗೆ ಗಿರಿಜನರಿಗೆ ವೈದ್ಯಕೀಯ ತಪಾಸಣಾ ಶಿಬಿರ, ಪ್ಲಾಸ್ಟಿಕ್ ಸಂಗ್ರಹಣೆ, ರಕ್ತದಾನ, ಮ್ಯಾರಥಾನ್ ಓಟದ ಸ್ಪರ್ಧೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಮ್ಯಾರಥಾನ್ ಸ್ಪರ್ಧೆ: ಕಾರ್ಯಕ್ರಮಕ್ಕೂ ಮುನ್ನ ಸಮೀಪದ ಕಾಮಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಓಟ ಆರಂಭಿಸಿದ ಸ್ಪರ್ಧಾಳುಗಳು ಗುಂಡಾಲ್ ಜಲಾಶಯದ ರಸ್ತೆಯಲ್ಲಿ ಸಾಗಿ ಚನ್ನಾಲಿಂಗನಹಳ್ಳಿ, ಕಣ್ಣೂರು ಗ್ರಾಮದ ಮೂಲಕ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣ ತಲುಪಿದರು. ಕೊಂಗರಹಳ್ಳಿಯ ವಿಜಯ್ ಪ್ರಥಮ, ಬೈಲೂರಿನ ಸೂರ್ಯ ಹಾಗೂ ಕಾಮಗೆರೆಯ ಮಲ್ಲ ತೃತೀಯ ಬಹುಮಾನ ಪಡೆದರಲ್ಲದೇ ಇನ್ನು 7 ಜನರಿಗೂ ಬಹುಮಾನ ವಿತರಿಸಲಾಯಿತು.

    ಎಸಿಎಫ್ ಕೆ.ಸುರೇಶ್, ಆರ್‌ಎಫ್‌ಒಗಳಾದ ವಾಸು, ಪ್ರಮೋದ್ ಹಾಗೂ ಕೊಳ್ಳೇಗಾಲ, ಬೈಲೂರು ವನ್ಯಜೀವಿ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts