More

    ಜೇಬು ಖಾಲಿ ಹೇಗೆ ಬಿತ್ತಲಿ?

    ಬೆಳಗಾವಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಮಳೆ, ಬೆಳೆ, ಆದಾಯ ಇಲ್ಲದೆ ಕಂಗಾಲಾಗಿರುವ ರೈತರು ಹಿಂಗಾರು ಹಂಗಾಮಿನ ಬೆಳೆಗಳಾದರೂ ಕೈಹಿಡಿಯಲಿ ಎಂಬ ನಿರೀಕ್ಷೆಯಲ್ಲಿ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ, ಸುಡುತ್ತಿರುವ ಜೇಬು ಅವರನ್ನು ಕಂಗೆಡಿಸಿದ್ದು, ಪ್ರಕೃತಿ ಆಡಿಸುವ ಜೂಜಿನಲ್ಲಿ ಗೆಲ್ಲಲು ಸಜ್ಜಾಗದ್ದಾರೆ.

    ನಾಲ್ಕೈದು ದಿನಗಳಿಂದ ಹಿಂಗಾರು ಪೂರ್ವ ಮಳೆ ಸುರಿದಿದ್ದರಿಂದ ಬಿತ್ತನೆ ಚಟುವಟಿಕೆ ಪೂರ್ವ ತಯಾರಿಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಕೆಲ ಭಾಗಗಳಲ್ಲಿ ಜೋಳ, ಕಡಲೆ ಬಿತ್ತನೆ ಆರಂಭಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಹುತೇಕ ಬೆಳೆಗಳೆಲ್ಲ ಅನಾವೃಷ್ಟಿಯಿಂದ ಹಾನಿಯಾಗಿವೆ. ಆದರೂ, ರೈತರು ಮಳೆ ನಿರೀಕ್ಷೆ ಮೇಲೆ ಬಿತ್ತನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಈ ವರ್ಷ ಕೃಷಿ ಇಲಾಖೆಯು ಹಿಂಗಾರು ಹಂಗಾಮಿನ ಪೂರ್ವದಲ್ಲಿಯೇ ಮಳೆ ಪ್ರಾರಂಭವಾಗಿದ್ದರಿಂದ 3.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಮೆಕ್ಕೆಜೋಳ, ಕಡಲೆ, ಗೋಧಿ, ಕುಸುಬಿ, ಸೂರ್ಯಕಾಂತಿ ಸೇರಿ ಇನ್ನಿತರ ಬೆಳೆ ಬಿತ್ತನೆ ಗುರಿ ಹಾಕಿಕೊಂಡಿದೆ. ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಆಶ್ರಿತ ಪ್ರದೇಶವಿರುವುದರಿಂದ ಸುಮಾರು 29,000 ಕ್ವಿಂಟಾಲ್ ಬಿತ್ತನೆ ಬೀಜ, ಸುಮಾರು 28 ಸಾವಿರ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಮುಂಗಾರು ಹಂಗಾಮು ಪೂರ್ವದಲ್ಲಿ ಮಳೆ ಸುರಿದಿದ್ದರಿಂದ ಜಿಲ್ಲೆಯಲ್ಲಿ 7.10 ಲಕ್ಷ ಹೆಕ್ಟೇರ್ ಪೈಕಿ 6.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ಹೆಸರು, ಶೇಂಗಾ, ಭತ್ತ, ಅಲಸಂದಿ, ಸೋಯಾಅವರೆ, ಮೆಕ್ಕೆಜೋಳ, ಕಬ್ಬು ಸೇರಿ ಇತರ ಬೀಜ ಬಿತ್ತನೆಯಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಬಿತ್ತನೆಯಾಗಿದ್ದ ಶೇಂಗಾ, ಹೆಸರು, ಹತ್ತಿ ಇತರ ಬೆಳೆಗಳು ಕಾಯಿ ಕಟ್ಟುವ ಹಂತದಲ್ಲೇ ಬಾಡಿ ನಿಂತಿವೆ. ಭೂಮಿಯಲ್ಲಿ ತೇವಾಂಶ ಇಲ್ಲದ ಹಾನಿಯಾಗಿವೆ. ಈ ಕುರಿತು ಬೆಳೆಹಾನಿ ಸಮೀಕ್ಷೆ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಬಿತ್ತನೆಗಾಗಿ ಆರ್ಥಿಕ ಸಮಸ್ಯೆ: ಹಿಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಆರಂಭದಲ್ಲಿಯೇ ಜಾನುವಾರುಗಳಿಗೆ ಚರ್ಮಗಂಟು ರೋಗ ಉದ್ಬವಿಸಿದ್ದು, ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಉಂಟುಮಾಡಿದೆ. ವಿವಿಧ ಹಳ್ಳಿಗಳಲ್ಲಿ ಬಿತ್ತನೆಗಾಗಿ ಬಾಡಿಗೆ ಜೋಡೆತ್ತುಗಳು ಸಿಗುತ್ತಿಲ್ಲ. ಸಿಕ್ಕರೂ ದಿನಕ್ಕೆ 1,500 ರೂ. ಬಾಡಿಗೆ ದರವಿದೆ. ಮತ್ತೊಂದೆಡೆ ಟ್ರ್ಯಾಕ್ಟರ್ ಬಾಡಿಗೆ ಗಂಟೆಗೆ 800 ರಿಂದ 1000 ರೂ. ಬಾಡಿಗೆ ಹೆಚ್ಚಳವಾಗಿದೆ. ಬಿತ್ತನೆಗಾಗಿ ದಿನದ ಕೂಲಿ 300 ರಿಂದ 350 ರೂ. ಏರಿಕೆ ಕಂಡಿದೆ. ಅಲ್ಲದೆ, ಬಿತ್ತನೆ ಬೀಜಗಳಾದ ಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಬೀಜ ಕೆಜಿಗೆ ಸರಾಸರಿ 85 ರಿಂದ 110 ರೂ.ವರೆಗೆ ಮಾರಾಟವಾಗುತ್ತಿದೆ.

    ಕೈಸೇರಲಿಲ್ಲ ಪರಿಹಾರ ಹಣ

    ಜಿಲ್ಲೆಯಲ್ಲಿ 2022-23ನೇ ಸಾಲಿನ ಅವಧಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ 3.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 3.45 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿ ಪರಿಹಾರ ರೈತರ ಕೈ ಸೇರಲಿಲ್ಲ. ವರ್ಷಗಳು ಕಳೆದರೂ ವಿಮಾ ಕಂಪನಿಗಳು ಬೆಳೆಹಾನಿ ವಿಮೆ ಹಣ ನೀಡುತ್ತಿಲ್ಲ. ಜಿಲ್ಲಾಡಳಿತ ಮೂಲಕ ಸರ್ಕಾರಗಳಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.

    ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ಬರ ಎದುರಾಗಿದೆ. ಇದೀಗ ಜಿಲ್ಲೆಯ ಅಲ್ಲಲ್ಲಿ ಹಿಂಗಾರು ಪೂರ್ವ ಮಳೆ ಸುರಿಯುತ್ತಿರುವುದರಿಂದ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಈ ಬಾರಿ 3.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದ್ದೇವೆ. ಅಗತ್ಯ ಬೀಜ, ರಸಗೊಬ್ಬರ ಸಂಗ್ರಹಿಸಿಟ್ಟುಕೊಳ್ಳಲಾಗಿದೆ.
    | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts